Advertisement

ಬೇಡಿಕೆ ಈಡೇರಿಕೆಗೆ ಅನ್ನದಾತರ ಆಗ್ರಹ

11:41 AM Jul 24, 2019 | Team Udayavani |

ಆಲಮಟ್ಟಿ: ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ತುಂಬುವ ವೇಳೆಯಲ್ಲಿ ಕ್ಲೋಸರ್‌ ಹಾಗೂ ಸ್ಪೇಷಲ್ ರಿಪೇರಿ ಕಾಮಗಾರಿಗಳಿಗೆ ಟೆಂಡರ್‌ ಕರೆದಿರುವುದರಿಂದ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡುತ್ತಿದ್ದಾರೆ. ಇನ್ನು ಹನುಮಾಪುರ ಜಾಕ್‌ವೆಲ್ ಅನ್ನು ತ್ವರಿತವಾಗಿ ದುರಸ್ತಿಗೊಳಿಸಿ ಜಲಾಶಯ ವ್ಯಾಪ್ತಿ ಎಲ್ಲ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಂಚಾಲಕ ನಿಂಗರಾಜ ಆಲೂರ ಹೇಳಿದರು.

Advertisement

ಮಂಗಳವಾರ ಆಲಮಟ್ಟಿ ರಾಮಲಿಂಗೇಶ್ವರ ದೇವಸ್ಥಾನದಿಂದ ಸ್ಟೇಟ್ ಬ್ಯಾಂಕ್‌ ಮಾರ್ಗವಾಗಿ ಕೃಷ್ಣಾ ಭಾಗ್ಯಜಲ ನಿಗಮದ ಮುಖ್ಯ ಅಭಿಯಂತರರ ಆಲಮಟ್ಟಿ ವಲಯ ಕಚೇರಿವರೆಗೆ ಪಾದಯಾತ್ರೆ ಮೂಲಕ ರೈತ ಪರ ವಿವಿಧ ಘೋಷಣೆಗಳನ್ನು ಕೂಗುತ್ತಾ ತೆರಳಿ ಕಚೇರಿ ಆವರಣದಲ್ಲಿ ನಡೆದ ಧರಣಿಯಲ್ಲಿ ಅವರು ಮಾತನಾಡಿದರು.

7-8 ವರ್ಷದಿಂದ ಸಮರ್ಪಕವಾಗಿ ಮಳೆಯಾಗದಿರುವುದರಿಂದ ಅವಳಿ ಜಿಲ್ಲೆಗಳು ಬರಗಾಲದಿಂದ ಜನ-ಜಾನುವಾರುಗಳಿಗೆ ಆಹಾರ ಹಾಗೂ ದಾಹ ನೀಗಿಸಿಕೊಳ್ಳಲು ಆಲಮಟ್ಟಿ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ವ್ಯಾಪ್ತಿ ಎಲ್ಲ ಕಾಲುವೆಗಳಿಗೆ ಜು. 23ರೊಳಗೆ ಕಾಲುವೆಗಳಿಗೆ ನೀರು ಹರಿಸಬೇಕು ಹಾಗೂ ಕ್ಲೋಸರ್‌ ಹಾಗೂ ಸ್ಪೇಷ‌ಲ್ ರಿಪೇರಿ ಕಾಮಗಾರಿಗಳಿಗೆ ಮಳೆಗಾಲದ ಆರಂಭದ ದಿನದಲ್ಲಿ ಟೆಂಡರ್‌ ಕರೆದಿರುವುದು ತಪ್ಪ್ಪು ಎಂದರು.

ಜಿಲ್ಲೆಯಲ್ಲಿಯೇ ಬೃಹತ್‌ ಜಲಾಶಯ ನಿರ್ಮಿಸಿದ್ದರೂ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಫಲವತ್ತಾದ ಭೂಮಿ ಹೊಂದಿರುವ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ನೀರಿದ್ದರೂ ಕೂಡ ರೈತರು ಹಾಗೂ ಅವರನ್ನು ಅವಲಂಬಿಸಿದ ವಿವಿಧ ಕೃಷಿ ಕೂಲಿ ಕಾರ್ಮಿಕರು ಸೇರಿದಂತೆ ಜಿಲ್ಲೆಯ ಜನರು ತುತ್ತಿನ ಚೀಲ ತುಂಬಿಸಿಕೊಳ್ಳಲು ಬೇರೆ ರಾಜ್ಯಗಳಿಗೆ ಗುಳೆ ಹೋಗುವಂತಾಗಿದೆ ಎಂದು ದೂರಿದರು.

ಆಲಮಟ್ಟಿ ಜಲಾಶಯಕ್ಕೆ ನೀರು ಬರುವ ವೇಳೆಯಲ್ಲಿಯೇ ಹನುಮಾಪುರ ಮುಖ್ಯ ಸ್ಥಾವರವೂ ವಿದ್ಯುತ್‌ ಅವಘಡದಿಂದ ಸುಟ್ಟು ತಿಂಗಳು ಗತಿಸುತ್ತಾ ಬಂದರೂ ಕೂಡ ಇನ್ನೂವರೆಗೆ ದುರಸ್ತಿಗೊಳಿಸದೇ ಕಾಲಹರಣ ಮಾಡುತ್ತಿದ್ದಾರೆ. ಮುಖ್ಯ ಸ್ಥಾವರ ದುರಸ್ತಿಯಾಗದಿದ್ದರೆ ಮುಳವಾಡ ಏತ ನೀರಾವರಿ ಯೋಜನೆಗಳಿಗೆ ನೀರು ಹರಿಯುವದಾದರೂ ಹೇಗೆ ಎಂದು ಪ್ರಶ್ನಿಸಿದರು.

Advertisement

ಕೃಷ್ಣಾ ಮೇಲ್ದಂಡೆ ಯೋಜನೆಯ ಅವಳಿ ಜಲಾಶಯಗಳಾಗಿರುವ ಆಲಮಟ್ಟಿ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ಹಾಗೂ ನಾರಾಯಣಪುರದ ಬಸವಸಾಗರ ಜಲಾಶಯಗಳ ಮಧ್ಯೆಯೂ ಕೂಡ ಅಧಿಕಾರಿಗಳು ಭೇದ ಮಾಡಿ ನಾರಾಯಣಪುರ ಜಲಾಶಯ ವ್ಯಾಪ್ತಿ ಕಾಲುವೆಗಳಿಗೆ ಜು. 21ಕ್ಕೂ ಮೊದಲೇ ನೀರು ಹರಿಸಲು ಆರಂಭಿಸಲಾಗುತ್ತಿದೆ. ಆದರೆ ಆಲಮಟ್ಟಿ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ ನೀರು ಹರಿಸಲು ಇಲ್ಲದ ಕುಂಟು ನೆಪ ಹೇಳುತ್ತಿದ್ದಾರೇಕೆ? ಬರಗಾಲದಿಂದ ಬೇಸತ್ತಿರುವ ಜನರಿಗೆ ನೀರು ಕೊಡದೇ ಕ್ಲೋಸರ್‌ ಹಾಗೂ ಸ್ಪೇಷಲ್ ದುರಸ್ತಿ ಕಾಮಗಾರಿಗಳ ನೆಪ ಹೇಳಿ ದಿನ ಮುಂದೂಡುತ್ತಿದ್ದಾರೆ ಎಂದು ಹೇಳಿದರು.

ಧರಣಿ ಸ್ಥಳಕ್ಕೆ ಮುಖ್ಯ ಅಭಿಯಂತರರ ಪರವಾಗಿ ಅಣೆಕಟ್ಟು ವೃತ್ತ ಅಧಿಧೀಕ್ಷಕ ಅಭಿಯಂತರ ಬಿ.ಎಸ್‌. ಪಾಟೀಲ ಹಾಗೂ ಉಪ ಮುಖ್ಯ ಅಭಿಯಂತರ ಎಂ.ಎನ್‌. ಪದ್ಮಾಜ ಭೇಟಿ ನೀಡಿ ರೈತರ ಬೇಡಿಕೆಗಳನ್ನು ಆಲಿಸಿದರು.

ಅಗತ್ಯವಿರುವ ಸ್ಥಳದಲ್ಲಿ ಗೇಟುಗಳನ್ನು ಅಳವಡಿಸಲಾಗುವುದು ಮತ್ತು ರೈತರ ಜಮೀನಿಗೆ ನೀರು ಹರಿಸುವುದರೊಂದಿಗೆ ಕಾಲುವೆ ವ್ಯಾಪ್ತಿ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ ನಂತರ ರೈತರು ತಮ್ಮ ಧರಣಿ ತಾತ್ಕಾಲಿಕವಾಗಿ ಹಿಂಪಡೆದರು.

ಧರಣಿಯಲ್ಲಿ ತಿರುಪತಿ ಬಂಡಿವಡ್ಡರ, ವಿಠuಲ ಬಂಡಿವಡ್ಡರ, ವೆಂಕಟೇಶ ಬಂಡಿವಡ್ಡರ, ಸಾಬಣ್ಣ ಅಂಗಡಿ, ಶಿವಪ್ಪ ಇಂಗಳೇಶ್ವರ, ಸೀತು ಗಣಿ, ಪರಶುರಾಮ ದಡ್ಡೀನ್‌, ಪ್ರಭು ಕೊಳಮಲಿ, ಸರಸ್ವತಿ ವಸ್ತ್ರದ, ಜಯಾ ಪೂಜಾರಿ, ಕಾಶೀರಾಯ ಬ್ಯಾಕೋಡ, ವೀರೇಶ ಕೋರವಾರ, ಎನ್‌.ಬಿ.ಪಾಟೀಲ, ರೇವಪ್ಪ ಪಾಟೀಲ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next