Advertisement

ಬಸಿ ನೀರಿನಿಂದ ಜನ ಕಂಗಾಲು

03:10 PM Oct 23, 2019 | Naveen |

ಆಲಮಟ್ಟಿ: ಪಟ್ಟಣದಲ್ಲಿ ವ್ಯಾಪಕವಾಗಿ ಮಳೆ ಸುರಿದಿರುವ ಪರಿಣಾಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಸುಮಾರು 20 ಮನೆಗಳಲ್ಲಿ ಭೂಮಿಯಿಂದ ನೀರು ಚಿಮ್ಮುತ್ತಿದ್ದು ಆತಂಕ್ಕೆ ಕಾರಣವಾಗಿದೆ.

Advertisement

ನೀರಿನ ಬುಗ್ಗೆಗಳು ಎಲ್ಲೆಂದರಲ್ಲಿ ಏಳುತ್ತಿದ್ದು ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಪ್ರತಿ ಬಾರಿಯೂ ಹೆಚ್ಚು ಮಳೆಯಾದ ವೇಳೆ ಪಟ್ಟಣದ ಸುಮಾರು 20 ಮನೆಗಳಲ್ಲಿಯೂ ನೀರು ಚಿಮ್ಮುತ್ತದೆ. ಅಲ್ಲದೇ ಸುಮಾರು 280 ವಿದ್ಯಾರ್ಥಿಗಳಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೀರು ಚಿಮ್ಮುತ್ತದೆ.

ಇದನ್ನು ತಡೆಗಟ್ಟಲು ಕೃಷ್ಣಾ ಭಾಗ್ಯಜಲ ನಿಗಮದ ಅಣೆಕಟ್ಟು ವಿಭಾಗದ ಸಮೀಪದ ತಗ್ಗು ಪ್ರದೇಶ ಹಾಗೂ ತೋಟಗಾರಿಕೆ ಇಲಾಖೆ ಕೆರೆ ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಿಸಬೇಕು ಹಾಗೂ ಎತ್ತರದಲ್ಲಿ ಶಾಲೆ ಕಟ್ಟಡ ನಿರ್ಮಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಕಳೆದ ಶುಕ್ರವಾದಿಂದ ಸುರಿದ ಮಳೆಗೆ ಶಾಲೆಯ ಏಳು ಕೋಣೆಗಳು ಸೋರುತ್ತಿವೆ. ಇದರಿಂದ ಮುಂಜಾಗೃತಾ ಕ್ರಮವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಆದೇಶದಂತೆ ಶಾಲೆಗೆ ಎರಡು ದಿನಗಳ ಕಾಲ ರಜೆ ಘೋಷಿಸಲಾಗಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತಾಪಂ ಸದಸ್ಯ ಮಲ್ಲು ರಾಠೊಡ ಹಾಗೂ ಗ್ರಾಪಂ ಅಧ್ಯಕ್ಷೆ ಸೈದಮ್ಮ ಭೇಟಿ ನೀಡಿ, ಶಾಸಕರು ತಮ್ಮ ಅನುದಾನದಡಿ ನಾಲ್ಕು ಕೋಣೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಆದರೆ ಈಗ ಮತ್ತೆ ನಾಲ್ಕು ಕೋಣೆಗಳು ಅತಿ ಅವಶ್ಯವಾಗಿದ್ದು ಇದರ ಬಗ್ಗೆ ಶಾಸಕರಿಗೆ ಮನವಿ ಮಾಡಲಾಗುವದು ಎಂದು ತಿಳಿಸಿದರು.

Advertisement

ಭೇಟಿ: ಸರ್ಕಾರಿ ಪ್ರಾಥಮಿಕ ಪಕ್ಕದಲ್ಲಿ ನಿರ್ಮಿಸುತ್ತಿರುವ ಚರಂಡಿ ಉಸ್ತುವಾರಿ ನಿರ್ವಹಿಸುತ್ತಿರುವ ಆಲಮಟ್ಟಿ ಅಣೆಕಟ್ಟು ವಿಭಾಗ ವ್ಯಾಪ್ತಿಯ ಎಫ್‌ಆರ್‌ಎಲ್‌ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ವಿ.ಜಿ. ಮಿಕ್ಕಲ್‌ ಭೇಟಿ ನೀಡಿದರು. ಶಾಲೆ ಗೋಡೆಯ ಅಡಿಪಾಯದಿಂದ ನೀರು ತಡೆಗಟ್ಟಲು ನಮ್ಮಿಂದಾಗದು. ಆದರೆ ಶಾಲೆ ಮುಂಭಾಗದ ನಿವಾಸಿಗಳ ಮನೆಗಳ ಮುಂದೆ ಬರುತ್ತಿರುವ ನೀರನ್ನು ಚರಂಡಿಯಲ್ಲಿ ಸೇರ್ಪಡೆಗೊಳಿಸಲು ಅಗತ್ಯ ಕ್ರಮ ಕೈಗೊಂಡು ಹೊರಗಿನ ನೀರು ಶಾಲೆ ಆವರಣದೊಳಕ್ಕೆ ಬಾರದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಸುರೇಶ ವಡ್ಡರ, ವೆಂಕಟೇಶ ವಡ್ಡರ, ಪ್ರಕಾಶ ಚವ್ಹಾಣ, ಮುಖ್ಯೋಪಾಧ್ಯಾಯ ಎನ್‌.ಎಸ್‌. ಕಾಳಗಿ, ಎನ್‌.ಬಿ. ಭಜಂತ್ರಿ, ಎಲ್‌.ಸಿ. ಚಲವಾದಿ, ಸಮೂಹ ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ವಂದಗನೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next