ಆಲಮಟ್ಟಿ: ಆಷಾಢ ಮಾಸದ ಕೊನೆ ವಾರದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯ ತುಂಬಿ ಹಾಲಿನ ನೊರೆಯಂತೆ ಧುಮ್ಮಿಕ್ಕುತ್ತಿದ್ದರೆ ಗಾಳಿಯಲ್ಲಿ ಹಾರುವ ನೀರಿನ ಕಣಗಳಲ್ಲಿ ಕಾಣುವ ಕಾಮನಬಿಲ್ಲಿನ ದೃಶ್ಯ ಜನರನ್ನು ಆಕರ್ಷಿಸುತ್ತಿದ್ದು ಪ್ರವಾಸಿಗರ ದಂಡು ಹರಿದು ಬರುತ್ತಿದೆ.
ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಲಾಲ್ ಬಹಾದ್ದೂರ ಶಾಸ್ತ್ರಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಜಲಾಶಯದ ಎಲ್ಲ 26 ಗೇಟುಗಳಿಂದ ನೀರು ಹೊರ ಬಿಡಲಾಗುತ್ತಿದೆ. ನೀರು ಹಾಲಿನ ನೊರೆಯಂತೆ ದುಮ್ಮಿಕ್ಕುವ ದೃಶ್ಯ ಹಾಗೂ ಭೋರ್ಗರೆಯುವ ಸದ್ದು, ಮೀನು ಹಿಡಿಯಲು ಹಾರಾಡುತ್ತಿರುವ ಪಕ್ಷಿಗಳು. ಹೀಗೆ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯ ನೀರಿನಲ್ಲಿ ಕಾಣುವ ಮನಮೋಹಕ ದೃಶ್ಯಗಳು ಪ್ರವಾಸಿಗರನ್ನು ಮೈಮರೆಯುವಂತೆ ಮಾಡಿವೆ.
ಶಾಸ್ತ್ರಿ ಜಲಾಶಯ ಹಿನ್ನೀರು ವ್ಯಾಪಕವಾಗಿ ಹರಡಿದ್ದರಿಂದ ಅದರಿಂದ ತೇಲಿ ಬರುವ ಅಲೆಗಳು, ದೂರದಲ್ಲಿ ಕಾಣುವ ಸುತ್ತಲೂ ಜಲಾವೃತವಾಗಿ ಹಚ್ಚ ಹಸುರಿನಿಂದ ನಡುಗಡ್ಡೆಯಂತೆ ಕಂಗೊಳಿಸುತ್ತಿರುವ ಮೂಲ ಆಲಮಟ್ಟಿ, ಚಿಮ್ಮಲಗಿಯ ಬಾವಾಸಾಬನ ಗುಡ್ಡ, ಕಣ್ಣು ಹರಿಸಿದಷ್ಟು ಉದ್ದವಾಗಿ ಕಾಣುವ ನೀರು, ಜಲಾಶಯದ ಬಲ ಭಾಗಗಳಲ್ಲಿರುವ ನಿತ್ಯ ಹರಿದ್ವರ್ಣದಂತೆ ಹಸಿರಾಗಿ ಕಂಗೊಳಿಸುವ ಗುಡ್ಡಗಾಡು ಪ್ರದೇಶ. ಅಲ್ಲಲ್ಲಿ ಕಾಣ ಸಿಗುವ ನವಿಲುಗಳ ಹಿಂಡು, ಗುಂಪು ಗುಂಪಾಗಿ ಹಿನ್ನೀರಿನ ಮೇಲೆ ಹಾರಾಡುವ ವಿವಿಧ ಬಗೆಯ ಪಕ್ಷಿಗಳು ಜನರ ಗಮನವನ್ನು ತನ್ನತ್ತ ಸೆಳೆಯುತ್ತಿವೆ.
ದಂಡಿಯಾತ್ರೆ: ಸ್ವಾತಂತ್ರ್ಯ ಹೋರಾಟದಲ್ಲಿ ವಿಶೇಷ ಗಮನ ಸೆಳೆದಿರುವ ಮಹಾತ್ಮ ಗಾಂಧಿಧೀಜಿಯವರ ನೇತೃತ್ವದ ದಂಡಿ ಯಾತ್ರೆ ಅಥವಾ ಉಪ್ಪಿನ ಸತ್ಯಾಗ್ರಹ ನೆನಪಿಸುವ ಕಲಾಕೃತಿಗಳು ಸ್ವಾತಂತ್ರ್ಯ ಹೋರಾಟದ ಬಗ್ಗೆ ಯುವ ಪೀಳಿಗೆಗೆ ಅರ್ಥವಾಗುವಂತೆ ಚಿತ್ರಿಸಲಾಗಿದೆ.
ರಾಕ್ ಉದ್ಯಾನದಲ್ಲಿ ಕಾಡು ಪ್ರಾಣಿ, ಚಿಟ್ಟೆ, ಪಕ್ಷಿಗಳು, ಗ್ರಾಮೀಣ ಜಾತ್ರೆ ಸೊಗಡು, ಮಕ್ಕಳಿಗಾಗಿಯೇ ನಿರ್ಮಿಸಿರುವ ಮಕ್ಕಳ ವನ, ಉದ್ಯಾನ ವೀಕ್ಷಿಸಲು ಪುಟಾಣಿ ರೈಲು, ಆದಿವಾಸಿಗಳ ಜನಜೀವನ, ಸೂರ್ಯ ಪಾರ್ಕ್‌ನಲ್ಲಿ ಉದಯಿಸುತ್ತಿರುವ ಸೂರ್ಯನ ಕಿರಣಗಳು ಹರಡಿರುವ ದೃಶ್ಯ, ಭಾರತ ನಕ್ಷೆ, ದೇಶದಲ್ಲಿ ವಿವಿಧ ಭಾಷೆ, ಜನಾಂಗ, ಧರ್ಮ ಹೀಗೆ ಹಲವಾರು ರೀತಿಯಲ್ಲಿ ಭಿನ್ನತೆಯಿದ್ದರೂ ಭಾರತೀಯತೆ ಒಂದೇ ಎಂದು ಸಾರುವ ಸರ್ವ ಜನಾಂಗದ ಶಾಂತಿ ತೋಟ ಎನ್ನುವ ಕವಿವಾಣಿಯಂತೆ ಎಲ್ಲರೂ ರಾಷ್ಟ್ರ ರಕ್ಷಣೆಗಾಗಿ ನಿಂತಿರುವ ದೃಶ್ಯ, ರಾಷ್ಟ್ರೀಯ ಪ್ರಾಣಿ, ಪಕ್ಷಿ, ಹಣ್ಣು, ಹೂವು, ಬೇಟೆಯಾಡುತ್ತಿರುವ ಮೊಸಳೆ ಹೀಗೆ ಎಲ್ಲ ಬಗೆಯ ಮಾಹಿತಿ ನೀಡುವ ಪ್ರತ್ಯೇಕ ಸೆಕ್ಟರ್ ನಿರ್ಮಿಸಿದ್ದರಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುವಂತಾಗಿದೆ.
ಇನ್ನು ರಾಕ್ ಉದ್ಯಾನವನ್ನು ಪ್ರವೇಶಿಸಿದಾಗ ಮೊದಲು ಸಿಲ್ವರ್ ಲೇಕ್ ಸಿಗುತ್ತದೆ. ಇದರಲ್ಲಿ ವಿವಿಧ ಬಗೆ ದೋಣಿಗಳಿದ್ದು ಅವುಗಳಲ್ಲಿ ಕುಳಿತು ದೋಣಿ ವಿಹಾರ ಮಾಡುವುದು ಮತ್ತಷ್ಟು ಖುಷಿ ನೀಡುತ್ತದೆ. ಅಲ್ಲದೇ ಜಾರ್ಬಿನಲ್ಲಿ ವಾಕ್ ಮಾಡಿದಾಗ ನೀರಿನಲ್ಲಿ ನಡೆಯುವ ಅನುಭವವು ನಿಜಕ್ಕೂ ರೋಚಕವಾಗಿರುತ್ತದೆ.
ಗೋಪಾಲ ಕೃಷ್ಣ ಉದ್ಯಾನದಲ್ಲಿ ಗೋಪಾಲ ಕೃಷ್ಣನ ಬಾಲ ಲೀಲೆಗಳ ಒಟ್ಟು ಚಿತ್ರಣ ಕಾಣಬಹುದು. ಲವಕುಶ ಉದ್ಯಾನದಲ್ಲಿ ಅಶ್ವಮೇಧಯಾಗದ ಕುದುರೆ ಕಟ್ಟಿ ಹಾಕಿದ ಲವ-ಕುಶ ಸಹೋದರರು ಅದರ ಕಾವಲಿಗೆ ಬಂದವರನ್ನೆಲ್ಲ ಸೋಲಿಸಿ ಅಟ್ಟಿರುವ ದೃಶ್ಯ ಹಾಗೂ ನಂತರ ನಡೆಯುವ ರಾಮಚಂದ್ರ ಹಾಗೂ ಲವಕುಶರ ನಡುವಿನ ಯುದ್ಧದ ದೃಶ್ಯ, ಅಲುಗಾಡುವ ಹಸಿರು ಗೋಡೆ ಹೀಗೆ ಹಲವಾರು ವಿಶೇಷತೆಗಳನ್ನು ಹೊಂದಿದ್ದು ಪ್ರವಾಸಿಗರು ಆಲಮಟ್ಟಿಗೆ ಬರುವಂತಾಗಿದೆ.
ಆಲಮಟ್ಟಿ ರೈಲ್ವೆ ಸಂಪರ್ಕ, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಸಂಪರ್ಕ ರಸ್ತೆ ಹೀಗೆ ಎಲ್ಲ ಬಗೆಯ ಸಾರಿಗೆ ಸಂಪರ್ಕ ಹೊಂದಿದೆ. ಪ್ರವಾಸಿಗರಿಗೆ ಅಗತ್ಯವಾಗಿ ಬೇಕಾಗುವ ಎಲ್ಲ ಮೂಲಭೂತ ಸೌಲಭ್ಯದಿಂದ ನಿತ್ಯ ಬೇರೆ ಬೇರೆ ರಾಜ್ಯಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ.