ಆಲಮಟ್ಟಿ: ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ 4.50 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಜಲಾಶಯದಿಂದ ಶುಕ್ರವಾರ 4.50 ಲಕ್ಷ ಕ್ಯೂಸೆಕ್ ನೀರನ್ನು ಮುಂಜಾಗ್ರತಾ ಕ್ರಮವಾಗಿ ನದಿ ಪಾತ್ರಕ್ಕೆ ಹರಿಬಿಡಲಾಗುತ್ತಿದೆ. ಆಲಮಟ್ಟಿಯ ಸಂಗೀತ ನೃತ್ಯ ಕಾರಂಜಿ ಸೇರಿದಂತೆ ವಿವಿಧ ಉದ್ಯಾನಗಳಲ್ಲಿ ಹಾಗೂ ರೈತರ ಜಮೀನಿನಲ್ಲಿರುವ ಬೆಳೆಗಳು ಜಲಾವೃತವಾಗಿವೆ.
ಕೃಷ್ಣೆ ಉಗಮ ಸ್ಥಾನ ಮಹಾರಾಷ್ಟ್ರದ ಮಹಾಬಳೇಶ್ವರ, ಕೊಲ್ಲಾಪುರ, ಸೊಲ್ಲಾಪುರ, ಸಾಂಗ್ಲಿ, ಸತಾರಾ, ರಾಜ್ಯದ ಬೆಳಗಾವಿ ಜಿಲ್ಲೆ ಸೇರಿದಂತೆ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವ್ಯಾಪವಾಗಿ ಮಳೆ ಸುರಿದ ಪರಿಣಾಮವಾಗಿ ಕೃಷ್ಣೆಯ ಎರಡೂ ಬದಿಯಲ್ಲಿರುವ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ರೈತರ ಸಾವಿರಾರು ಎಕರೆ ಜಮೀನಿನಲ್ಲಿರುವ ಬೆಳೆಗಳು ಜಲಾವೃತವಾದೆ.
ಕೋಟ್ಯಂತರ ಹಾನಿ: ಸಂಗೀತ ನೃತ್ಯ ಕಾರಂಜಿಗೆ ಕ್ಲೀನಿಂಗ್ ಚೇಂಬರ್ ಮೂಲಕ ನೀರು ಒಳ ನುಗ್ಗಿದ್ದರಿಂದ ಸಂಗೀತ ನೃತ್ಯ ಕಾರಂಜಿಯ ಎಲೆಕ್ಟ್ರಿಕಲ್ ಪ್ಯಾನೆಲ್ ಬೋರ್ಡ್, ಸೌಂಡ್ ಸಿಸ್ಟೆಮ್ ಸೇರಿದಂತೆ ಹಲವಾರು ತಾಂತ್ರಿಕ ಸಾಮಾನುಗಳು ನೀರಿನಿಂದ ಜಲಾವೃತಗೊಂಡು ಹಾನಿಯಾಗಿವೆ.
ಇನ್ನು ಉದ್ಯಾನಗಳಿಗೆ ಜಲಾಶಯದಿಂದ ಎಷ್ಟೇ ನೀರು ಬಿಟ್ಟರೂ ಒಳಬಾರದು ಎಂದು ನಿರ್ಮಿಸಲಾಗಿರುವ ತಡೆಗೋಡೆ ಮೇಲ್ಭಾಗದಿಂದಲೂ ಜಲಾಶಯದ ನೀರು ಉದ್ಯಾನಗಳಲ್ಲಿ ನುಗ್ಗಿದ್ದರ ಪರಿಣಾಮ ಮೊಘಲ್ ಉದ್ಯಾನ, ಇಟಾಲಿಯನ್ ಉದ್ಯಾನ, ಲೇಷರ್ ಶೋ, ಎಂಡಿಎಫ್ ನರ್ಸರಿ, ಮುಸಿಕಲ್ ಫೌಂಟೇನ್ ಇಲೇಕ್ಟ್ರಿಕಲ್ ಪ್ಯಾನಲ್ ಬೋರ್ಡ್, ಸಂಗೀತ ನೃತ್ಯ ಕಾರಂಜಿಯ ಕೇಂದ್ರ ಸ್ಥಾನದಲ್ಲಿರುವ ರೌಂಡ್ ಫೌಂಟೇನ್ ಮುಳುಗಿದೆ. ಎಂಡಿ ಎಫ್ ನರ್ಸರಿಯಲ್ಲಿ ಬೆಳೆಸಲಾಗಿರುವ ಎಲ್ಲ ಸಸಿಗಳು, ಗಿಡಗಳು ಜಲಾಶಯದ ನೀರಿಗೆ ಕೊಚ್ಚಿಕೊಂಡು ಹೋಗಿವೆ. ಆಲಮಟ್ಟಿ ಜಲಾಶಯದ ಮುಂಭಾಗದಿಂದ 4.50 ಲಕ್ಷ ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರ ಬಿಟ್ಟಿರುವದರಿಂದ ಮುಂಭಾಗದಲ್ಲಿರುವ ಅರಳದಿನ್ನಿ, ಯಲಗೂರ, ಕಾಶಿನಕುಂಟಿ, ಯಲ್ಲಮ್ಮನ ಬೂದಿಹಾಳ, ಮಸೂತಿ, ಬಳಬಟ್ಟಿ, ಮುದೂರ, ಕಾಳಗಿ, ಗಂಗೂರ, ಕುಂಚನೂರ ಸೇರಿದಂತೆ ವಿಜಯಪುರ ಜಿಲ್ಲೆಯ ಸುಮಾರು 30 ಗ್ರಾಮಗಳ ರೈತರ ಸಾವಿರಾರು ಎಕರೆಯಲ್ಲಿ ಬೆಳೆಯಲಾಗಿರುವ ಬೆಳೆಗಳು ಜಲಾವೃತವಾಗಿವೆ.
ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ, ಧನ್ನೂರ, ಕಟಗೂರ, ಗಂಜಿಹಾಳ, ಮನಹಳ್ಳಿ, ಮಂಕಣಿ, ನಾಯನೇಗಲಿ, ಹೊಸೂರ, ನಾಗಸಂಪಗಿ, ನಾಗರಾಳ ಸೇರಿದಂತೆ ಸುಮಾರು 45 ಗ್ರಾಮಗಳ ರೈತರ ಜಮೀನಿನಲ್ಲಿರುವ ಬೆಳೆಗಳು ಜಲಾವೃತವಾಗಿವೆ.
ಅತಿ ಹೆಚ್ಚು ನೀರು: ಆಲಮಟ್ಟಿಯಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯ ನಿರ್ಮಾಣವಾದಂದಿನಿಂದ ಇಲ್ಲಿವರೆಗೆ ಇಷ್ಟೊಂದು ಪ್ರಮಾಣದಲ್ಲಿ ಜಲಾಶಯದಿಂದ 4.50 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಟ್ಟಿರುವ ಉದಾಹರಣೆಯಿಲ್ಲ. ಇದೇ ಪ್ರಥಮ ಬಾರಿಗೆ ಇಷ್ಟೊಂದು ನೀರನ್ನು ಬಿಡಲಾಗಿದೆ. ಇನ್ನು 2005ರಲ್ಲಿ ಪ್ರವಾಹದ ವೇಳೆಯಲ್ಲಿ 4.45 ಲಕ್ಷ ಕ್ಯೂಸೆಕ್ ನೀರನ್ನು ಬಿಟ್ಟಿರುವುದೇ ದಾಖಲೆಯಾಗಿತ್ತು. ಈ ಬಾರಿ ಅದನ್ನು ಮೀರಿ ಹೆಚ್ಚಿಗೆ ನೀರು ಬಿಡಲಾಗಿದೆಯಲ್ಲದೇ ಜಲಾಶಯಕ್ಕೆ ಒಳಹರಿವು ಹೆಚ್ಚಾದರೆ ಜಲಾಶಯದಿಂದ ಇನ್ನಷ್ಟು ನೀರನ್ನು ಬಿಡುವ ಸಂಭವ ಹೆಚ್ಚಾಗಿದೆ.
519.60 ಮೀ. ಎತ್ತರದ ಜಲಾಶಯವು 123.081 ಟಿಎಂಸಿ ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಶುಕ್ರವಾರ 517.10 ಮೀ. ಎತ್ತರದಲ್ಲಿ 85 ಟಿಎಂಸಿ ಅಡಿ ಸಂಗ್ರಹವಾಗಿದ್ದು, ಶುಕ್ರವಾರ ಸಂಜೆ ಜಲಾಶಯಕ್ಕೆ 4.50 ಲಕ್ಷ ಕ್ಯೂಸೆಕ್ ಒಳ ಹರಿವಿದ್ದು, ಜಲಾಶಯದಿಂದ 26 ಗೇಟುಗಳು ಹಾಗೂ ಕೆಪಿಸಿಎಲ್ ಮೂಲಕವಾಗಿ ನದಿ ಪಾತ್ರಕ್ಕೆ 4.50 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.