Advertisement

ಅಕ್ಕ ಮಹಾದೇವಿ ಮಹಿಳಾ ವಿವಿ ಉಳಿಸಲು ಹೋರಾಟ

03:14 PM Jan 26, 2022 | Shwetha M |

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವನ್ನು ಸಹ ಶಿಕ್ಷಣ-ಯುನಿಟರಿ- ಕ್ಲಸ್ಟರ್‌ ವಿಶ್ವವಿದ್ಯಾಲಯವಾಗಿ ಪರಿವರ್ತಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂಬ ಸಂಗತಿ ಮುನ್ನೆಲೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಚಿಂತಕರು, ಸಮಾಜ ಸೇವಕರು ಮತ್ತು ಎಲ್ಲ ಪ್ರಗತಿಪರ, ಮಹಿಳಾಪರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಭೆ ಸೇರಿ ಚರ್ಚೆ ನಡೆಸಿದ್ದಾರೆ.

Advertisement

ವಿಜಯಪುರ ಜಿಲ್ಲೆಯ ಪ್ರಗತಿಪರ ಸಂಘಟನೆಗಳ ಮುಖಂಡರು ಮತ್ತು ಚಿಂತಕರು, ಸರ್ಕಾರ ಇಂತಹ ಕ್ರಮ ಕೈಗೊಳ್ಳಲಿದೆ ಎಂಬ ಮಾಹಿತಿ, ಅನುಮಾನ ಹರಡಿದೆ. ಒಂದೊಮ್ಮೆ ಇದು ನಿಜವೇ ಆಗಿದ್ದಲ್ಲಿ ಈ ಬೆಳವಣಿಗೆ ಅತ್ಯಂತ ಅಪಾಯಕಾರಿ ಎಂದು ಅಭಿಪ್ರಾಯಪಟ್ಟರು.

ಸರ್ಕಾರ ಇಂಥ ನಿರ್ಣಯ ಕೈಗೊಂಡಲ್ಲಿ ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿಯುವವರೆಗೂ ಹೋರಾಟ ನಡೆಸಲಾಗುತ್ತದೆ. ಈ ಬಗ್ಗೆ ಆತಂಕ ಹಬ್ಬಿರುವ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ವಿಶ್ವವಿದ್ಯಾಲಯದ ಕುಲಪತಿಗಳು ಖಚಿತವಾಗಿ ಭರವಸೆ ನೀಡುವವರೆಗೆ ಹೋರಾಟ ಮುಂದುವರಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ವಿಶ್ವವಿದ್ಯಾಲಯದ ಹಿಂದಿನ ಸಿಂಡಿಕೇಟ್‌ ಸದಸ್ಯೆಯಾದ ವಿದ್ಯಾವತಿ ಅಂಕಲಗಿ, ಮಲ್ಲಮ್ಮ ಯಳವಾರ ಮಾತನಾಡಿ, ಈ ವಿಶ್ವವಿದ್ಯಾಲಯವು ವಿಜಯಪುರ ಜಿಲ್ಲೆಯ ಜನತೆಯ ಹೋರಾಟದ ಫಲವಾಗಿ ಮತ್ತು ನಂಜುಂಡಯ್ಯ ವರದಿ ಪ್ರಕಾರವಾಗಿ ಮಹಿಳೆಯರ ಉನ್ನತ ಶಿಕ್ಷಣಕ್ಕೆ ಉತ್ತೇಜನವಾಗಿ ರೂಪುಗೊಂಡದ್ದು. ಇದನ್ನು ಮುಚ್ಚಲು ಅವಕಾಶ ಕೊಡುವುದಿಲ್ಲ ಎಂದರು.

ದಲಿತ ವಿದ್ಯಾರ್ಥಿ ಪರಿಷತ್‌ ಮುಖಂಡ ಶ್ರೀನಾಥ ಪೂಜಾರಿ ಮಾತನಾಡಿ, ಸರ್ಕಾರ ಹೊಸ ಶಿಕ್ಷಣ ನೀತಿ ಅನ್ವಯ ಮತ್ತು ತನ್ನ ಜನ ವಿರೋಧಿ ನಡೆಯ ಭಾಗವಾಗಿ ಇಂಥ ನಿರ್ಧಾರಕ್ಕೆ ಬರುತ್ತಿದೆ. ಸಂಪನ್ಮೂಲಗಳ ಕೊರತೆಯ ಸುದ್ದಿಯೂ ಕೇಳಿ ಬಂದಿದೆ ಎಂದು ದೂರದಿರು.

Advertisement

ರಾಜ್ಯದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪಿಸಲು ಸಂಪನ್ಮೂಲದ ಕೊರತೆ ಹೇಳದ ಸರ್ಕಾರ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯದ ಬಲವರ್ಧನೆಗಾಗಿ ಆರ್ಥಿಕ ನೆರವು ನೀಡುತ್ತಿಲ್ಲ. ಮಹಿಳಾ ವಿಶ್ವವಿದ್ಯಾಲಯವನ್ನು ಮುಚ್ಚುವ ಸುದ್ದಿ ನಿಜವೇ ಆಗಿದ್ದಲ್ಲಿ ರಾಜ್ಯ ಮಟ್ಟದಲ್ಲಿ ಉಗ್ರ ಹೋರಾಟ ರೂಪಿಸುವುದಾಗಿ ಎಚ್ಚರಿಸಿದರು.

ಸಚಿವ ಗೋವಿಂದ ಕಾರಜೋಳ ಸತ್ಯ ಸಂಗತಿಯಲ್ಲ ಎಂಬ ಹೇಳಿಕೆ ನೀಡಿದ್ದರೂ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಆಡಳಿಯ ಮಂಡಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಉನ್ನತ ಶಿಕ್ಷಣಕ್ಕಾಗಲಿ ಅಥವಾ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಯಾರಿಂದಲೂ ಇನ್ನೂ ದೃಢಪಟ್ಟಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಮನವಿಗೆ ಸ್ಪಂದಿಸಿ ಮಹಿಳಾ ವಿಶ್ವವಿದ್ಯಾಲಯವನ್ನು ಉಳಿಸಬೇಕು. ಈ ಬಗ್ಗೆ ಖಚಿತ ಹೇಳಿಕೆ ನೀಡಿದ ನಂತರವೇ ಹೋರಾಟ ಕೈ ಬಿಡಲು ಸಭೆಯಲ್ಲಿ ನಿರ್ಧರಿಸಲಾಯಿತು.

ಪ್ರಾಂತ ರೈತ ಸಂಘದ ಭೀಮಸಿ ಕಲಾದಗಿ, ಪೆಡಿನಾದ ಪ್ರಭುಗೌಡ ಪಾಟೀಲ, ಜನವಾದಿ ಮಹಿಳಾ ಸಂಘಟನೆಯ ಸುರೇಖಾ ರಜಪೂತ, ವಿದ್ಯಾವತಿ ಅಂಕಲಗಿ, ಮಲ್ಲಮ್ಮ ಯಾಳವಾರ, ಇರ್ಫಾನ್‌ ಶೇಖ್‌, ಲಕ್ಷ್ಮಣ ಹಂದ್ರಾಳ, ಅಕ್ಷಯ ಅಜಮನಿ, ಭಾರತಿ ಹೊಸಮನಿ, ಸದಾನಂದ ಮೋದಿ, ದಸ್ತಗಿರಿ ಉಕ್ಕಲಿ, ಪ್ರಕಾಶ ಕಟ್ಟಿಮನಿ, ದೇವಾನಂದ ಲಚ್ಯಾಣ, ಆನಂದ ಮುದೂರ, ಶ್ರೀಧರ ಕೊಣ್ಣೂರ, ಸಿದ್ದಲಿಂಗ ಬಾಗೇವಾಡಿ, ಭರತ, ಯಮನೂರಿ ಸಿಂದಗಿರಿ, ಪ್ರಕಾಶ ಹಿಟ್ನಳ್ಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next