Advertisement

ಡಿಗ್ರಿ ಕಾಲೇಜು ಆರಂಭಕ್ಕೆ ಮೀನಮೇಷ

10:54 AM Jun 15, 2019 | Naveen |

•ಶಂಕರ ಜಲ್ಲಿ
ಆಲಮಟ್ಟಿ:
ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರ ಮಕ್ಕಳಿಗೆ ಶೈಕ್ಷಣಿಕ ಅಭಿವೃದ್ಧಿಗೆ ಆಲಮಟ್ಟಿಯಲ್ಲಿ ಸರ್ಕಾರಿ ಡಿಗ್ರಿ ಕಾಲೇಜು ಆರಂಭಿಸಲು ದಶಕಗಳಿಂದಲೂ ಮನವಿ ಮಾಡುತ್ತ್ತ ಬಂದರೂ ಜನ ಪ್ರತಿನಿಧಿಗಳು ಕ್ಯಾರೇ ಎನ್ನದಿರುವುದರಿಂದ ಸಂತ್ರಸ್ತರ ಮಕ್ಕಳ ಭವಿಷ್ಯ ತೂಗುಯ್ನಾಲೆಯಂತಾಗಿದೆ.

Advertisement

ದೇಶದ ಬೃಹತ್‌ ನೀರಾವರಿ ಯೋಜನೆಗಳಲ್ಲೊಂದಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಕೇಂದ್ರ ಸ್ಥಾನವಾಗಿರುವ ಆಲಮಟ್ಟಿಯಲ್ಲಿ ಸಂತ್ರಸ್ತರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರಿ ಡಿಗ್ರಿ ಕಾಲೇಜು ಆರಂಭಿಸಲು 2008ರಲ್ಲಿ ಆಗಿನ ಉನ್ನತ ಶಿಕ್ಷಣ ಸಚಿವರಾಗಿದ್ದ ಅರವಿಂದ ಲಿಂಬಾವಳಿಯವರಲ್ಲಿ ಮನವಿ ಮಾಡಲಾಗಿತ್ತು. ಇದರಿಂದ ಸ್ವತಃ ಮುಳುಗಡೆ ಸಂತ್ರಸ್ತರೂ ಆಗಿದ್ದ ಅರವಿಂದ ಲಿಂಬಾವಳಿಯವರು ಸಂತ್ರಸ್ತರ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತ ಆಗಬಾರದೆಂದು ಆಲಮಟ್ಟಿಯಲ್ಲಿ ಸರ್ಕಾರಿ ಡಿಗ್ರಿ ಕಾಲೇಜು ಆರಂಭಿಸಲು ಸಂಬಂಧಿತ ಇಲಾಖೆಗೆ ಆದೇಶ ಮಾಡಿದ್ದರು.

ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಆಲಮಟ್ಟಿಯಲ್ಲಿ ಡಿಗ್ರಿ ಕಾಲೇಜು ಆರಂಭಿಸಲು ಮೂಲಭೂತ ಸೌಲಭ್ಯಗಳ ಕುರಿತು ಪರಿಶೀಲನೆ ಮಾಡಿ ಗ್ರಾಪಂ ಹಾಗೂ ಶಿಕ್ಷಣ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಭಿಪ್ರಾಯ ಸೇರಿದಂತೆ ಎಲ್ಲವನ್ನೂ ಕ್ರೋಢೀಕರಿಸಿಕೊಂಡು ಅದಕ್ಕೆ ಸಂಬಂಧಿಸಿದ ಒಪ್ಪಿಗೆ ಪತ್ರಗಳನ್ನೂ ಪಡೆದುಕೊಂಡು ಹೋದರು. ಅಷ್ಟರಲ್ಲಾಗಲೇ ಲಿಂಬಾವಳಿಯವರ ಸಚಿವ ಖಾತೆ ಬದಲಾಗಿತ್ತು, ನಂತರ ಬಂದ ಸಚಿವರೂ ಕೂಡ ಇದರ ಬಗ್ಗೆ ಆಸಕ್ತಿ ಹೊಂದಿದ್ದರು. ಆದರೆ ಅಧಿಕಾರಿಗಳು ಮಾತ್ರ ವರದಿ ನೀಡುವುದನ್ನು ವಿಳಂಬ ಮಾಡಿದ್ದರ ಪರಿಣಾಮ 2019-20ನೇ ಶೈಕ್ಷಣಿಕ ವರ್ಷ ಆರಂಭವಾದರೂ ಇನ್ನುವರೆಗೆ ಡಿಗ್ರಿ ಕಾಲೇಜು ಸಂತ್ರಸ್ತರ ಮಕ್ಕಳಿಗೆ ಗಗನ ಕುಸುಮವಾಗಿದೆ.

ಆಲಮಟ್ಟಿಯು ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯ, ವಿವಿಧ ಉದ್ಯಾನಗಳು ಹಾಗೂ ಸುತ್ತಲಿನ ಸುಮಾರು ಗ್ರಾಮೀಣ ಪ್ರದೇಶಗಳಿಗೆ ಕೇಂದ್ರ ಸ್ಥಾನದಲ್ಲಿದೆಯಲ್ಲದೇ ಪಟ್ಟಣಕ್ಕೆ ರೈಲ್ವೆ ಸಂಪರ್ಕವಿದೆ. ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳನ್ನು ಹೊಂದಿದ್ದು ನಿತ್ಯ ನೂರಾರು ಸರ್ಕಾರಿ ಬಸ್‌ಗಳು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಖಾಸಗಿ ವಾಹನಗಳು ಸಂಚರಿಸುತ್ತವೆ.

ಹೀಗೆ ಉನ್ನತ ಶಿಕ್ಷಣಕ್ಕೆ ಅಗತ್ಯವಾಗಿ ಬೇಕಾಗಿರುವ ಸರ್ಕಾರಿ ಕಟ್ಟಡಗಳು ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಹೊಂದಿದ್ದರೂ ಸರ್ಕಾರ ಡಿಗ್ರಿಕಾಲೇಜು ಆರಂಭ ಮಾಡದೇ ಮೀನಮೇಷ ಎಣಿಸುತ್ತಿರುವುದೇಕೆ ಎಂದು ನಾಗರಿಕರು ಪ್ರಶ್ನಿಸುವಂತಾಗಿದೆ.

Advertisement

ದಿನಗೂಲಿಗಳಾದ ಮಕ್ಕಳು: ಸುಮಾರು 192 ಗ್ರಾಮಗಳು ಕೃ.ಮೇ.ಯೋಜನೆಯಿಂದ ಭಾದಿತಗೊಂಡು ಲಕ್ಷಾಂತರ ಎಕರೆ ಜಮೀನು ಕಳೆದುಕೊಂಡ ಸುಮಾರು 4 ಲಕ್ಷ ಸಂತ್ರಸ್ತರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ದೊರೆಯದೇ ಬೆಂಗಳೂರು, ಪುಣೆ, ಮುಂಬೈಯಂತಹ ನಗರಗಳಿಗೆ ವಲಸೆ ಹೋಗಿ ಹಮಾಲಿ ಮಾಡುವಂತಾಗಲು ಜನ ಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಯೇ ಕಾರಣ ಎನ್ನುತ್ತಾರೆ ಶಿವಾನಂದ.

ಡೋನೇಶನ್‌: ಮುಳುಗಡೆ ಹೊಂದಿ ಪುನರ್ವಸತಿ ಕೇಂದ್ರಗಳಾಗಿರುವ ಗ್ರಾಮಗಳಲ್ಲಿ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಿವೆ. ಆದರೆ ಡಿಗ್ರಿ ಕಾಲೇಜುಗಳು ಇಲ್ಲದಿರುವುದರಿಂದ ಖಾಸಗಿ ಶಾಲೆಗಳಲ್ಲಿ ವಿಪರೀತವಾಗಿ ಡೊನೇಶನ್‌ ಪಡೆಯುತ್ತಿದ್ದು ಸಂತ್ರಸ್ತರ ಮಕ್ಕಳು ಉನ್ನತ ವ್ಯಾಸಂಗ ಮಾಡದೇ ದಿನಗೂಲಿ ಕಾರ್ಮಿಕ, ಟ್ರ್ಯಾಕ್ಟರ್‌ ಡ್ರೈವರ್‌, ಟಿಪ್ಪರ್‌ ಡ್ರೈವರ್‌ ಉದ್ಯೋಗ ಅರಸಿಕೊಂಡು ಹೋಗುವಂತಾಗಿದೆ.

ಈ ಕ್ಷೇತ್ರದ ಶಾಸಕರೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದಾರಲ್ಲದೇ ಸಂತ್ರಸ್ತರ ನೋವನ್ನು ಹತ್ತಿರದಿಂದ ಕಂಡವರಾಗಿದ್ದಾರೆ. ಇವರಾದರೂ ಆಲಮಟ್ಟಿಯಲ್ಲಿ ಡಿಗ್ರಿ ಕಾಲೇಜು ಆರಂಭಿಸಲು ಪ್ರಯತ್ನಿಸುತ್ತಾರಾ ಕಾದು ನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next