ಆಲಮಟ್ಟಿ: ಬರಗಾಲದಿಂದ ತತ್ತರಿಸಿದ್ದ ಅಖಂಡ ವಿಜಯಪುರ ಜಿಲ್ಲೆಯ ಬವಣೆ ನೀಗಿಸಲು ನಿರ್ಮಿಸಲಾಗಿರುವ ಜಲಾಶಯದಲ್ಲಿ ನೀರಿನ ಸಂಗ್ರಹದಲ್ಲಿ ವ್ಯಾಪಕ ಇಳಿಕೆಯಾಗುತ್ತಿರುವುದರಿಂದ ಹಿಂಗಾರು ಹಂಗಾಮಿಗೆ ನೀರು ಬರುವುದೇ ಎಂದು ರೈತರು ಆತಂಕಕ್ಕೀಡಾಗಿದ್ದಾರೆ.
ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಜಲಾಶಯದಿಂದ ನದಿ ಪಾತ್ರಕ್ಕೆ ನಿತ್ಯ 1.2 ಟಿಎಂಸಿ ನೀರನ್ನು ನದಿ ಪಾತ್ರಕ್ಕೆ ಬಿಡುತ್ತಿರುವುದಲ್ಲದೇ ಮುಂಗಾರು ಹಂಗಾಮಿನ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಂಡಂತೆ ನ.14ರಂದು ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗುತ್ತಿದೆ. ಹಿಂಗಾರು ಹಂಗಾಮಿಗೆ ರೈತರ ಕಾಲುವೆಗಳಿಗೆ ನೀರು ಹರಿಸುವುದು ಅನುಮಾನವಾಗಿರುವುದರಿಂದ ಬರಗಾಲದ ಬವಣೆಯಿಂದ ಬಳಲುತ್ತಿರುವ ರೈತ ವರ್ಗಕ್ಕೆ ದಿಕ್ಕು ತೋಚದಂತಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆ ನಿರ್ಧಾರಕ್ಕೆ ಕಾಯುವಂತಾಗಿದೆ.
ಆಲಮಟ್ಟಿ ಜಲಾಶಯ ವ್ಯಾಪ್ತಿಯ ಎಲ್ಲ ಕಾಲುವೆ ಹಾಗೂ ಕೆರೆಗಳನ್ನು ತುಂಬಿಸಲು ಮತ್ತು ವಿಜಯಪುರ, ಬಾಗಲಕೋಟೆ ಹಾಗೂ ಕೊಪ್ಪಳ ಜಿಲ್ಲೆ ಜನತೆಯ ಕುಡಿಯುವ ನೀರಿಗಾಗಿ ಸೇರಿ ಸುಮಾರು 32 ಟಿಎಂಸಿ ನೀರು ಬೇಕಾಗುತ್ತದೆ. ಆದರೆ 123 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯ ಮಳೆಗಾಲದಲ್ಲಿ ಸಂಪೂರ್ಣ ತುಂಬಿದ್ದರೂ ಹಿಂಗಾರು ಹಂಗಾಮಿಗೆ ನೀರಿಲ್ಲದಂತಾಗಿದೆ. 519.600 ಮೀ. ಗರಿಷ್ಠ ಎತ್ತರದಲ್ಲಿ 123.081 ಟಿಎಂಸಿ ಅಡಿ ಗರಿಷ್ಠ ಸಾಮರ್ಥ್ಯದ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದಲ್ಲಿ ಗುರುವಾರ 515.690 ಮೀ. ಎತ್ತರವಾಗಿ 69.765 ಟಿಎಂಸಿ ಅಡಿ ಸಂಗ್ರಹವಾಗಿತ್ತು. ಕಳೆದ ವರ್ಷ ಇದೇ ದಿನ 519.540 ಮೀ. ಎತ್ತರದಲ್ಲಿ 121.957 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದರಿಂದ ಹಿಂಗಾರು ಹಂಗಾಮಿನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಎರಡೂ ಜಲಾಶಯಗಳ ವ್ಯಾಪ್ತಿಯ ರೈತರ ಜಮೀನಿಗೆ ಸಂಪೂರ್ಣ ನೀರುಣಿಸಲಾಗಿತ್ತು.
ಹಿಂಗಾರಿಗೆ 9 ಟಿಎಂಸಿ ನೀರು ಸಾಕು: ಆಲಮಟ್ಟಿ ಜಲಾಶಯ ನಿರ್ಮಾಣಕ್ಕಾಗಿ ಲಕ್ಷಾಂತರ ಕುಟುಂಬಗಳು ನೂರಾರು ಗ್ರಾಮಗಳನ್ನು ಕಳೆದುಕೊಂಡು ಸಾವಿರಾರು ಎಕರೆ ಜಮೀನು ತ್ಯಾಗ ಮಾಡಿವೆ. ಅವಳಿ ಜಿಲ್ಲೆ ಕಾಲುವೆಗಳಾದ ಆಲಮಟ್ಟಿ ಎಡದಂಡೆ, ಚಿಮ್ಮಲಗಿ ಏತ ನೀರಾವರಿ ಯೋಜನೆ ಕಾಲುವೆಗಳಿಗೆ 300 ಕ್ಯೂಸೆಕ್, ಆಲಮಟ್ಟಿ ಬಲದಂಡೆ ಮತ್ತು ತಿಮ್ಮಾಪುರ ಏತ ನೀರಾವರಿ ಯೋಜನೆಯ ಡಿಸಿ-1 ಹಾಗೂ ಡಿಸಿ-2 ಸೇರಿ 350 ಕ್ಯೂಸೆಕ್, ಮುಳವಾಡ ಏತ ನೀರಾವರಿ ಯೋಜನೆಯ ಪೂರ್ವ ಮತ್ತು ಪಶ್ಚಿಮ ಕಾಲುವೆಗಳಿಗೆ 300 ಕ್ಯೂಸೆಕ್ ಸೇರಿ ಒಟ್ಟು 950 ಕ್ಯೂಸೆಕ್ ನೀರು ಸಾಕಾಗುತ್ತದೆ. ಇನ್ನು ಕೆರೆಗಳನ್ನು ತುಂಬಲು ನಿತ್ಯ 80 ಕ್ಯೂಸೆಕ್ ನೀರು ಸಾಕು, ಹಿಂಗಾರು ಹಂಗಾಮಿನಲ್ಲಿ 8 ದಿನ ಚಾಲು ಹಾಗೂ 7 ದಿನ ಬಂದ್ ವಾರಾಬಂಧಿ ಪದ್ಧತಿ ಅನುಸರಿಸಿ ಅವಳಿ ಜಿಲ್ಲೆ ರೈತರ ಜಮೀನಿಗೆ ನೀರು ಹರಿಸಿದರೆ ಮಾ.15ರ ವರೆಗೆ ನೀರನ್ನು ಹರಿಸಬಹುದು. ಇದರಿಂದ ಒಟ್ಟು 4.5 ಟಿಎಂಸಿ ನೀರು ಮುಂಗಾರು ಹಂಗಾಮಿನಲ್ಲಾಗಿದ್ದರೆ ಹಿಂಗಾರು ಹಂಗಾಮಿನಲ್ಲಿ 9 ಟಿಎಂಸಿ ನೀರನ್ನು ಬಳಸಿಕೊಂಡು ಕಾಲುವೆಗಳಿಗೆ ನೀರು ಹರಿಸಬಹುದು ಎಂದು ಕೃಷ್ಣಾ ಭಾಗ್ಯಜಲ ನಿಗಮದ ಮೂಲಗಳು ತಿಳಿಸಿವೆ.
ಈಗ ಲಭ್ಯವಿರುವ 69.765 ಟಿಎಂಸಿ ನೀರಿನಲ್ಲಿ ಸುಮಾರು 5 ಟಿಎಂಸಿ ಭಾಷ್ಪೀಕರಣ ಹೊಂದುತ್ತದೆ. 17.620 ಟಿಎಂಸಿ ನೀರು ಜಲಚರಗಳಿಗಾಗಿ ಮೀಸಲಿಡಬೇಕು. ಇನ್ನುಳಿದ 47.145 ಟಿಎಂಸಿ ನೀರಿನಲ್ಲಿ 2 ಟಿಎಂಸಿ ರಾಯಚೂರು ಉಷ್ಣ ವಿದ್ಯುತ್ ಸ್ಥಾವರ, ಇನ್ನೂ 5 ದಿನ ರೈತರ ಜಮೀನಿಗೆ ನೀರುಣಿಸಲು ಕೊಡಬೇಕಾದ ನೀರು 0.1,46 ಟಿಎಂಸಿ ಹಾಗೂ ನದಿ ಪಾತ್ರದ ವಿಜಯಪುರ ನಗರ, ಕೊಲ್ಹಾರ-ವಿಜಯಪುರ ಬಹುಹಳ್ಳಿ ಕುಡಿಯುವ ನೀರಿನ ಘಟಕ, ಬಸವನಬಾಗೇವಾಡಿ ಬಹುಹಳ್ಳಿ ಕುಡಿಯುವ ನೀರಿನ ಘಟಕ, ಹುನಗುಂದ, ಇಳಕಲ್ಲ, ಕುಷ್ಟಗಿ, ಗುಳೇದಗುಡ್ಡ, ಕೊಪ್ಪಳ, ಬಾಗಲಕೋಟೆ ಪಟ್ಟಣ ಹಾಗೂ ಇತರ ಗ್ರಾಮೀಣ, ಬೀಳಗಿ, ತುಂಬರಮಟ್ಟಿ, ಬಾದಾಮಿ ತಾಲೂಕು ಬಹುಹಳ್ಳಿ ಕುಡಿಯುವ ನೀರಿನ ಘಟಕಗಳಿಂದ ನೂರಾರು ಗ್ರಾಮೀಣ ಭಾಗಕ್ಕೆ ಅಂದಾಜು 2 ಟಿಎಂಸಿಯಷ್ಟು ನೀರು ಪೂರೈಸಲಾಗುತ್ತಿದೆ. ಒಟ್ಟಾರೆ 7 ಟಿಎಂಸಿ ಅಡಿ ನೀರನ್ನು ಬಳಸಿಕೊಂಡರೂ ಇನ್ನುಳಿಯುವ 40 ಟಿಎಂಸಿ ಅಡಿ ನೀರಿನಲ್ಲಿ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ವ್ಯಾಪ್ತಿಯ 65 ಸಾವಿರ ಹೆಕ್ಟೇರ್ ಪ್ರದೇಶವನ್ನು ನೀರಾವರಿಗೊಳಪಡಿಸಿ ಉಳಿದ ನೀರನ್ನೂ ನಾರಾಯಣಪುರ ಜಲಾಶಯಕ್ಕೆ ಬಿಡಬಹುದಾಗಿದೆ.
ದೀಪದ ಕೆಳಗೇ ಕತ್ತಲು
ಆಲಮಟ್ಟಿ ಜಲಾಶಯ 123.081 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದರಲ್ಲಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಕಾಲುವೆಗಳಿಗೆ ಒಂದು ವರ್ಷಕ್ಕೆ ಸರಾಸರಿ 16 ಟಿಎಂಸಿ ನೀರಿನಲ್ಲಿ ರೈತರ ಕಾಲುವೆಗಳಿಗೆ ಹಾಗೂ ಕೆರೆ ತುಂಬುವ ಯೋಜನೆಗೆ ನೀರನ್ನು ಹರಿಸಬಹುದಾಗಿದೆಯಾದರೂ ಜನಪ್ರತಿನಿಧಿ ಗಳ ಹಾಗೂ ಅ ಧಿಕಾರಿಗಳ ಕಣ್ಣಾ ಮುಚ್ಚಾಲೆಯಾಟದಿಂದ ಅವಳಿ ಜಿಲ್ಲೆ ರೈತರು ನರಳುವಂತಾಗಿದೆ.
ಶಂಕರ ಜಲ್ಲಿ