Advertisement

ತಾಲೂಕಾದರೂ ಈಡೇರಿಲ್ಲ ಜನರ ಆಶಯ

03:01 PM Oct 05, 2019 | Naveen |

„ಶಂಕರ ಜಲ್ಲಿ
ಆಲಮಟ್ಟಿ: ಸರ್ಕಾರದ ಸೇವೆ ಜನರ ಮನೆ ಬಾಗಿಲಿಗೆ ಎನ್ನುವ ಧ್ಯೇಯೋದ್ದೇಶದಿಂದ ರಾಜ್ಯದಲ್ಲಿ ಜಗದೀಶ ಶೆಟ್ಟರ ನೇತೃತ್ವದ ಬಿಜೆಪಿ ಆಡಳಿತ ಅವಧಿಯಲ್ಲಿ ರಾಜ್ಯದಲ್ಲಿ 43 ನೂತನ ತಾಲೂಕು ಘೋಷಣೆ ಮಾಡಿದ್ದರೂ ಕೂಡ ಇನ್ನೂವರೆಗೆ ಪೂರ್ಣ ಪ್ರಮಾಣದಲ್ಲಿ ತಾಲೂಕು ರಚನೆಯಾಗದಿರುವುದು ಜನರ ಪರದಾಟ ಇನ್ನೂ ತಪ್ಪಿಲ್ಲ.

Advertisement

ವಿಜಯಪುರ ಜಿಲ್ಲೆ ವಿಭಜನೆಯಾಗಿ ಬಾಗಲಕೋಟೆ ಜಿಲ್ಲೆಯಾದ ನಂತರ ವಿಜಯಪುರ ಕೇವಲ 5 ತಾಲೂಕು ಒಳಗೊಂಡ ಜಿಲ್ಲೆಯಾಗಿತ್ತು. ಅದಕ್ಕೂ ಮುಂಚಿತವಾಗಿಯೇ ಟಿ.ಎಂ. ಹುಂಡೇಕಾರ, ವಾಸುದೇವರಾವ್‌, ಪಿ.ಸಿ. ಗದ್ದಿಗೌಡರ, ಡಾ| ಎಂ.ಬಿ.ಪ್ರಕಾಶ ನೇತೃತ್ವದ ಆಯೋಗಗಳು ತಾಲೂಕು ರಚನೆಯ ಪ್ರಾಮುಖ್ಯತೆ, ಅದರಿಂದ ಜನರಿಗೆ ಹಣ ಹಾಗೂ ಸಮಯದ ಉಳಿತಾಯ ಹೀಗೆ ಹಲವಾರು ಕಾರಣಗಳನ್ನು ಉಲ್ಲೇಖೀಸಿ ಹೊಸ ತಾಲೂಕು ಕೇಂದ್ರಗಳನ್ನು ರಚಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿದ್ದರು. ಜಗದೀಶ ಶೆಟ್ಟರ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಚುನಾವಣೆ ಹೊಸ್ತಿಲಲ್ಲಿ ಅಂದರೆ 2013ರಲ್ಲಿ ನೂತನ ತಾಲೂಕುಗಳನ್ನು ಘೋಷಣೆ ಮಾಡಲಾಯಿತು. ಇದರ ಪರಿಣಾಮ ವಿಜಯಪುರ ಜಿಲ್ಲೆಯಲ್ಲಿ ನೂತನವಾಗಿ ನಿಡಗುಂದಿ, ಕೊಲ್ಹಾರ, ಚಡಚಣ, ದೇವರಹಿಪ್ಪರಗಿ, ತಿಕೋಟಾ, ಬಬಲೇಶ್ವರ, ತಾಳಿಕೋಟೆ ನೂತನ ಕೇಂದ್ರಗಳಾಗಿ ಅಸ್ತಿತ್ವಕ್ಕೆ ಬಂದವು.

ಏಳು ವರ್ಷಗಳು ಕಳೆದರೂ ನೂತನ ತಾಲೂಕು ಕೇಂದ್ರಗಳಲ್ಲಿ ತಹಶೀಲ್ದಾರ್‌ ಕಚೇರಿಯೊಂದನ್ನು ಬಿಟ್ಟು ಇನ್ನುಳಿದ ತಾಲೂಕಾಡಳಿತ 32 ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡದೇ ಹಳೆ ತಾಲೂಕು ಕೇಂದ್ರಕ್ಕೆ ಅಲೆದಾಡುವ ಸ್ಥಿತಿ ಇನ್ನೂ ಇದೆ.

ನಂತರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದು ತಾಲೂಕು ರಚನೆಯಲ್ಲಿ ಇನ್ನೂ ಕೆಲವು ನೂತನ ತಾಲೂಕುಗಳೆಂದು ಘೋಷಣೆ ಮಾಡಿ 43 ಇದ್ದ ತಾಲೂಕುಗಳ ಸಂಖ್ಯೆ 50ಕ್ಕೆ ಏರಿಕೆಯಾದರೂ ಕೂಡ ಕೇವಲ ರೈತ ಸಂಪರ್ಕ ಕೇಂದ್ರಗಳು ಹಾಗೂ ತಹಶೀಲ್ದಾರ್‌ ಕಚೇರಿಗಳು
ಮಾತ್ರ ಕಾರ್ಯಾರಂಭ ಮಾಡುತ್ತಿವೆ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಿಂದ ವಿಜಯಪುರ ಜಿಲ್ಲೆಯ ಆಲಮೇಲ ಹೋಬಳಿಯನ್ನೂ ತಾಲೂಕು ಕೇಂದ್ರ ರಚನೆ ಮಾಡಲಾಗಿದೆ ಎಂದು ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಸಿ.ಮನಗೂಳಿಯವರು ಘೋಷಣೆ ಮಾಡಿದ್ದರಿಂದ ಈಗ ಜಿಲ್ಲೆಯಲ್ಲಿ ಒಟ್ಟು 13 ತಾಲೂಕು ಕೇಂದ್ರಗಳಾಗಿದ್ದರೂ ಕೂಡ ಎಲ್ಲ ತಾಲೂಕು ಕಚೇರಿಗಳನ್ನು ಹೊಂದಿರುವ ತಾಲೂಕು ಕೇಂದ್ರಗಳು ಕೇವಲ 5 ಮಾತ್ರ.

ಕ್ಷೇತ್ರ ಶಿಕ್ಷಣಾಧಿಕಾರಿ, ಕೃಷಿ ಮತ್ತು ತೋಟಗಾರಿಕೆ, ಖಜಾನೆ, ಉಪ ನೋಂದಣಾಧಿಕಾರಿ, ಕಾರ್ಯ ಮತ್ತು ಪಾಲನಾ ವಿದ್ಯುತ್‌ ಉಪ ವಿಭಾಗ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ತಾಲೂಕಾ ಪಂಚಾಯತ, ಪಶು ಸಂಗೋಪನಾ ಇಲಾಖೆ, ನ್ಯಾಯಾಲಯ ಅದರಂತೆ ಇನ್ನುಳಿದ ಎಲ್ಲ ತಾಲೂಕಾಡಳಿತ ಕಚೇರಿಗಳು ಹೊಸ ತಾಲೂಕು ಕೇಂದ್ರಗಳಲ್ಲಿ ಕಾರ್ಯಾರಂಭ ಆಗದೇ ಇರುವುದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next