ಮುಂಬೈ: ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸದಾ ಹಲವಾರು ವಿಭಿನ್ನ ಸಿನಿಮಾಗಳನ್ನು ತನ್ನ ಕೈಯಲ್ಲಿ ಇಟ್ಟುಕೊಂಡಿರುತ್ತಾರೆ. ಇದೀಗ ಅಂತದ್ದೆ ಒಂದು ಸಿನಿಮಾದ ಕುರಿತಾಗಿ ಅಪ್ ಡೇಟ್ ನೀಡಿದ್ದಾರೆ. ಅದು ಬೇರೆ ಯಾವುದೂ ಅಲ್ಲ ರಾಮ ಸೇತುವೆಯ ಕಥಾ ಹಂದರ ಒಳಗೊಂಡಿರುವ ಸಿನಿ ರಸಿಕರ ಬಹುನಿರೀಕ್ಷಿತ ಸಿನಿಮಾ ರಾಮ ಸೇತು .
ಕಳೆದ ದೀಪಾವಳಿಯಲ್ಲಿ ಚಿತ್ರವನ್ನು ಘೋಷಿಸಿದ್ದ ಚಿತ್ರತಂಡ ಸಿನಿಮಾದ ಫಸ್ಟ್ ಲುಕ್ ಅನ್ನು ಬಿಡುಗಡೆ ಗೊಳಿಸಿತ್ತು. ಆ ಮೂಲಕ ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅಭಿನಯಿಸುತ್ತಿರುವ ವಿಷಯನ್ನು ತಿಳಿಸುವ ಮೂಲಕ ಅವರ ಅಭಿಮಾನಿಗಳಲ್ಲಿ ಬಾರಿ ಕುತೂಹಲ ಮೂಡಿಸಿತ್ತು.
ಇದೀಗ ನಟ ಅಕ್ಷಯ ಕುಮಾರ್ ಈ ಸಿನಿಮಾದ ಕುರಿತಾಗಿ ಹೊಸ ಅಪ್ಡೇಟ್ ಒಂದನ್ನು ನೀಡಿದ್ದಾರೆ. ಚಿತ್ರದ ಚಿತ್ರೀಕರಣ ಮುಂಬರುವ 2021ರಲ್ಲಿ ಆರಂಭಗೊಳ್ಳಲಿದ್ದು, 2022 ರ ದೀಪಾವಳಿಯಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆಯಂತೆ. ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ, ಇಂಗ್ಲೀಷ್ ಪೋಸ್ಟ್ ನ ಟ್ಯಾಗ್ ಲೈನ್ ನಲ್ಲಿ ‘ಮಿಥ್ ಆರ್ ರಿಯಾಲಿಟಿ’ ಎಂಬುದಾಗಿ ಹಾಗೂ ಹಿಂದಿ ಭಾಷೆಯ ಪೋಸ್ಟ್ ನಲ್ಲಿ ‘ಸಚ್ಚ್ ಯಾ ಕಲ್ಪನಾ’ ಎಂಬುದಾಗಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಅಯೋಧ್ಯೆ:ರಾಮಮಂದಿರ ನಿರ್ಮಾಣಕ್ಕೆ ದೇಶಿಯ ಹಣ ಬಳಕೆ, ವಿದೇಶಿ ದೇಣಿಗೆ ಸ್ವೀಕರಿಸಲ್ಲ: ಟ್ರಸ್ಟ್
ಈ ಸಿನಿಮಾದ ಚಿತ್ರೀಕರಣವನ್ನು ಉತ್ತರ ಪ್ರದೇಶದ ಅಯೋಧ್ಯೆ ಯಲ್ಲಿಯೇ ಮಾಡಲಾಗುತ್ತಿದ್ದು, ಈ ಕುರಿತಾದ ಅನುಮತಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಳಿ ಪಡೆಯಲಾಗಿದೆ ಎಂದು ವರದಿಯಾಗಿದೆ.
ಸದ್ಯ ನಟ ಅಕ್ಷಯ್ ಕುಮಾರ್ ಬೆಲ್ ಬಾಟಮ್, ಪೃಥ್ವಿ ರಾಜ್, ಬಚ್ಚನ್ ಪಾಂಡೆ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಬ್ಯೂಸಿ ಆಗಿದ್ದಾರೆ. ಇವರ ಸೂರ್ಯವಂಶಿ ಸಿನಿಮಾ ಬಿಡುಗಡೆಗೆ ತಯಾರಾಗಿದೆ.