Advertisement

ಭಾರತ್‌ ಅನುದಾನಿತ ಪ್ರೌಢಶಾಲೆಯಲ್ಲಿ ಅಕ್ಷರ ಕೈತೋಟ

09:51 AM Nov 11, 2019 | mahesh |

ಉಳ್ಳಾಲ: ಉಳ್ಳಾಲ ಮೊಗವೀರ ಸಂಘದಿಂದ ನಡೆಸಲ್ಪಡುವ ಮಾಸ್ತಿಕಟ್ಟೆಯ ಭಾರತ್‌ ಅನುದಾನಿತ ಪ್ರೌಢಶಾಲೆಯು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸುವ ನಿಟ್ಟಿನಲ್ಲಿ ಶಾಲೆಯ ತಾರಸಿಯಲ್ಲಿ ಅಕ್ಷರ ಕೈತೋಟವನ್ನು ನಿರ್ಮಿಸಿ ವಿದ್ಯಾರ್ಥಿಗಳಿಗೆ ಕೃಷಿಯ ಪಾಠವನ್ನು ಯಶಸ್ವಿಯಾಗಿ ಹೇಳಿಕೊಡಲಾಗುತ್ತಿದೆ. ಶಾಲೆಯ ತಾರಸಿಯ ಕೈತೋಟದಲ್ಲಿ ತರಕಾರಿಯನ್ನು ಬೆಳೆಸಿ ಬಿಸಿಯೂಟಕ್ಕೆ ಉಪಯೋಗಿಸುವ ಮೂಲಕ ವಿದ್ಯಾರ್ಥಿಗಳು ದುಡಿಮೆಯ ಫಲವನ್ನು ಉಣ್ಣುವ ಮೂಲಕ ಮಾದರಿಯಾಗಿದ್ದಾರೆ.

Advertisement

ಎರಡನೇ ಪ್ರಯೋಗದಲ್ಲಿ ಯಶಸ್ಸು
ಮಕ್ಕಳ ಪಠ್ಯಕ್ರಮವನ್ನು ಪಠ್ಯಪುಸ್ತಕದಿಂದ ಆಚೆಗೆ ವಿಸ್ತರಿಸುವ ಪ್ರಸ್ತುತ ಶಿಕ್ಷಣ ನೀತಿಗೆ ಪೂರಕವಾಗಿ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ವೈ. ವಿನಯಾ ಕುಮಾರಿ ಅವರ ನೇತೃತ್ವದಲ್ಲಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಪ್ರೀತಂ ಕುಮಾರ್‌ ಉಸ್ತುವಾರಿಯಲ್ಲಿ ಶಾಲಾ ಶಿಕ್ಷಕರ ಮಾರ್ಗದರ್ಶನದಲ್ಲಿ ಕಳೆದ ಶೈಕ್ಷಣಿಕ ವರ್ಷ ನೆಲದಲ್ಲಿ ಪ್ರಥಮ ಪ್ರಯೋಗ ನಡೆಸಿ ವಿಫ‌ಲವಾಗಿದ್ದರು. ಇದನ್ನೇ ಸವಾಲಾಗಿ ಸ್ವೀಕರಿಸಿದ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ತಂಡ ಈ ಶೈಕ್ಷಣಿಕ ವರ್ಷದಲ್ಲಿ ವಿನೂತನ ಮಾದರಿಯಾಗಿ ಶಾಲೆಯ ತಾರಸಿಯಲ್ಲಿ ಕೃಷಿ ಮಾಡಲಾಗುತ್ತದೆ. ಶಾಲೆಯ ಹಳೆ ವಿದ್ಯಾರ್ಥಿ, ಪ್ರಗತಿಪರ ಕೃಷಿಕ ವಿಜಯ್‌ಕುಮಾರ್‌ ಉಳಿಯ ಅವರು ಕೃಷಿ ಪಾಠವನ್ನು ಮಕ್ಕಳಿಗೆ ಆರಂಭಿಸಿ ಯಶಸ್ವಿಯಾಗಿದ್ದಾರೆ.

ಆರಂಭದಲ್ಲಿ ಬಂಡವಾಳವನ್ನು ಶಾಲಾ ಶಿಕ್ಷಕರೇ ಒಟ್ಟು ಮಾಡಿ ತರಕಾರಿ ಕೃಷಿಗೆ ಚಾಲನೆ ನೀಡಿದ್ದು, ಶಾಲೆಯಲ್ಲಿ ಬೆಳೆದ ತರಕಾರಿಯನ್ನು ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸಿ ಉಳಿದ ತರಕಾರಿಗಳನ್ನು ಮಕ್ಕಳಿಗೆ ಮತ್ತು ಶಾಲಾ ಶಿಕ್ಷಕರು ತೂಕ ಮಾಡಿ ಏಲಂ ಮೂಲಕ ಖರೀದಿಸುತ್ತಾರೆ. ಈ ಕೃಷಿಯಲ್ಲಿ ತೊಡಗಿಕೊಂಡ ಅನೇಕ ವಿದ್ಯಾರ್ಥಿಗಳ ವ್ಯಕ್ತಿತ್ವದಲ್ಲಿ ಪರಿವರ್ತನೆಯಾಗಿ, ಹಲವರಿಗೆ ಕೃಷಿ ಕುರಿತು ಆಸಕ್ತಿ ಮೂಡಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕಿ ವೈ ವಿನಯಾ ಕುಮಾರಿ.

ತರಕಾರಿ ಗಿಡಗಳಿಗೆ ಯಾವ ರೀತಿ ನೀರು ಉಣಿಸಬೇಕು, ಅದರ ಮಣ್ಣು, ಗೊಬ್ಬರ ಹಾಕುವ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಶಿಕ್ಷಕರಿಗೂ ಮಾಹಿತಿ ಲಭ್ಯವಾಗಿದೆ. ಶಿಕ್ಷಣದಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಈ ಚಟುವಟಿಕೆಯಲ್ಲಿ ತೊಡಗಿಸಿ ಅನಂತರ ಅವರ ಶೈಕ್ಷಣಿಕ ಮಟ್ಟವೂ ಹೆಚ್ಚಾಗಿದೆ.

ಪ್ರಗತಿಪರ ಕೃಷಿಕ ಉಳ್ಳಾಲದ ವಿಜಯ ಅವರ ನಿರ್ದೇಶನದಂತೆ ತರಕಾರಿಯನ್ನು ಬೆಳೆಸಲಾಗಿದೆ. ಅಲಸಂಡೆ, ಕೆಂಪು ಹರಿವೆ, ಮೂಲಂಗಿ, ಬಾಳೆ ಗಿಡ ಸಹಿತ 12 ರೀತಿಯ ತರಕಾರಿಗಳನ್ನು ಬೆಳೆಸಲಾಗಿದೆ, ಕೃಷಿಗೆ ಬೇಕಾದ ಬೀಜಗಳನ್ನು ವಿಜಯ ಅವರೇ ಒದಗಿಸಿದ್ದು ವಿದ್ಯಾರ್ಥಿಗಳು ರಜೆಯ ಸಂದರ್ಭದಲ್ಲೂ ಶಾಲೆಗೆ ಆಗಮಸಿ ಗಿಡಗಳ ಆರೈಕೆ ನಡೆಸುತ್ತಾರೆ ಎನ್ನುತ್ತಾರೆ ಕೃಷಿಯ ಉಸ್ತುವಾರಿ ಪ್ರೀತಂ ಕುಮಾರ್‌.

Advertisement

ಕೃಷಿ ಬೆಳೆಸುವುದು ಮುಖ್ಯ ಉದ್ದೇಶ
ಕೈತೋಟ ನಿರ್ಮಾಣಕ್ಕೆ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿದ್ದು ರೆಫ್ರಿಜರೇಟರ್‌ಗಳ ಸುಮಾರು 200 ಥರ್ಮೋಕಾಲ್‌ ಬಾಕ್ಸ್‌ಗಳನ್ನು ಬಳಸಿದ್ದು, ಕಸದಿಂದ ರಸ ಮಾಡುವ ಕಾರ್ಯ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಕೃಷಿ ಪ್ರೇಮವನ್ನು ಬೆಳೆಸುವುದೇ ಮುಖ್ಯ ಉದ್ಧೇಶವಾಗಿದೆ.
 - ವಿಜಯ ಕುಮಾರ್‌ ಉಳಿಯ, ಪ್ರಗತಿಪರ ಕೃಷಿಕ

ಮಾದರಿ ಕೃಷಿ ಪಾಠ
ಶಾಲಾ ಆಡಳಿತ ಮಂಡಳಿಯ ಸಹಕಾರದಿಂದ ಶಾಲೆಯ ಎಂಟು ಸಾವಿರ ಚದರಡಿಯ ತಾರಸಿಯಲ್ಲಿ ಮಾದರಿಯಾಗಿ ಕೃಷಿ ಪಾಠವನ್ನು ಅಳವಡಿಸಿದ್ದೇವೆ. ಇದೂ ಒಂದು ಕಲಿಕೆಯ ಭಾಗವಾಗಿದ್ದು, ವಿದ್ಯಾರ್ಥಿಗಳು ಸಂತೋಷದಿಂದ ಪಾಲ್ಗೊಳ್ಳುತ್ತಾರೆ.
 - ವೈ. ವಿನಯ ಕುಮಾರಿ, ಮುಖ್ಯ ಶಿಕ್ಷಕಿ, ಭಾರತ್‌ ಅನುದಾನಿತ ಪ್ರೌಢಶಾಲೆ, ಉಳ್ಳಾಲ

-  ವಸಂತ ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next