Advertisement

ಕೊಯಮತ್ತೂರು ಸ್ಫೋಟದ ಹಿಂದೆ ಅಲ್‌-ಉಮ್ಮಾ ಕೈವಾಡ?

12:18 AM Oct 30, 2022 | Team Udayavani |

ಹೊಸದಿಲ್ಲಿ: ಕಳೆದ ವಾರ ತಮಿಳುನಾಡಿನ ಕೊಯ ಮತ್ತೂರಿನಲ್ಲಿ ನಡೆದ ಕಾರು ಸ್ಫೋಟ ಪ್ರಕರಣ, 1988ರಲ್ಲಿ ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರ ಕೊಲೆಗೆ ಸಂಚು, 2013ರಲ್ಲಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ನಡೆದ ಬಾಂಬ್‌ ಬ್ಲಾಸ್ಟ್‌ ಮತ್ತು ಶ್ರೀಲಂಕಾದಲ್ಲಿ ನಡೆದ ಈಸ್ಟರ್‌ ಬಾಂಬ್‌ ದಾಳಿ… ಇವೆಲ್ಲವುಗಳಿಗೂ ಒಂದಕ್ಕೊಂದು ಲಿಂಕ್‌ ಇವೆಯೇ? ಕೊಯಮತ್ತೂರು ಸ್ಫೋಟದ ಬಗ್ಗೆ ತನಿಖೆ ನಡೆಸು ತ್ತಿರುವ ಸಂಸ್ಥೆಗಳು ಇಂಥದ್ದೊಂದು ಲಿಂಕ್‌ ಕುರಿತು ಗಮನ ಹರಿಸಲಾರಂಭಿಸಿವೆ. ತಮಿಳುನಾಡು ಪೊಲೀಸರು ಕೂಡ ಈ ಕುರಿತ ಹಲವು ಪ್ರಮುಖ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ನ್ಯೂಸ್‌18 ವರದಿ ಮಾಡಿದೆ.

Advertisement

ಸಿಲಿಂಡರ್‌ ಬ್ಲಾಸ್ಟ್‌ ಪ್ರಕರಣದಲ್ಲಿ ಉಗ್ರ ಸಂಘಟನೆ ಅಲ್‌-ಉಮ್ಮಾ ಕೈವಾಡವಿರುವ ಬಗ್ಗೆ ತನಿಖಾ ಸಂಸ್ಥೆಗಳಿಗೆ ಶಂಕೆ ಉಂಟಾಗಿದೆ. ಇದು ತಮಿಳುನಾಡು ಮೂಲದ ಉಗ್ರ ಸಂಘಟನೆಯಾಗಿದ್ದು, 1998ರಲ್ಲಿ ಇದು ದೇಶದ ರಕ್ಷಣಾ ಮತ್ತು ತನಿಖಾ ಸಂಸ್ಥೆಗಳ ಕಣ್ಗಾವಲು ವ್ಯಾಪ್ತಿಗೆ ಬಂದಿತ್ತು. ಬಾಬರಿ ಮಸೀದಿ ಕೆಡವಿದ ಪ್ರಕರಣ ನಡೆದ ಒಂದೇ ವರ್ಷದಲ್ಲಿ ಈ ಸಂಘಟನೆಯನ್ನು ಸ್ಥಾಪಿಸಲಾಗಿತ್ತು. ಚೆನ್ನೈನ ಆರೆಸ್ಸೆಸ್‌ ಕಚೇರಿ ಸಮೀಪ 1993ರಲ್ಲಿ ಬಾಂಬ್‌ ಸ್ಫೋಟ ನಡೆದಾಗ ಈ ಸಂಘಟನೆ ಹೆಸರು ಮುನ್ನೆಲೆಗೆ ಬಂದಿತ್ತು. ನಂತರದಲ್ಲಿ, 1998ರಲ್ಲಿ ಅಡ್ವಾಣಿ ಅವರನ್ನು ಟಾರ್ಗೆಟ್‌ ಮಾಡಿ ಕೊಯಮತ್ತೂರಿನ 11 ಸ್ಥಳಗಳಲ್ಲಿ 12 ಸರಣಿ ಬಾಂಬ್‌ ಸ್ಫೋಟ ನಡೆಸಿದ್ದೂ ಇದೇ ಅಲ್‌ ಉಮ್ಮಾ ಸಂಘಟನೆ. ಅದೃಷ್ಟವಶಾತ್‌ ಅಡ್ವಾಣಿ ಅವರ ವಿಮಾನ ವಿಳಂಬವಾದ ಕಾರಣ ಅಂದು ಅವರು ಬಚಾವಾದರು. ಆದರೆ, ಸರಣಿ ಸ್ಫೋಟದಲ್ಲಿ 58 ಮಂದಿ ಅಸುನೀಗಿದ್ದರು. 2013ರ ಮಲ್ಲೇಶ್ವರ ಸ್ಫೋಟದಲ್ಲೂ ಅಲ್‌ ಉಮ್ಮಾ ಕೈವಾಡ ಬಹಿರಂಗವಾಗಿತ್ತು.

ಕಳೆದ ವಾರ ನಡೆದ ಕಾರು ಸ್ಫೋಟವನ್ನು ಕೂಲಂಕಶವಾಗಿ ಪರಿಶೀಲಿಸಿದಾಗ, ಇದೊಂದು ಪೂರ್ವಯೋಜಿತ ದಾಳಿ ಎಂಬುದು ದೃಢಪಟ್ಟಿದೆ. ಅಲ್ಲದೇ, ಮೇಲಿನ ಎಲ್ಲ ಪ್ರಕರಣಗಳಿಗೂ ಈ ಪ್ರಕರಣಕ್ಕೂ ನಂಟಿದ್ದು, ಇವೆಲ್ಲದರ ಹಿಂದೆಯೂ ಅಲ್‌ ಉಮ್ಮಾ ಸಂಘಟನೆಯ ಕೈವಾಡವಿರುವ ಶಂಕೆ ಬಲವಾಗಿದೆ ಎಂದು ಪೊಲೀಸರು ಹೇಳಿರುವುದಾಗಿ ನ್ಯೂಸ್‌ 18 ವರದಿ ಹೇಳಿದೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next