Advertisement

ಬೆಂಗಳೂರು/ಮೈಸೂರು/ಶಿವಮೊಗ್ಗ: ರಾಜ್ಯದಲ್ಲಿ ಭಾರೀ ಕಾಮಗಾರಿಗಳು ನಡೆಯುತ್ತಿದ್ದು, ಗಣಿಗಾರಿಕೆ ಅನಿವಾರ್ಯ ಎಂದು ಸಿಎಂ ಯಡಿಯೂರಪ್ಪ ಪ್ರತಿಪಾದಿಸಿದ್ದಾರೆ. ಅಕ್ರಮವಾಗಿ ನಡೆಯುತ್ತಿರುವ ಗಣಿ ಗಾರಿಕೆಗಳನ್ನು ಸಕ್ರಮ ಮಾಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

Advertisement

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಿಎಂ ಹೇಳಿಕೆಯನ್ನು ತೀವ್ರ ವಾಗಿ ವಿರೋಧಿಸಿದ್ದಾರೆ. ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರು ಅರ್ಜಿ ಸಲ್ಲಿಸಿ ಪರವಾನಿಗೆ ಪಡೆಯಬಹುದು ಎಂದು ಸಿಎಂ ಹೇಳಿದ್ದಾರೆ. ಅಕ್ರಮ ಗಣಿಗಾರಿಕೆ ಅಪರಾಧ. ಅದಕ್ಕೆ ಏನು ಶಿಕ್ಷೆ? ಅರ್ಜಿ ಹಾಕಿ ಅಕ್ರಮವನ್ನು ಸಕ್ರಮ ಮಾಡಿಕೊಳ್ಳಿ ಎಂದು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಹೇಳಬಹುದೇ ಎಂದು ಪ್ರಶ್ನಿಸಿದ್ದಾರೆ.

ಅಕ್ರಮ ಗಣಿಗಾರಿಕೆಗೆ ಅವಕಾಶ ಇಲ್ಲ. ಅಕ್ರಮ ಗಣಿಗಾರಿಕೆ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರಿನಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ ಎಚ್ಚರಿಕೆ ನೀಡಿದರು.

ಇದಕ್ಕೆ ಪ್ರತಿಯಾಗಿ ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಇದು ಅಕ್ರಮ ಮನೆ, ಜಮೀನು ಸಕ್ರಮದಂತಲ್ಲ. ಗಣಿ ಇಲಾಖೆಯ ಕಾನೂನು ಇರುವುದೇಕೆ? ಸಿಎಂ ಹೇಳಿಕೆ ಬೇಜವಾಬ್ದಾರಿತನದ ಪರಮಾವಧಿ. ಹುಣಸೋಡು ದುರಂತಕ್ಕೆ ಸಿಎಂ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರೇ ಹೊಣೆ ಎಂದು ಆರೋಪಿಸಿದರು.

ಹುಣಸೋಡಿಗೆ ಬಿಎಸ್‌ವೈ ಭೇಟಿ :

Advertisement

ಹುಣಸೋಡು ಕಲ್ಲುಕೋರೆಗೆ ಸಿಎಂ ಯಡಿಯೂರಪ್ಪ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾತನಾಡಿ, ಘಟನೆ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಲಾಗಿದ್ದು, ಅನಂತರ ಸ್ಪಷ್ಟ ಚಿತ್ರಣ ಲಭಿಸಲಿದೆ. ನಿಷ್ಪಕ್ಷವಾದ ತನಿಖೆ ನಡೆಸಿ ಅಪರಾಧಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದರು. ಈ ಪ್ರದೇಶದ ಎಲ್ಲ ಕ್ರಶರ್‌ಗಳು ಪರವಾನಿಗೆ ಪಡೆದು ಕಾರ್ಯನಿರ್ವಹಿಸುತ್ತಿವೆ. ಆದರೆ ಇಲ್ಲಿ ಗಣಿಗಾರಿಕೆಗೆ ಅನುಮತಿ ಇಲ್ಲ. ಇದು ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು, ಈ ಕುರಿತು ಸರಕಾರ ಮರುಪರಿಶೀಲನೆ ನಡೆಸಲಿದೆ ಎಂದರು.

ಸ್ಫೋಟ ಸ್ಥಳದಲ್ಲಿ 3 ವಾಹನ? :

ಹುಣಸೋಡು ಸ್ಫೋಟ ಸಂಭವಿಸಿದಾಗ ಒಟ್ಟು 3 ವಾಹನಗಳಿದ್ದವು.  ಒಂದು ಲಾರಿಯಲ್ಲಿ ಸ್ಫೋಟಕಗಳಿದ್ದು, ಇನ್ನೆರಡು ಬೊಲೆರೋ ಇದ್ದವು ಎಂದು ಇಲ್ಲಿನ ನಿವಾಸಿಗಳು ಹೇಳುತ್ತಿದ್ದಾರೆ. ಈ ಸಂದರ್ಭ ಹಲವು ಜನರಿದ್ದರು. ಕೇವಲ ಐವರ ಮೃತ ದೇಹ ಸಿಕ್ಕಿವೆ. ಉಳಿದವರು ನಾಪತ್ತೆಯಾಗಿದ್ದಾರೆ. ಮುಖ್ಯವಾಗಿ ಶಶಿ ಕುಮಾರ್‌ ಎಂಬಾತ ಪತ್ತೆಯಾದರೆ ಹಲವು ರಹಸ್ಯಗಳು ಬಯ ಲಾಗಲಿವೆ ಎಂದು ಮೂಲಗಳು ತಿಳಿಸಿವೆ.

ಪರಿಹಾರ ಕೊಡುವವರು ಯಾರು? : ಸ್ಫೋಟದಿಂದ ಮನೆ, ಕಟ್ಟಡಗಳು ಹಾನಿಗೊಳಗಾಗಿದ್ದು, ಇದಕ್ಕೆ ಪರಿಹಾರ ನೀಡುವವರು ಯಾರು ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಮೃತರಲ್ಲಿ ಇಬ್ಬರು ನವವಿವಾಹಿತರು. ಇನ್ನಿಬ್ಬರಲ್ಲಿ ಓರ್ವ 5; ಮತ್ತೂಬ್ಬ 14 ದಿನಗಳ ಮಗುವಿನ ತಂದೆ. ಸರಕಾರ ಪರಿಹಾರ ಒದಗಿಸಿದರೂ ಈ ಕುಟುಂಬಗಳ ಗೋಳು ಪರಿಹರಿಸಲಾಗುವುದೇ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next