Advertisement

ಅಕ್ಷರ ಹೇಳಿದ, ಕೌರವ ಪ್ರಸಂಗ

09:35 PM Aug 02, 2019 | mahesh |

ಪ್ರಸಿದ್ಧ ವಿದ್ವಾಂಸ, ತಾಳಮದ್ದಲೆ ಅರ್ಥದಾರಿ, ಉಮಾಕಾಂತ ಭಟ್ಟ ಕೆರೇಕೈ ಅವರ “ಜೀವ-ಮಾನ’ ಕವನ ಸಂಕಲನದ ಬಿಡುಗಡೆ ಸಂದರ್ಭ. ಶಿರಸಿಯಲ್ಲಿ ನಡೆದ ಈ ಸಮಾರಂಭದಲ್ಲಿ, ಅಧ್ಯಕ್ಷತೆ ವಹಿಸಿದ್ದ ನೀನಾಸಂ ನಿರ್ದೇಶಕ ಕೆ.ವಿ. ಅಕ್ಷರ ಅವರು, ತಾಳಮದ್ದಲೆಯ ಸ್ವಾರಸ್ಯ ಪ್ರಸಂಗವೊಂದನ್ನು ಎಲ್ಲರ ಮುಂದಿಟ್ಟರು…

Advertisement

ಸಾಗರದಲ್ಲಿ ತಾಳಮದ್ದಲೆ ಏರ್ಪಾಟಾಗಿತ್ತು. ಕೃಷ್ಣನ ಎದುರು ತಾನು ಕೌರವನ ಪಾತ್ರ ಮಾಡಬೇಕು ಹಾಗೂ ಕೃಷ್ಣನ ಪಾತ್ರವನ್ನು ತಾಳಮದ್ದಲೆಯ ಪ್ರಸಿದ್ಧ ಅರ್ಥದಾರಿ ಉಮಾಕಾಂತ ಭಟ್ಟ ಕೆರೇಕೈ ಅವರೇ ಮಾಡಬೇಕು ಎಂಬುದು ಸಂಘಟಕ ಕಲಾವಿದನ ಒತ್ತಾಸೆ. ತಾಳ ಮದ್ದಲೆ ಶುರುವಾಯಿತು. ಮೊದಲೇ ನಿಶ್ಚಯಿಸಿದ್ದಂತೆ, ಕೃಷ್ಣ ಬರುವ ಮೊದಲು ಏರು ಧ್ವನಿಯಲ್ಲಿ ಕೌರವನ ಪಾತ್ರಧಾರಿ ಮಾತನಾಡಲು ಶುರುಮಾಡಿದ. ಹದಿನೈದು ನಿಮಿಷ ಕಳೆದಿರಬಹುದು. ಕೃಷ್ಣನ ಪ್ರವೇಶ ಆಗಬೇಕು… ಅಲ್ಲೀ ತನಕ ಕೌರವನ ಆಸ್ಥಾನದಲ್ಲಿ ಏರು ಧ್ವನಿಯಲ್ಲಿ ಮಾತು ನಡೆದಿತ್ತು.

ಕೃಷ್ಣ ಬಂದವನೇ ಕೌರವನಿಗೆ ಪಾಟಿ ಸವಾಲು ಹಾಕಿದ: “ಛೇ… ಕೌರವ, ಕೌರವಾ… ನಿನ್ನ ಆಸ್ಥಾನದಲ್ಲೇ ಹೀಗೆ ಇಷ್ಟೊಂದು ದೊಡ್ಡದಾಗಿ ಕೂಗಿದರೆ ಹೊರಗಿನಿಂದ ಬಂದ ನಾನು ಇನ್ನೆಷ್ಟು ದೊಡ್ಡದಾಗಿ ಕೂಗಬೇಕು?’ - ಇಷ್ಟು ಹೇಳಿದ್ದೇ ತಡ, ಸಭೆ ನಗೆಗಡಲಲ್ಲಿ ತೇಲಿತು! ಕೌರವನ ಮಾತು ಇಳಿಯಿತು.

ಇನ್ನೊಂದು, ಶೂರ್ಪನಖಾ ಮಾನಭಂಗ, ಕರಾಸುರ ಕಾಳಗ ತಾಳಮದ್ದಲೆ. ಪ್ರೇಕ್ಷಾಗೃಹ ತುಂಬಿತ್ತು. ಉಮಾಕಾಂತ ಭಟ್ಟರು, ರಾಮ; ಲಕ್ಷ್ಮಣನಾಗಿ, ರಾಧಾಕೃಷ್ಣ ಕಲ್ಚಾರ್‌ ಅಂತ ನೆನಪು.

“ಶೂರ್ಪನಖಾ ಮಾನಭಂಗ’ ತಾಳಮದ್ದಲೆ ಮೊದಲಿಗೆ. ಪ್ರಥಮ ರಾಮ ಹಾಗೂ ಶೂರ್ಪನಖಾ ಮಾತು ತಿಳಿ ಹಾಸ್ಯದಂತೆ ನಡೆದಿತ್ತು. ಪ್ರೇಕ್ಷಕರಿಗೂ ಬೋರಾಗುವಷ್ಟು, ಮೊದಲನೇ ರಾಮ ಹಾಸ್ಯದ ವಸ್ತುವಾಗಿದ್ದ. ರಾಮನ ಮಾತು, ಶೂರ್ಪನಖೀಗಿಂತ ವಿಡಂಬನೆಯ ಹಾಸ್ಯವಾಗಿತ್ತು. ರಾಮನ ಪಾತ್ರ ಕೂತವರಿಗೆ ಸರಿಯಾಗಿಲ್ಲ ಅಂತನ್ನಿಸಿತ್ತು.

Advertisement

ಮುಂದೆ ಬಂದದ್ದು ಕರಾಸುರ ಕಾಳಗ. ಎರಡನೇ ರಾಮನಾಗಿ, ಕೆರೆಕೈ ಭಟ್ಟರು ಬಂದರು. ಕಳೆದ ರಾಮ ಪಾತ್ರಧಾರಿಯ ಮಾತುಗಳನ್ನು ಮರೆಸಿ, ಹೊಸ ಸಂದರ್ಭ ಕಟ್ಟಿದರು. “ಸಮಾಜದಲ್ಲಿ ಕೆಳ ಮಟ್ಟದ ಸಂಸ್ಕಾರ ಉಳ್ಳವರ ಜೊತೆಗೆ ವಿನೋದ ಮಾಡಬಾರದು. ಅದರಿಂದ ಪ್ರಭಾವಿತನಾಗಿ ವಿನೋದ ಮಾಡಿದ್ದು ವಾದಕ್ಕೆ ಕಾರಣವಾಯಿತು. ವಿನೋದದ ಮಾತನಾಡುವ ಶೂರ್ಪನಖಿಗೂ ಸಂಸ್ಕಾರವಿಲ್ಲ. ಸಂಸ್ಕಾರವಿಲ್ಲದವರ ಜೊತೆ ವಿನೋದ ಮಾಡಬಾರದು. ಈ ವಿನೋದ ಅಥವಾ ಹಾಸ್ಯ ಎಂಬುದು ರಸವಾಗುವ ಸಾಧ್ಯತೆ ಆದಾಗ ಮಾತ್ರ ಆದರಣೀಯ’ ಎಂದು ಆರಂಭಿಸಿದರು.

ಇಲ್ಲಿ ಎರಡನೇ ರಾಮ ಕೆರೇಕೈ ಭಟ್ಟರು, ಮೊದಲ ಪಾತ್ರಧಾರಿಯ ನಿರ್ವಹಣೆಯ ಬಗ್ಗೆ ವಿಮರ್ಶೆಯ ಟಿಪ್ಪಣಿ ಕೊಟ್ಟಿದ್ದು, ಮೊದಲನೇ ಸ್ಥರ. ಹಾಸ್ಯ ಎಂಬ ರಸ ಯಾಕೆ ಬೇಕು ಹಾಗೂ ಹೇಗೆ ಸಿದ್ಧವಾಗುತ್ತದೆ ಎಂಬುದನ್ನು ತಿಳಿಸುವುದು, ಎರಡನೇ ಸ್ಥರ. ಮೂರನೆಯದು, ರಾಮ- ಲಕ್ಷ್ಮಣರು ಮುಂದೆ ಬರುವ ಗಂಡಾಂತರವನ್ನು ಮೊದಲೇ ಊಹಿಸಿ ಆತ್ಮಾವಲೋಕನ ಮಾಡಿಕೊಳ್ಳುವ ಸ್ಥರ.

ನನಗೂ ತಾಳಮದ್ದಲೆಯಲ್ಲಿ ಅರ್ಥ ಹೇಳಬೇಕು ಎಂದು ಅನ್ನಿಸಿದರೂ ಅರ್ಥ ಹೇಳಿಲ್ಲ. ಋಷಿಗಳು, ಅವರ ಮಕ್ಕಳು, ಅರ್ಜುನನ ಅಪ್ಪ ಯಾರೆಂದು ಕೇಳಿದರೆ, ಬರೆದುಕೊಂಡ ಹಾಳೆ ನೋಡಬೇಕಾಗುತ್ತದೆ!

ಸಮನ್ವಯ: ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next