Advertisement

ಅಕ್ಕಿಆಲೂರಲ್ಲೂ ಪಿಎಲ್‌ಡಿ ಬ್ಯಾಂಕಿಗೆ ಬೀಗ ಜಡಿದು ಪ್ರತಿಭಟನೆ 

10:40 AM Mar 09, 2019 | Team Udayavani |

ಅಕ್ಕಿಆಲೂರು: ಸಾಲ ವಸೂಲಾಗದ ಹಿನ್ನೆಲೆಯಲ್ಲಿ ರೈತನ ಟ್ರ್ಯಾಕ್ಟರ್‌ ಜಪ್ತಿ ಮಾಡಿದ್ದ ಪಿಎಲ್‌ಡಿ ಬ್ಯಾಂಕ್‌ ಅಧಿಕಾರಿಗಳ ಕ್ರಮ ಖಂಡಿಸಿ ಗುರುವಾರ ಬ್ಯಾಡಗಿಯಲ್ಲಿ ರೈತ ಸಂಘ ಬ್ಯಾಂಕ್‌ ಗೆ ಬೀಗ ಜಡಿದು ಪ್ರತಿಭಟಿಸಿದ್ದರು. ಶುಕ್ರವಾರ ಅಕ್ಕಿಆಲೂರಿನಲ್ಲಿ ಘಟನೆ ಮರುಕಳಿಸಿದೆ.

Advertisement

ಸಮೀಪದ ಇನಾಂಯಲ್ಲಾಪುರ ಗ್ರಾಮದ ರೈತ ಪುಟ್ಟಪ್ಪ ಬನ್ನಿಹಳ್ಳಿ ಟ್ರ್ಯಾಕ್ಟರ್‌ ಮೇಲೆ ಪಡೆದಿದ್ದ ಸಾಲ ಮರುಪಾವತಿ ಮಾಡಿಲ್ಲವೆಂದು ಅಧಿಕಾರಿಗಳು ರೈತನ ಟ್ರ್ಯಾಕ್ಟರ್‌ ಜಪ್ತಿ ಮಾಡಿದ್ದಾರೆ. ಈ ಸುದ್ದಿ ತಿಳಿದು ರಾಜ್ಯ ರೈತ ಸಂಘ ಮತ್ತು ಹಸೀರು ಸೇನೆ ಕಾರ್ಯಕರ್ತರು ಪಟ್ಟಣದ ಪಿಎಲ್‌ಡಿ ಬ್ಯಾಂಕಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ರೈತ ಪುಟ್ಟಪ್ಪ ಬನ್ನಿಹಳ್ಳಿ ಐದಾರು ವರ್ಷಗಳ ಹಿಂದೆ ಪಿಎಲ್‌ಡಿ ಬ್ಯಾಂಕಿನಲ್ಲಿ ಟ್ರ್ಯಾಕ್ಟರ್‌ ಸಾಲ ಪಡೆದುಕೊಂಡಿದ್ದ. ನಾಲ್ಕು ಕಂತುಗಳಿಂದ ಆತ ಸುಸ್ತಿದಾರನಾಗಿದ್ದ. 5 ಲಕ್ಷ ಸಾಲ ಪಡೆದು 3.32 ಲಕ್ಷಗಳಷ್ಟು(ಬಡ್ಡಿಬಿಟ್ಟು) ಮೊತ್ತ (ಅಸಲು) ಬಾಕಿ ಇದೆ. ಕಳೆದ ಮೂರು ವರ್ಷಗಳಿಂದ ಸಮರ್ಪಕ ಬೆಳೆ ಬಾರದೇ ರೈತ ತಾನು ತೆಗೆದುಕೊಂಡ ಸಾಲ ಮರುಪಾವತಿ ಮಾಡುವಲ್ಲಿ ವಿಫಲವಾಗಿದ್ದ, ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಸೂಚನೆಯಂತೆ ಬ್ಯಾಂಕಿನ ಅಧಿಕಾರಿಗಳು ರೈತನಟ್ರ್ಯಾಕ್ಟರ್‌ ಜಪ್ತಿ ಮಾಡಿದ್ದರು. ಇದನ್ನು ಖಂಡಿಸಿ ರೈತ ಸಂಘಟನೆ ಕಾರ್ಯಕರ್ತರು ಸರ್ಕಾರದ
ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬ್ಯಾಂಕಿಗೆ ಬೀಗ ಜಡಿದರು. ಘಟನೆಯಲ್ಲಿ ಕಾರ್ಯಕರ್ತರು ಹಾಗೂ ಬ್ಯಾಂಕಿನ ಅ ಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ ಮಾತನಾಡಿ, ಕೃಷಿ ಚಟುವಟಿಕೆಗಳ ಮೇಲಿನ ಎಲ್ಲ ಸಾಲಗಳನ್ನು ಮನ್ನಾ ಮಾಡುವುದಾಗಿ ಘೋಷಿಸಿದ್ದ ಸರ್ಕಾರ, ಸಹಕಾರಿ ಬ್ಯಾಂಕುಗಳಲ್ಲಿ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲಗಳ ಬಡ್ಡಿಮನ್ನಾ ಮಾಡುತ್ತಿದೆ. ಪಿಎಲ್‌ಡಿ ಬ್ಯಾಂಕುಗಳ ಸಾಲಮನ್ನಾ ಮಾಡುತ್ತಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಾಲಮನ್ನಾ ನೀತಿಯನ್ನು ಸೂಕ್ತವಾಗಿ ಅನುಷ್ಠಾನಕ್ಕೆ ತರುವಲ್ಲಿ ವಿಫಲವಾಗಿದ್ದಾರೆ. ಮಳೆ-ಬೆಳೆ ಇಲ್ಲದೆ ಪರದಾಡುತ್ತಿರುವ ರೈತ ಸಮುದಾಯ, ಬ್ಯಾಂಕುಗಳ ಬಡ್ಡಿ ಆಕರಣೆ ಕೂಪಕ್ಕೆ ಸಿಲುಕಿ ಹೊಲ-ಮನೆ ಮಾರಿಕೊಳ್ಳುವ ಸ್ಥಿತಿಗೆ ಬಂದು ತಲುಪಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ತಾಲೂಕಾಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ರೈತರ ಸಾಲಮನ್ನಾ ವಿಚಾರದಲ್ಲಿ ನಿರ್ಲಕ್ಷ್ಯ  ಧೋರಣೆ ಅನುಸರಿಸುತ್ತಿದ್ದಾರೆ. ರೈತರಿಗೆ ಸಾಲಮನ್ನಾ ವಿಚಾರದಲ್ಲಿ ಸುಳ್ಳು ಹೇಳುವ ಪ್ರಯತ್ನಗಳು ನಡೆಯುತ್ತಲೇ ಇವೆ. ಹೀಗಾಗಿ ಮಾ. 9 ರಂದು ನಡೆಯುವ ರಾಹುಲ್‌ ಗಾಂಧಿ ಕಾರ್ಯಕ್ರಮದಂದು ಜಿಲ್ಲೆಯ ರೈತರು ಕಪ್ಪುಬಟ್ಟೆ ಧರಿಸಲು ನಿರ್ಧರಿಸಿದ್ದಾರೆ ಎಂದರು. ಈ ವೇಳೆ ಮಾತನಾಡಿದ ಬ್ಯಾಂಕಿನ ವ್ಯವಸ್ಥಾಪಕ ಎಂ.ಎಂ.ಸೊಪ್ಪಣ್ಣವರ, ರಾಜ್ಯ ಪಿಎಲ್‌ಡಿ ಬ್ಯಾಂಕಿನಿಂದ ಸಾಲ ವಸೂಲಿ ಮಾಡಲು ಆದೇಶವಿದೆ. ನಿಯಮದಂತೆ ನಾವು ನಮ್ಮ ಕರ್ತವ್ಯ ಮಾಡಬೇಕಿದೆ. ಸರ್ಕಾರ ಬ್ಯಾಂಕ್‌ ಸಾಲ ತುಂಬಿ ವಸೂಲಿಗೆ ಮುಂದಾಗದಂತೆ ಆದೇಶಿಸಿದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದ ಅವರು, ರೈತರೊಂದಿಗೆ ಸಮಾಲೋಚಿಸಿ ಜಪ್ತಿ ಮಾಡಿದ ಟ್ರ್ಯಾಕ್ಟರ್‌ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಹಾಲಿಂಗಪ್ಪ ಅಕ್ಕಿವಳ್ಳಿ, ಮಹೇಶ ವಿರುಪಣ್ಣನವರ, ರಾಮಪ್ಪ ಕೋಟಿ, ಎಂ.ಎಫ್‌.ಬಡಗಿ, ರುದ್ರಪ್ಪ ಹಣ್ಣಿ, ಮಹೇಶ ಕೊಂಡೋಜಿ, ಪುಟ್ಟಪ್ಪ ಬನ್ನಿಹಳ್ಳಿ, ಸೋಮಣ್ಣ ಜಡೆಗೊಂಡರ ಸೇರಿದಂತೆ ರೈತ ಸಂಘದ
ಮುಖಂಡರು ಪಾಲ್ಗೊಂಡಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next