ಆಲಮಟ್ಟಿ: ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿದ್ದ ಕೆಲ ಕಚೇರಿಗಳನ್ನು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಸ್ಥಳಾಂತರಗೊಳಿಸಿ ಸರ್ಕಾರ ಆದೇಶ ನೀಡಿದ್ದರೂ ಆಲಮಟ್ಟಿಗೆ ಬರಬೇಕಿದ್ದ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕರ ಕಚೇರಿ ಬೆಂಗಳೂರಿನಲ್ಲೇ ಉಳಿದಿರುವುದು ಜನತೆ ಆಕ್ರೋಶಕ್ಕೆ ಕಾರಣವಾಗಿದೆ.
Advertisement
ಅಬಿವೃದ್ಧಿಯ ದೃಷ್ಟಿಯಿಂದ ದಕ್ಷಿಣ ಭಾಗದಲ್ಲಿಯೇ ಕೇಂದ್ರೀಕೃತವಾಗಿರುವ ಕಚೇರಿಗಳಲ್ಲಿ ಕೆಲವು ಕಚೇರಿಗಳನ್ನು ಉತ್ತರ ಕರ್ನಾಟಕ ಭಾಗಕ್ಕೂ ಸ್ಥಳಾಂತರಿಸಬೇಕು ಎಂದು ಸ್ವತಃ ಮುಖ್ಯಮಂತ್ರಿಗಳೇ ಅಧಿವೇಶನದಲ್ಲಿ ಘೋಷಿಸಿ 2019ರ ಏ.1ರಿಂದ ಕಾರ್ಯಾರಂಭ ಮಾಡಲು 10.1.2019ರಂದೇ ಆದೇಶಿಸಿದ್ದರು. ಸಿಎಂ ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿರುವ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ಕೃಷ್ಣಾಭಾಗ್ಯ ಜಲನಿಗಮದ ಆಡಳಿತ ಕಚೇರಿಯನ್ನು ನೋಂದಾಯಿತ ಆಡಳಿತ ಕಚೇರಿ ಆಲಮಟ್ಟಿಗೆ ಹಾಗೂ ಕರ್ನಾಟಕ ನೀರಾವರಿ ನಿಗಮವನ್ನು ದಾವಣಗೆರೆಗೆ ಸೇರಿದಂತೆ ಸೇರಿ ಒಟ್ಟು 9 ಇಲಾಖೆಗಳಿಗೆ ಸಂಬಂಧಿಸಿದ ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸಿ 2019ರ ಏ.1ರಂದು ಜಾರಿಗೆ ಬರುತ್ತದೆ ಎಂದು ತಿಳಿಸಿದ್ದರು.
Related Articles
Advertisement
ಸೌಲಭ್ಯ ಇದ್ದರೂ ಬಾರದ ಕಚೇರಿ: ಕೋಟ್ಯಂತರ ರೂ. ವ್ಯಯ ಮಾಡಿ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಆಡಳಿತಾತ್ಮಕ ಹಾಗೂ ಆರ್ಥಿಕ ವಿಭಾಗದ ಇಬ್ಬರು ವ್ಯವಸ್ಥಾಪಕ ನಿರ್ದೇಶಕರು, ತಾಂತ್ರಿಕ ಸಿಬ್ಬಂದಿ ಹೀಗೆ ಎಲ್ಲ ಅಧಿಕಾರಿಗಳಿಗೆ ಅನುಕೂಲವಾಗುವಂತೆ ಬೃಹತ್ ಕಟ್ಟಡ ನಿರ್ಮಿಸಲಾಗಿದೆ. ವ್ಯವಸ್ಥಾಪಕ ನಿರ್ದೇಶಕರು ಸೇರಿ ಎಲ್ಲ ಅಧಿಕಾರಿಗಳು ವಾಸಿಸಲು ಸುಸಜ್ಜಿತ ಸೌಲಭ್ಯ ಹೊಂದಿರುವ ಬಂಗಲೆಗಳು ಇವೆ ಆದರಿಂದು ಭೂತ ಬಂಗಲೆಗಳಂತೆ ಬಿಕೋ ಎನ್ನುತ್ತಿವೆ.
ಈ ಕಚೇರಿ ವ್ಯಾಪ್ತಿಯಲ್ಲಿ ಆಲಮಟ್ಟಿ, ನಾರಾಯಣಪುರ, ಭೀಮರಾಯನಗುಡಿ, ರಾಂಪೂರ ಹೀಗೆ ನಾಲ್ಕು ವಲಯಗಳ ಸುಮಾರು 4 ಸಾವಿರ ಜನ ಸಿಬ್ಬಂದಿ, ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಯುಕೆಪಿಯ ಎಲ್ಲ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ರಾಜ್ಯ ಸರ್ಕಾರವು ಹೇಳುತ್ತದೆಯಾದರೂ ಅಧಿಕಾರಿಗಳು ಸ್ಥಾನಿಕವಾಗಿರದೇ ಬೆಂಗಳೂರಿನಲ್ಲಿ ಕುಳಿತು ಆಡಳಿತ ನಡೆಸುವುದರಿಂದ ಸಮಸ್ಯೆಯಾಗಿದೆ. ಉತ್ತರ ಕರ್ನಾಟಕ ಜೀವನಾಡಿ ಆಗಿರುವ ಕೃಷ್ಣೆಯ ನೀರನ್ನು ಬಳಸಿಕೊಳ್ಳುವುದು ಯಾವಾಗ ಎಂಬ ಪ್ರಶ್ನೆ ಬಾಗಲಕೋಟ, ವಿಜಯಪುರ, ಯಾದಗಿರಿ, ರಾಯಚೂರು ಮತ್ತಿತರ ಜಿಲ್ಲೆಗಳ ರೈತರನ್ನು ಕಾಡುತ್ತಿದೆ.