ಅಮೀನಗಡ (ಕೂಡಲಸಂಗಮ): 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ ವಿಶ್ವ ಗುರು ಬಸವಣ್ಣನವರ ಜೀವನ-ಹೋರಾಟ ತೆರೆದಿಡುವ ಬಸವ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಸೋಮವಾರ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಭೂಮಿಪೂಜೆ ನೆರವೇರಿಸಿದ ಅವರು, ದೆಹಲಿಯ ಅಕ್ಷರಧಾಮ ಮಾದರಿಯಲ್ಲಿ ಕೂಡಲಸಂಗಮ ನಿರ್ಮಾಣ ಮಾಡಬೇಕೆಂಬ ಪ್ರಸ್ತಾವನೆಯನ್ನು ಎಸ್.ಆರ್. ಪಾಟೀಲರು ನನ್ನೆದುರು ಇಟ್ಟಿದ್ದರು. ಅವರು ಹೇಳಿದ ತಕ್ಷಣ, ಈ ಯೋಜನೆಗೆ ಒಪ್ಪಿಗೆ ನೀಡಿದ್ದೆ ಎಂದರು.
ಕೃಷ್ಣಾ ಭಾಗ್ಯ ಜಲ ನಿಗಮ ಹಾಗೂ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದಿಂದ 94 ಕೋಟಿ ರೂ. ವೆಚ್ಚದ ಮೊದಲ ಹಂತದ ಕಾಮಗಾರಿಗೆ ಈಗ ಚಾಲನೆ ನೀಡಲಾಗಿದೆ. ಬಸವಣ್ಣನವರು 12ನೇ ಶತಮಾನದಲ್ಲಿ ಮಾಡಿದ ಹೋರಾಟ, ಅವರ ಜೀವನ ಚರಿತ್ರೆ, ಅನುಭವ ಮಂಟಪ, ಬಸವಾದಿ ಶರಣರು ಹೀಗೆ 12ನೇ ಶತಮಾನದ ಹೋರಾಟ, ಸಾಮಾಜಿಕ ಕ್ರಾಂತಿ ಪರಿಚಯಿಸುವ ಈ ಬಸವ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯದಿಂದ ಮುಂಬರುವ ಪೀಳಿಗೆಗೆ ಪರಿಚಯವಾಗಲಿದೆ. ನನಗೆ ಮೊದಲಿನಿಂದಲೂ ಬಸವಣ್ಣನವರ ವಿಚಾರಧಾರೆಗಳು ಪ್ರಭಾವ ಬೀರಿವೆ. ಹೀಗಾಗಿ ನಾನು ಬಸವ ಜಯಂತಿಯಂದೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದೆ ಎಂದರು.
ಉತ್ಪಾದನೆ ಮತ್ತು ವಿತರಣೆ ಅರ್ಥದಲ್ಲಿ ಬಸವಣ್ಣವರ ಕಾಯಕವೇ ಕೈಲಾಸ ಎಂದು ಹೇಳಿದ್ದರು. ಸ್ತ್ರೀ ಸ್ವಾತಂತ್ರÂದ ಬಗ್ಗೆ ಮೊದಲು ಮಾತನಾಡಿದ್ದು ಬಸವಾದಿ ಶರಣರು. ಎಲ್ಲಿ ಅಸಮಾನತೆ ಇರುತ್ತದೆಯೋ ಅಲ್ಲಿ, ಶೋಷಣೆ ಇರುತ್ತದೆ. ವಿಶ್ವದ ಮೊದಲ ಸಂಸ್ಕೃತಿ ಸೃಷ್ಟಿಸಿದವರು ಬಸವಣ್ಣನವರು. ಜಾತಿ ವ್ಯವಸ್ಥೆಗೆ ಅವರು ಅವಕಾಶ ಕೊಟ್ಟಿರಲಿಲ್ಲ ಎಂದರು.
ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರು, ಗದುಗನ ಡಾ|ತೋಂಟದ ಸಿದ್ದಲಿಂಗ ಸ್ವಾಮೀಜಿ, ನಾಗನೂರ ರುದ್ರಾಕ್ಷಿಮಠದ ಡಾ| ಸಿದ್ದರಾಮ ಸ್ವಾಮೀಜಿ, ಬಸವ ಧರ್ಮ ಪೀಠದ ಜಗದ್ಗುರು ಮಾತೆಮಹಾದೇವಿ, ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದದೇವರು, ಕೂಡಲಸಂಗಮ ಸಾರಂಗಮಠದ ಅಭಿನವ ಜಾತವೇದ ಶಿವಾಚಾರ್ಯ ಸ್ವಾಮೀಜಿ, ಸಿದ್ದನಕೊಳ್ಳದ ನಿರಂತರ ದಾಸೋಹ ಪೀಠದ ಡಾ|ಶಿವಕುಮಾರ ಸ್ವಾಮೀಜಿ, ಸಚಿವರಾದ ಎಂ.ಬಿ.ಪಾಟೀಲ, ಆರ್.ಬಿ.ತಿಮ್ಮಾಪುರ, ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ, ಶಾಸಕರಾದ ಜಿ.ಟಿ.ಪಾಟೀಲ, ಎಸ್.ಆರ್. ಪಾಟೀಲ, ವಿಜಯಾನಂದ ಕಾಶಪ್ಪನವರ, ಯುಕೆಪಿ ಆಯುಕ್ತ ಶಿವಯೋಗಿ ಕಳಸದ ಇದ್ದರು.