Advertisement

ಜೀವ ಭಯದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು

04:21 PM Dec 02, 2019 | Naveen |

„ಶಂಕರ ಜಲ್ಲಿ
ಆಲಮಟ್ಟಿ:
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡಿಪಾಯದಿಂದ ಮಳೆ ನಿಂತು ತಿಂಗಳಾದರೂ ಕೂಡ ಇನ್ನೂ ನೀರು ಬರುತ್ತಿರುವುದರಿಂದ ಪಾಲಕರು ಹಾಗೂ ಶಿಕ್ಷಕರು ಜೀವ ಭಯದಲ್ಲಿ ನರಳುವಂತಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ಶೈಕ್ಷಣಿಕ ಅಭಿವೃದ್ಧಿಗಾಗಿ ಅವೈಜ್ಞಾನಿಕ 1980ರ ಸುಮಾರಿಗೆ ಆಲಮಟ್ಟಿಯಲ್ಲಿ ನೂತನವಾಗಿ ಶಾಲಾ ಕೊಠಡಿಗಳ ನಿರ್ಮಿಸಿದ್ದು ಶಾಲೆಗಳ ಅಡಿಪಾಯದಿಂದ ಮಳೆಗಾಲದಲ್ಲಿ ನೀರು ಬರುವುದು ವಾಡಿಕೆಯಾಗಿತ್ತು. ಆದರೆ ಮಳೆ ಪ್ರಮಾಣ ಕಡಿಮೆಯಾದ ನಂತರ ನೀರು ಬರುವುದು ನಿಲ್ಲುತ್ತಿತ್ತು.

Advertisement

ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿರುವುದರಿಂದಲೋ ಆಲಮಟ್ಟಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯದಲ್ಲಿ ಹೆಚ್ಚಿನ ಅವ ಧಿಯಲ್ಲಿ ಗರಿಷ್ಠ ನೀರು ಸಂಗ್ರಹವಾಗಿದ್ದರಿಂದಲೋ ಇನ್ನೂವರೆಗೆ ನೀರು ಮಾತ್ರ ಬರುವುದು ನಿಂತಿಲ್ಲ.

ಡಿಸಿ ಭೇಟಿ: 2019ರ ಅಕ್ಟೋಬರ್‌ 24ರಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಅವರು ವಿವಿಧ ಅಧಿಕಾರಿಗಳೊಂದಿಗೆ ಆಲಮಟ್ಟಿಗೆ ಭೇಟಿ ನೀಡಿ ಭೂಮಿಯಿಂದ ನೀರೇಳುತ್ತಿರುವದನ್ನು ಹಾಗೂ ಪುನರ್ವಸತಿ ಕೇಂದ್ರದಲ್ಲಿ ನಿರ್ಮಿಸಿಕೊಂಡಿರುವ ಸಂತ್ರಸ್ತರ ಮನೆಗಳಲ್ಲಿ ನೀರು ಜಿನುಗುತ್ತಿರುವದನ್ನು ವೀಕ್ಷಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲೆ ಅಡಿಪಾಯದಿಂದ ನೀರು ಜಿನುಗುತ್ತಿರುವ ಹಾಗೂ ಶಾಲೆಗಳ ಕೊಠಡಿಗಳು ಸೋರುತ್ತಿರುವುದನ್ನು ಪರಿಶೀಲಿಸಿದ್ದರು.

ಜಿಲ್ಲಾಧಿಕಾರಿಗಳು ಪುನರ್ವಸತಿ ಕೇಂದ್ರದ ಸಂತ್ರಸ್ತರ ಮನೆಗಳಲ್ಲಿ ಪ್ರತಿ ಬಾರಿಯೂ ನೀರು ಚಿಮ್ಮುವುದನ್ನು ತಪ್ಪಿಸಲು ಆಲಮಟ್ಟಿ ಅಣೆಕಟ್ಟು ವಿಭಾಗದ ಕಾರ್ಯಪಾಲಕ ಅಭಿಯಂತರ ಡಿ.ಬಸವರಾಜು ಅವರೊಂದಿಗೆ ಚರ್ಚಿಸಿ ಶಾಲೆಯ ಅಡಿಪಾಯದಿಂದ ನೀರು ಬರುವದು ಹಾಗೂ ಕೊಠಡಿಗಳ ಸೋರುವಿಕೆ ದುರಸ್ತಿಗೆ ಅಂದಾಜು ಪತ್ರಿಕೆ ತಯಾರಿಸಿ ಕಾರ್ಯೋನ್ಮುಖರಾಗುವಂತೆ ಸೂಚಿಸಿದ್ದರು.

ಇನ್ನುಳಿದಂತೆ ಪುನರ್ವಸತಿ ಕೇಂದ್ರದ ಸಂತ್ರಸ್ತರ ಮನೆಗಳಲ್ಲಿ ಜಿನುಗುತ್ತಿರುವ ನೀರನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಪುನರ್ವಸತಿ ಇಲಾಖೆ ಅಧಿ ಕಾರಿಗಳಿಗೆ ಮಾಹಿತಿ ನೀಡಿ ಅಗತ್ಯ ಕ್ರಮ ಕೈಗೊಳ್ಳಲು ಕಾರ್ಯಪಾಲಕ ಅಭಿಯಂತರರಿಗೆ ತಿಳಿಸಿದ್ದರಲ್ಲದೇ ಅಗತ್ಯವಾದಲ್ಲಿ ತಮ್ಮನ್ನು ಸಂಪರ್ಕಿಸಲು ಸೂಚಿಸಿದ್ದರು.

Advertisement

ಶಾಸ್ತ್ರಿ ಜಲಾಶಯ ನಿರ್ಮಾಣಕ್ಕೆ ಪ್ರಥಮವಾಗಿ ಆಲಮಟ್ಟಿಯನ್ನು ಸ್ಥಳಾಂತರಗೊಳಿಸಿ ಅವೈಜ್ಞಾನಿಕವಾಗಿ ಪುನರ್ವಸತಿ ಕೇಂದ್ರವನ್ನು ನಿರ್ಮಿಸಿದ್ದರ ಪರಿಣಾಮ ಪ್ರತಿ ಬಾರಿ ಮಳೆಗಾಲದಲ್ಲಿ ತೊಂದರೆ ತಪ್ಪಿಲ್ಲ ಎನ್ನುತ್ತಾರೆ ಸಂತ್ರಸ್ತ ಹಾಗೂ ಗ್ರಾಪಂ ಉಪಾಧ್ಯಕ್ಷ ಬಿ.ಜೆ.ನದಾಫ್‌.

ಆಲಮಟ್ಟಿ ಸರ್ಕಾರಿ ಶಾಲೆಯ ಬಹುತೇಕ ಕೊಠಡಿಗಳ ಅಡಿಪಾಯದಿಂದ ನೀರು ಬರುತ್ತಿರುವದನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಆ ಕುರಿತು ಡಿಡಿಪಿಐ ಕಚೇರಿಗೆ ಮಾಹಿತಿ ಕಳಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಯಿಲ್ಲ.
.ವಿ.ಸಿ. ಜುಳಜುಳಿ
ಶಿಕ್ಷಣಸಂಯೋಜಕರು, ಬಸವನಬಾಗೇವಾಡಿ

ಶಾಲೆ ಅವ್ಯವಸ್ಥೆಯ ಕುರಿತು ಶಾಸಕ ಶಿವಾನಂದ ಪಾಟೀಲರ ಗಮನಕ್ಕೆ ತರಲಾಗಿದ್ದು, ಶಾಸಕರ ಕ್ಷೇತ್ರ ಅಭಿವೃದ್ಧಿ ಅನುದಾನದಡಿ 8 ಕೋಣೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.
.ಮಲ್ಲು ರಾಠೊಡ,
ತಾಪಂ ಸದಸ್ಯ

ಸರ್ಕಾರಿ ಶಾಲೆಯ ಸೋರುವಿಕೆ, ಅಡಿಪಾಯದಿಂದ ನೀರು ಜಿನುಗುತ್ತಿರುವದನ್ನು ತಡೆಗಟ್ಟಲು ಹಾಗೂ ಶಾಲೆಗೆ ಕಾಂಪೌಂಡ್‌ ನಿರ್ಮಾಣ, ಶಾಲೆ ಮೈದಾನ ಎತ್ತರಿಸಲು ಅಂದಾಜು ಪತ್ರಿಕೆ ತಯಾರಿಸಲು ಜಿಲ್ಲಾಧಿಕಾರಿಗಳ ಆದೇಶದಂತೆ ಅಂದಾಜು ಪತ್ರಿಕೆ ತಯಾರಿಸಲಾಗುತ್ತಿದೆ.
.ಹಾದಿಮನಿ,
ಎಫ್‌ಆರ್‌ಎಲ್‌ ಉಪ ವಿಭಾಗದ ಸಹಾಯಕ ಅಭಿಯಂತರ

Advertisement

Udayavani is now on Telegram. Click here to join our channel and stay updated with the latest news.

Next