ಆಲಮಟ್ಟಿ: ಪ್ರಧಾನಿ ಮೋದಿಯವರು ಸ್ವಚ್ಛ ಭಾರತ ಮಾಡಲು ಜನರಲ್ಲಿ ಜಾಗೃತಿ ಮೂಡಿಸಲು ಹಲವಾರು ಯೋಜನೆ ಹಾಕಿಕೊಂಡು ಅನುಷ್ಠಾನಗೊಳಿಸಿದ್ದರೂ ಕೂಡ ಪ್ರವಾಸಿ ತಾಣ ಆಲಮಟ್ಟಿಗೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇನ್ನೂ ಮರೀಚಿಕೆಯಾಗಿಯೇ ಉಳಿದಿವೆ ಎಂದು ನಾಗರಿಕರು ಆರೋಪಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಹಾಗೂ ಪ್ರವಾಸಿ ತಾಣ ಹೊಂದಿರುವ ಆಲಮಟ್ಟಿಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದಿಂದ ನಿರ್ಮಿಸಿರುವ ಶೌಚಾಲಯಗಳು ಸಂಬಂಧಿ ಸಿದ ಅಧಿ ಕಾರಿಗಳ ನಿರ್ಲಕ್ಷ್ಯದಿಂದ ಜನರಿಗೆ ನಿಲುಕದಂತಾಗಿವೆ. ಏಷ್ಯಾ ಖಂಡದ ಬೃಹತ್ ನೀರಾವರಿ ಯೋಜನೆಗಳಲ್ಲೊಂದಾಗಿರುವ ಯುಕೆಪಿಯ ಕೇಂದ್ರ ಸ್ಥಾನ, ಕೃಷ್ಣಾ ಭಾಗ್ಯಜಲ ನಿಗಮದ ಮುಖ್ಯ ಕಚೇರಿಗಳು, ತುಂಬಿ ನಿಂತಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ, ಸಂಗೀತ ನೃತ್ಯ ಕಾರಂಜಿ, ರಾಕ್ ಉದ್ಯಾನ, ಮೊಘಲ್ ಉದ್ಯಾನ, ಲವ-ಕುಶ ಉದ್ಯಾನ, ಗೋಪಾಲಕೃಷ್ಣ ಉದ್ಯಾನ ಹೀಗೆ ಹಲವಾರು ವಿಶೇಷತೆಗಳನ್ನು ಹೊಂದಿರುವ ಆಲಮಟ್ಟಿಗೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ರೈತರು ಆಗಮಿಸುತ್ತಾರೆ.
ನಾಗರಿಕರ ಹಾಗೂ ಪ್ರವಾಸಿಗರು ತಮ್ಮ ಜಲಬಾಧೆ ಹಾಗೂ ಮಲಬಾಧೆಗಳನ್ನು ತೀರಿಸಿಕೊಳ್ಳಲು ಆಲಮಟ್ಟಿಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಶೌಚಾಲಯ, ವಾಹನಗಳ ಪಾರ್ಕಿಂಗ್‌ನಲ್ಲಿ, ರಾಕ್ ಉದ್ಯಾನ, ಉದ್ಯಾನದ ಎದುರಿಗೆ, ಸಂಗೀತ ನೃತ್ಯ ಕಾರಂಜಿ ಬಳಿ, ಗೋಪಾಲಕೃಷ್ಣ ಉದ್ಯಾನ ಬಳಿ, ಲವ ಕುಶ ಉದ್ಯಾನದ ಬಳಿ ಹೀಗೆ ಅಗತ್ಯ ಸ್ಥಳಗಳಲ್ಲಿ ಕೃಷ್ಣಾ ಭಾಗ್ಯಜಲ ನಿಗಮದ ವತಿಯಿಂದ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
ಸಂಬಂಧಿಸಿದ ಅ ಧಿಕಾರಿಗಳು ಮಾತ್ರ ಮರಳಿಯೂ ನೋಡದಿರುವದರಿಂದ ಶೌಚಾಲಯಗಳು ಯಾವಾಗ ಬಾಗಿಲು ಮುಚ್ಚಿರುತ್ತವೆ? ಯಾವಾಗ ಬಾಗಿಲು ತೆರೆಯುತ್ತಿವೆ ಎನ್ನುವುದು ಕೂಡ ಫಲಕಗಳಾಗಲಿ ವಿವರಗಳಾಗಲಿ ಇಲ್ಲ ಎನ್ನುತ್ತಾರೆ ಕರ್ನಾಟಕ ರಣಧೀರ ಪಡೆಯ ಯುವ ಘಟಕದ ಅಧ್ಯಕ್ಷ ರಾಜಕುಮಾರ ಪಾತ್ರೋಟ.
ಶೌಚಾಲಯಗಳ ನಿರ್ವಹಣೆಗಾಗಿಯೇ ಕಳೆದ ಮೂರ್ನಾಲ್ಕು ವರ್ಷಗಳಿಂದ ಪ್ರತಿ ವರ್ಷವೂ ಲಕ್ಷಾಂತರ ರೂ. ನಿಗಮದ ವತಿಯಿಂದ ಗುತ್ತಿಗೆ ಪಡೆದ ಏಜೆನ್ಸಿಗೆ ಮಾತ್ರ ಪ್ರತಿ ಬಾರಿಯೂ ನೀಡುತ್ತಾರೆ. ಆದರೆ ಶೌಚಾಲಯಗಳಲ್ಲಿರುವ ಒಡೆದ ಕಮೋಡ್‌ಗಳು, ಮುರಿದ ಬಾಗಿಲುಗಳು, ನೀರಿಲ್ಲದೇ ಖಾಲಿಯಾಗಿರುವ ನೀರಿನ ಟಾಕಿಗಳು. ಈ ಕುರಿತು ಸಂಬಂಧಿಸಿದವರನ್ನು ಮಾತನಾಡಿಸಿದರೆ ಯಾರಲ್ಲಿಯೂ ಸಮರ್ಪಕವಾಗಿ ಉತ್ತರ ದೊರೆಯದಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಆಲಮಟ್ಟಿಯ ವಿವಿಧ ಉದ್ಯಾನಗಳನ್ನು ಹೊಂದಿರುವ ಆಲಮಟ್ಟಿಯನ್ನು ಕಣ್ತುಂಬಿಕೊಳ್ಳಲು ಆಗಮಿಸುವ ಪ್ರವಾಸಿಗರು ಜಲಬಾಧೆ ನಿವಾರಿಸಿಕೊಳ್ಳಬೇಕೆಂದರೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಶೌಚಾಲಯ ಬೆಳಗ್ಗೆ 8 ಗಂಟೆಯಾದರೂ ಇನ್ನೂ ಬಾಗಿಲು ಮುಚ್ಚಿರುತ್ತದೆ. ಇದರಿಂದ ಪ್ರಧಾನಮಂತ್ರಿಯವರ ಸ್ವಚ್ಛ ಭಾರತ ಎನ್ನುವ ಘೋಷಣೆ ಇಲ್ಲಿ ಘೋಷಣೆಗೆ ಮಾತ್ರ ಸೀಮಿತವಾದಂತಾಗಿದೆ.