ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್ ಹಾಗೂ ಅದಿತಿ ಪ್ರಭುದೇವ ನಾಯಕ-ನಾಯಕಿಯಾಗಿರುವ “ಖೆಯೊಸ್’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಫೆ.17ರಂದು ತೆರೆ ಕಾಣುತ್ತಿದೆ. ಜಿ.ವಿ.ಪ್ರಸಾದ್ ಈ ಸಿನಿಮಾದ ನಿರ್ದೇಶಕರು.
ಚಿತ್ರದ ಬಗ್ಗೆ ಮಾತನಾಡುವ ಅವರು, “ಖೆಯೊಸ್ ಅಂದರೆ ಮನುಷ್ಯ ಮನಸ್ಸಿನಲ್ಲಾಗುವ ಗೊಂದಲ. ಇದು ವೈದ್ಯಕೀಯ ಕಾಲೇಜೊಂದರಲ್ಲಿ ನಡೆಯುವ ಕಥೆ. ನಾಯಕ ಅನಿರೀಕ್ಷಿತವಾಗಿ ಒಂದು ಸಮಸ್ಯೆಗೆ ಸಿಲುಕಿಕೊಳ್ಳುತ್ತಾನೆ. ಆತ ತನ್ನ ಜಾಣ್ಮೆಯಿಂದ ಹೇಗೆ ಆ ಸಮಸ್ಯೆಯಿಂದ ಪಾರಾಗುತ್ತಾನೆ ಎಂಬುದು ಕಥಾಹಂದರ.
ನಾಯಕನಾಗಿ ಅಕ್ಷಿತ್ ಶಶಿಕುಮಾರ್, ನಾಯಕಿಯಾಗಿ ಅದಿತಿ ಪ್ರಭುದೇವ ಅಭಿನಯಿಸಿದ್ದಾರೆ. ಪಾರುಲ್ ಅಗರವಾಲ್ ಹಾಗೂ ಹೇಮಚಂದ್ರ ರೆಡ್ಡಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಇದೇ 17ರಂದು ಚಿತ್ರ ಬಿಡುಗಡೆಯಾಗುತ್ತಿದೆ’ ಎಂದರು.
ನಾಯಕ ಅಕ್ಷಿತ್ ಕೂಡಾ ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. “ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಅವರು ಕಥೆ ಹೇಳುವಾಗ ನಾನು ಗಡ್ಡ ಬಿಟ್ಟಿದೆ. ನಮ್ಮ ಪಾತ್ರಕ್ಕೆ ಈ ರೀತಿಯ ಗೆಟಪ್ ಬೇಕಿತ್ತು ಎಂದರು. ಎಂಬಿಬಿಎಸ್ ಓದುತ್ತಿರುವ ಹುಡುಗನ ಪಾತ್ರ ನನ್ನದು. ಅದಿತಿ ಪ್ರಭುದೇವ ಸೇರಿದಂತೆ ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದಾರೆ. ನಮ್ಮ ತಂದೆ ಕೂಡ ಇದರಲ್ಲಿ ನಟಿಸಿದ್ದಾರೆ’ ಎನ್ನುವುದು ಅಕ್ಷಿತ್ ಮಾತು.
“ಖೆಯೊಸ್ ಎಂದರೆ ಮನಸ್ಸಿನಲ್ಲಾಗುವ ಅಸ್ತವ್ಯಸ್ತ, ಗೊಂದಲ ಇತ್ಯಾದಿ. ನಾನು ಕೂಡ ವೈದ್ಯಕೀಯ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದೇನೆ. ಅಕ್ಷಿತ್ ಅವರು ದೊಡ್ಡ ಹೀರೊ ಮಗ ಅಂತ ಏನು ಇಲ್ಲದೆ, ಎಲ್ಲರೊಂದಿಗೆ ಬೆರೆಯುವ ಗುಣ ಇಷ್ಟವಾಯಿತು’ ಎಂದರು ನಾಯಕಿ ಅದಿತಿ ಪ್ರಭುದೇವ.ನಿರ್ಮಾಪಕರಾದ ಪಾರುಲ್ ಅಗರವಾಲ್ ಹಾಗೂ ಡಾ. ಹೇಮಚಂದ್ರ ರೆಡ್ಡಿ ಕೂಡಾ ಸಿನಿಮಾ ಬಗ್ಗೆ ಮಾತನಾಡಿದರು