ಸೊಲ್ಲಾಪುರ: ಸಾಮೂಹಿಕ ವಿವಾಹ ಸಮಾರಂಭಗಳಲ್ಲಿ ಮದುವೆಯಾಗುವ ವಧು-ವರರು ಪುಣ್ಯವಂತರು ಎಂದು ಗೌಡಗಾಂವ ಮಠದ ಪೂಜ್ಯ ಡಾ| ಜಯಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.
ಅಕ್ಕಲಕೋಟ ನಗರದ ವರಿಷ್ಠ ಪ್ರಾಥಮಿಕ ಶಾಲೆ ಕ್ರೀಡಾಂಗಣದಲ್ಲಿ ವಿವೇಕಾನಂದ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಸರ್ವಧರ್ಮಿಯ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದ ಅವರು, ಅದೆಷ್ಟೋ ತಂದೆ-ತಾಯಿಗಳು ತಮ್ಮ ಮಕ್ಕಳ ಮದುವೆಗೆ ಸಾಲ ಮಾಡಿ, ಆಸ್ತಿ-ಅಂತಸ್ತು ಮಾರುವ ಮೂಲಕ ನೋವುಗಳನ್ನು ಅನುಭವಿಸುತ್ತಿದ್ದಾರೆ. ಇಂತಹ ಸಾಮೂಹಿಕ ವಿವಾಹ ಸಮಾರಂಭದಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದರು.
ಸರ್ವಧರ್ಮಿಯ ಸಾಮೂಹಿಕ ವಿವಾಹ ಸಮಾರಂಭದಲ್ಲಿ 34 ಜೋಡಿಗಳು ಹಸೆಮಣೆ ಏರಿದರು. ಮದುವೆ ಮಾಡಿಕೊಂಡ ಜೋಡಿಗಳಿಗೆ ಬಟ್ಟೆ, ವಧುವಿಗೆ ತಾಳಿ, ಕಾಲುಂಗರ ಮತ್ತಿತರ ವಸ್ತುಗಳನ್ನು ಪ್ರತಿಷ್ಠಾನದ ವತಿಯಿಂದ ನೀಡಲಾಯಿತು. ವಧು-ವರರಿಗೆ ವೈದ್ಯಕೀಯ ಸಲಹೆ, ಜೀವವಿಮೆ ಹಾಗೂ ಹೆಣ್ಣುಮಗು ಜನಿಸಿದರೆ ಎರಡು ಸಾವಿರ ರೂ. ಠೇವಣಿಯ ಬಾಂಡ್ ನೀಡಲಾಗುತ್ತದೆ ಎಂದು ಪ್ರತಿಷ್ಠಾನ ಅಧ್ಯಕ್ಷ ಸಚಿನ ಕಲ್ಯಾಣಶೆಟ್ಟಿ ತಿಳಿಸಿದರು.
ಅಕ್ಕಲಕೋಟ ವಿರಕ್ತಮಠದ ಪೂಜ್ಯ ಬಸವಲಿಂಗ ಶ್ರೀ, ಗೌಡಗಾಂವದ ಡಾ| ಜಯಸಿದ್ಧೇಶ್ವರ ಶಿವಾಚಾರ್ಯರು, ನಾಗಣಸೂರದ ಪೂಜ್ಯ ಶ್ರೀಕಂಠ ಶಿವಾಚಾರ್ಯರು, ಮಂದ್ರುಪದ ರೇಣುಕ ಶಿವಾಚಾರ್ಯರು, ಮಾದನಹಿಪ್ಪರಗಾದ ಶ್ರೀಗಳು ಶುಭ ಹಾರೈಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಹಾಜಿ ಪವಾರ, ಯುವನಾಯಕ ರೋಹನ ದೇಶಮುಖ, ಮೇಯರ್ ಶೋಭಾ ಬನಶೆಟ್ಟಿ, ಜಿಲ್ಲಾ ಪಂ. ಉಪಾಧ್ಯಕ್ಷ ಶಿವಾನಂದ ಪಾಟೀಲ, ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೆಜಯ ಭೋಸಲೆ, ದೇವಸ್ಥಾನ ಅಧ್ಯಕ್ಷ ಮಹೇಶ ಇಂಗಳೆ, ಜಿ.ಪಂ. ಸದಸ್ಯ ಆನಂದ ತಾನವಡೆ, ಮಾಜಿ ನಗರಾಧ್ಯಕ್ಷೆ ಡಾ| ಸುವರ್ಣ ಮಲಗೊಂಡ, ಮಹಾನಂದಾ ಸ್ವಾಮಿ, ಉಪನಗರಾಧ್ಯಕ್ಷ ಯಶವಂತ ದೋಂಗಡೆ, ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ದಿಲೀಪ ಸಿದ್ಧೆ ಮತ್ತಿತರರು ಇದ್ದರು.
ಶ್ರೀಮಂತ ರಾಣಿ ನಿರ್ಮಲಾರಾಜೆ ಕನ್ಯಾ ಪ್ರಶಾಲೆಯ ಆವರಣದಲ್ಲಿ ಮುಂಜಾನೆ 10 ರಿಂದ ಮಧ್ಯಾಹ್ನ 4ರ ವರೆಗೆ ಭೋಜನ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 30 ಸಾವಿರ ಜನರು ಭೋಜನ ಸ್ವೀಕರಿಸಿದರು. ಕಾರ್ಯಕ್ರಮ ಯಶಸ್ವಿಯಾಗಿ ಸುಮಾರು 27 ವಿವಿಧ ಸಮಿತಿಗಳನ್ನು ನೇಮಿಸಲಾಗಿತ್ತು.