ಮುಂಬಯಿ: ಬಾಲಿವುಡ್ ನ ವರ್ಸಟೈಲ್ ನಟ ಅಕ್ಷಯ್ ಕುಮಾರ್ ಅವರು ಮುಂಬರುವ ಹೊಸ ಚಿತ್ರದಲ್ಲಿ ತಮ್ಮ ಪಾತ್ರದ ಫರ್ಸ್ಟ್ ಲುಕ್ ಅನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟರ್ ನಲ್ಲಿ ಅಕ್ಕಿ ರೆಟ್ರೋ ಲುಕ್ ನಲ್ಲಿ ಸಖತ್ ಮಿಂಚುತ್ತಿದ್ದಾರೆ.
ಮೇಲಕ್ಕೆ ಶಿಸ್ತಾಗಿ ಬಾಚಿದ ಕ್ರಾಪ್, ಕೆಳಕ್ಕೆ ಇಳಿದ ಶೈಲಿಯ ದಪ್ಪ ಮೀಸೆ, ಕಣ್ಣಿಗೊಂದು ರೇಬಾನ್ ಕನ್ನಡಕ, ಫಿಟ್ ಸೂಟ್ ಮತ್ತು ಬೆಲ್ ಬಾಟಂ ಪ್ಯಾಂಟ್ ತೊಟ್ಟ ಸ್ಟೈಲಿಷ್ ಅಕ್ಕಿ ಆ ಕಾಲದ ಪ್ರತಿಷ್ಠಿತ ಮರೂನ್ ಬಣ್ಣದ ಚೆವ್ರಲೆಟ್ ಇಂಪಾಲ ಕಾರಿನ ಮುಂದೆ ನಿಂತು ಪೋಸ್ ಕೊಡುತ್ತಿರುವ ಈ ಚಿತ್ರ ಅಭಿಮಾನಿಗಳಲ್ಲಿ ಅಕ್ಕಿಯ ಹೊಸ ಚಿತ್ರ ‘ಬೆಲ್ ಬಾಟಂ’ ಕುರಿತು ಕುತೂಹಲವನ್ನು ಹೆಚ್ಚಿಸಿದೆ.
ಅಕ್ಕಿ ತಮ್ಮ ಟ್ವೀಟ್ ನಲ್ಲಿ ಬೆಲ್ ಬಾಟಂ ಹ್ಯಾಷ್ ಟ್ಯಾಗ್ ಹಾಕಿಕೊಂಡು ‘80ನೇ ದಶಕದ ನೆನಪುಗಳಿಗೆ ಹೋಗಲು ಸಿದ್ಧರಾಗಿ ಮತ್ತು ರೋಮಾಂಚಕ ಪತ್ತೆದಾರಿ ಲೋಕಕ್ಕೆ ಪಯಣಿಸಿ’ ಎಂದು ಬರೆದುಕೊಂಡಿದ್ದಾರೆ. ಮತ್ತು ಈ ಟ್ವೀಟ್ ನಲ್ಲೇ ಅವರು ತಮ್ಮ ಹೊಸ ಚಿತ್ರದ ರಿಲೀಸ್ ದಿನಾಂಕವನ್ನೂ ಸಹ ಘೋಷಿಸಿದ್ದಾರೆ. ಅವರೇ ಹೇಳಿಕೊಂಡಿರುವಂತೆ ಈ ಚಿತ್ರ 2021ರ ಜನವರಿ 22ರಂದು ಬಿಡುಗಡೆಯಾಗಲಿದೆ. ಅಂದರೆ ಈ ಚಿತ್ರವನ್ನು ತೆರೆಯಲ್ಲಿ ಕಾಣಲು ನಾವು ಇನ್ನೂ ಒಂದು ವರ್ಷ ಕಾಯಲೇಬೇಕು. ಪತ್ತೇದಾರಿ ಕಥೆಯನ್ನು ಹೊಂದಿರುವ ಈ ಚಿತ್ರವನ್ನು ನಿಖಿಲ್ ಅಡ್ವಾಣಿ ಅವರು ನಿರ್ಮಿಸಿದ್ದಾರೆ ಮತ್ತು ರಂಜಿತ್ ತಿವಾರಿ ಅವರು ನಿರ್ದೇಶಿಸುತ್ತಿದ್ದಾರೆ.
ಅಕ್ಕಿ ಅವರ ಈ ಲುಕ್ ಮೆಚ್ಚಿಕೊಂಡು ಅವರ ಅಭಿಮಾನಿಗಳು ಈ ಟ್ವೀಟ್ ಗೆ ಮೆಚ್ಚುಗೆಯ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ಅವರಲ್ಲೊಬ್ಬರು ಈ ಚಿತ್ರ ಕನ್ನಡದ ‘ಬೆಲ್ ಬಾಟಂ’ ಚಿತ್ರದ ರಿಮೇಕೇ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ನಟ ಅಕ್ಷಯ್ ಕುಮಾರ್ ‘ಇದು ಯಾವುದೇ ಚಿತ್ರದ ರಿಮೇಕ್ ಅಲ್ಲ’ ಎಂದು ಹೇಳಿದ್ದಾರೆ.
Related Articles
ಅಲ್ಲಿಗೆ ಅಕ್ಕಿಯ ಈ ಹೊಸ ಚಿತ್ರ ಕನ್ನಡದಲ್ಲಿ ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿದ್ದ ಜಯತೀರ್ಥ ನಿರ್ದೇಶನದ ರಿಷಭ್ ಶೆಟ್ಟಿ ಅಭಿನಯದ ‘ಬೆಲ್ ಬಾಟಂ’ ಚಿತ್ರದ ರಿಮೇಕ್ ಆಗಿರಬಹುದೆಂಬ ಊಹೆ ಸುಳ್ಳಾಗಿದೆ. ಆದರೆ ಈ ಚಿತ್ರ ಬಿಡುಗಡೆಯ ನಂತರವಷ್ಟೇ ಇದರ ನಿಜವಾದ ಕಥೆ ಏನೆಂದು ತಿಳಿಯಲಿದೆ.