Advertisement

ಕೆರೆ-ಬಾಂದಾರ ತುಂಬಿಸಲು ಆಗ್ರಹ

11:46 AM Mar 01, 2020 | Naveen |

ಆಲಮಟ್ಟಿ: ಕೃ.ಮೇ.ಯೋಜನೆ ವ್ಯಾಪ್ತಿಯ ಚಿಮ್ಮಲಗಿ ಏತ ನೀರಾವರಿ ಯೋಜನೆ ಕಾಲುವೆಗಳ ಮೂಲಕ ಬೊಮ್ಮನ ಜೋಗಿ ಕೆರೆ ಹಾಗೂ ಬಾಂದಾರಗಳನ್ನು ತುಂಬಿಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.

Advertisement

ಶನಿವಾರ ಬೆಳಗ್ಗೆ ಕೃಷ್ಣಾ ಭಾಗ್ಯಜಲ ನಿಗಮದ ಆಲಮಟ್ಟಿ ವಲಯ ಮುಖ್ಯ ಅಭಿಯಂತರರ ಕಚೇರಿಗೆ ಆಗಮಿಸಿದ ರೈತರು ಮುಖ್ಯ ಅಭಿಯಂತರರಿಗೆ ಮನವಿ ಸಲ್ಲಿಸಿದರು. ಇದಕ್ಕೂ ಮುಂಚೆ ಮಾತನಾಡಿದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ನೀರು ಸಂಗ್ರಹಕ್ಕಾಗಿ ನೆಲೆ ಕಳೆದುಕೊಂಡಿರುವ ಜಿಲ್ಲೆಯ ಜನರಿಗೆ ಕುಡಿಯುವ ನೀರಿಗಾಗಿ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿಗೆ ಭಿಕ್ಷೆ ಬೇಡುವಂತಾಗಿರುವುದು ಜಿಲ್ಲೆಯ ಜನಪ್ರತಿನಿಧಿ ಗಳು ತಮ್ಮ ಜವಾಬ್ದಾರಿ ಮರೆತಿರುವುದಕ್ಕೆ ತಲೆ ತಗ್ಗಿಸುವಂತಾಗಿದೆ ಎಂದರು.

ಕಳೆದ 5-6 ವರ್ಷಗಳಿಂದ ಜಿಲ್ಲೆಯಲ್ಲಿ ಸಮರ್ಪಕವಾಗಿ ಮಳೆಯಾಗದೇ ಇರುವುದರಿಂದ ಜಿಲ್ಲೆಯ ಕೆರೆ, ಬಾಂದಾರಗಳು ಒಣಗಿ ನಿಂತಿವೆ. ಜಿಲ್ಲೆಯ ಎಲ್ಲ ಕೆರೆ ಹಾಗೂ ಬಾಂದಾರಗಳನ್ನು ತುಂಬಿಸುವಂತೆ ಹಲವಾರು ಬಾರಿ ಮನವಿ ಅರ್ಪಿಸಿದ್ದಾಯಿತು, ಪ್ರತಿಭಟನೆ, ಧರಣಿ ಸೇರಿದಂತೆ ಹಲವಾರು ಬಾರಿ ವಿವಿಧ ಬಗೆಯಲ್ಲಿ ಹೋರಾಟ ಮಾಡಿದ್ದರೂ ಕಾಟಾಚಾರಕ್ಕೆ ನೀರು ಹರಿಸಿ ಮತ್ತೆ ಸ್ಥಗಿತಗೊಳಿಸಲಾಗುತ್ತಿದೆ. ಈ ಕುರಿತು ಅಧಿಕಾರಿಗಳು ಕೇವಲ ಸ್ಕೀಂಗಳ ನೆಪದಲ್ಲಿ ಜಿಲ್ಲೆಗೆ ಅನ್ಯಾಯ ಮಾಡುತ್ತಿದ್ದಾರೆ. ಇನ್ನು ಈಗಿರುವ ಜನಪ್ರತಿನಿಧಿ ಗಳು ನಮ್ಮ ಹಿರಿಯರು ಸರಿಯೋ ಅಥವಾ ತಪ್ಪು ನಿರ್ಧಾರ ಕೈಗೊಂಡಿದ್ದಾರೋ ಎನ್ನುವುದನ್ನು ಬಿಟ್ಟು ಹಿಂದಿನದನ್ನು ಕೈ ಬಿಟ್ಟು ಜಿಲ್ಲೆಗೆ ಅನ್ಯಾಯವಾಗುವುದನ್ನು ತಪ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿ ಜಿಲ್ಲೆಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಸಂಘದ ವತಿಯಿಂದ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸರ್ಕಾರದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಗಳಲ್ಲೊಂದಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಇಡಿ ಏಷ್ಯಾ ಖಂಡದಲ್ಲಿಯೇ ದ್ವಿತೀಯ ಸ್ಥಾನ ಪಡೆದಿದೆ. ಹೀಗಿದ್ದರೂ ಆಲಮಟ್ಟಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ಹಾಗೂ ನಾರಾಯಣಪುರದ ಬಸವಸಾಗರ ಜಲಾಶಯ ನಿರ್ಮಾಣಕ್ಕೆ ಅಖಂಡ ವಿಜಯಪುರ ಜಿಲ್ಲೆಯ ಲಕ್ಷಾಂತರ ಎಕರೆ ಭೂಮಿ ಹಾಗೂ ಲಕ್ಷಾಂತರ ಕುಟುಂಬಗಳು ನಿರಾಶ್ರಿತರಾಗಿ ಯೋಜನೆಯ ಯಶಸ್ಸಿಗಾಗಿ ತ್ಯಾಗ ಮಾಡಿದ್ದಾರೆ. ಇಂಥ ತ್ಯಾಗ ಮಾಡಿದ ಜಿಲ್ಲೆಯ ಜನ-ಜಾನುವಾರು ಹಾಗೂ ವನ್ಯಜೀವಿಗಳು ಬದುಕಲು ಕುಡಿಯಲು ಜೀವ ಜಲಕ್ಕಾಗಿ ಪರದಾಡುವಂತಾಗಿದೆ ಎಂದು ಹೇಳಿದರು.

ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯ ಅಭಿಯಂತರ ಆರ್‌.ಪಿ.ಕುಲಕರ್ಣಿ, ಬೊಮ್ಮನಜೋಗಿ ಕೆರೆಗೆ ನೀರು ತಲುಪಿಸಬೇಕಾದರೆ ಬಳಗಾನೂರ ಹತ್ತಿರ ಕಾಲುವೆ ಕಾಮಗಾರಿ ಪ್ರಗತಿಯಲ್ಲಿದ್ದು ಕಾಂಕ್ರೀಟ್‌ ಕಾಮಗಾರಿ ಮುಗಿಯಬೇಕು. ಕಾಮಗಾರಿ ಮಾ. 20ರ ವೇಳೆಗೆ ಮುಗಿಯಬಹುದು. ಇನ್ನು ಕೂಡಗಿ ಬಳಿ ರೈಲ್ವೆ ಕ್ರಾಸಿಂಗ್‌ ಕಾಮಗಾರಿ ಮಾರ್ಚ್‌ ಅಂತ್ಯದ ವೇಳೆಗೆ ಮುಗಿಯಬಹುದು ಎಂದರು.

Advertisement

ಈಗಾಗಲೇ ಕೃ.ಮೇ.ಯೋ. ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ಸಂಬಂಧಿ ಸಿದ ಕಾಲುವೆಗಳಿಗೆ ಮಾ. 20ರವರೆಗೆ ನೀರು ಹರಿಸಲಾಗುತ್ತಿದೆ. ಇನ್ನುಳಿದಂತೆ ಮತ್ತೆ ಕೃ.ಮೇ.ಯೋ. ನೀರಾವರಿ ಸಲಹಾ ಸಮಿತಿ ಸಭೆ ನಡೆಸಲು ಅಧ್ಯಕ್ಷರಲ್ಲಿ ಹಾಗೂ ಸದಸ್ಯ ಕಾರ್ಯದರ್ಶಿಗಳಲ್ಲಿ ಮನವಿ ಮಾಡಲಾಗಿದೆ ಎಂದು ಹೇಳಿದರು. ಅಣ್ಣುಗೌಡ ಪಾಟೀಲ, ಹೊನಕೇರಪ್ಪ ತೆಲಗಿ, ರಾಮಣ್ಣ ಗೋವಿಂದ, ವಿಠ್ಠಲ  ಪೂಜೇರಿ, ಶಂಕ್ರಪ್ಪ ಬಮ್ಮನಳ್ಳಿ, ಶರಣಪ್ಪ ಹಂದ್ರಾಳ, ಕರೆಪ್ಪ ಜೆಂಡೂರ, ದೇವಪ್ಪ ಕೊಡೇಕಲ್ಲ, ಅಬ್ದುಲರಜಾಕ್‌ ಹಿಪ್ಪರಗಿ, ಮೌನೇಶ ಬಡಿಗೇರ, ಯಾಶಿನ್‌ ಹಿಪ್ಪರಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next