ಬಿರುಬೇಸಗೆ. ಮನೆಯಿಂದ ಹೊರಬಂದರೆ ನೇರ ಬಾಣಲೆಯಿಂದ ಬೆಂಕಿಗೇ ಬಿದ್ದಂತೆ. ಒಣಗಿ ಬತ್ತಿದ ಭೂಮಿ ಹೆಣ್ಣು ಹನಿನೀರಿಗಾಗಿ ಬಾಯಿಬಾಯಿ ಬಿಡುವ ಹೊತ್ತು.ಇದ್ದಕ್ಕಿದ್ದಂತೆ ಎಲ್ಲಿಂದಲೋ ತೇಲಿಬರುವ ಕಾರ್ಮೋಡಗಳು, ಅವುಗಳ ನಡುನಡುವೆ ಚಾಚಿಕೊಳ್ಳುವ ಬೆಳಕಿನ ರೇಖೆಗಳು, ನೆರಳು ಬೆಳಕುಗಳ ನಡುವೆ ಟಪ್‌ಟಪ್ಪೆಂದು ಹನಿಗಳು ಕಾದ ನೆಲಕೆ ಬಿದ್ದು ಚೊಂಯೆದು ಆವಿಯಾಗುತ್ತಿದ್ದಂತೆ ನೆಲದಿಂದ ಘಮ್ಮೆಂದು ಏಳುವ ಧೂಳ್‌ಪನಿ ಪರಿಮಳ. ಇದ್ದಕ್ಕಿದ್ದಂತೆ ಇಂದ್ರನವಾದ್ಯಗಳಾದ ಗೋಂಕುರುಕಪ್ಪೆಗಳ ವಟರ್ ವಟರ್! ನೋಡನೋಡ ಧಾರಾಕಾರ ಮಳೆಸುರಿದು ಇಳಾದೇವಿಯ ಒಡಲು ತಂಪಾಗುತ್ತದೆ. ತತ್ರ, ಗೊರಬು, ಮುಟ್ಟಾಳೆ, ಕಂಬಳಿಕೊಪ್ಪೆ, ಕೊಡೆ ಮನೆಗಳಿಂದ ಹೊರಬರುತ್ತವೆ. ಎಲ್ಲಿ ನೋಡಿದರಲ್ಲಿ ಭೂಮಿಯು ಹಸಿಹಸಿಯಾಗಿ ಹಸನಾಗಲು ಬೀಜ ಬಿತ್ತನೆಗಾಗಿ ಮೈತೆರೆದುಕೊಳ್ಳುತ್ತಾಳೆ.
ಹಳ್ಳಿಗಳಲ್ಲಿ ಕಾಡುಹಾಡಿ. ಅಲ್ಲಲ್ಲಿ ಒಂದೊಂದು ಮನೆ. ಮೊದಲ ಮಳೆ ಇನ್ನೇನು ಪಟಪಟ ಹನಿಯಿತು ಎನ್ನುತ್ತಿದ್ದಂತೆ ನೀರು ಅಂಗಳದಿಂದ ಒಳಗೆ ಆರ್ಭಟಿಸದಂತೆ ಜಗಲಿಯನ್ನು ಆವರಿಸಿಕೊಳ್ಳುತ್ತದೆ ತೆಂಗಿನಮಡಲಿನ ತಟ್ಟಿ.ಅದರೆಡೆಯಲ್ಲಿ ಮಿನುಗುವ ಮಿಂಚು. ತಾರಸಿಯ ಮೇಲೆಯೇ ಗುಡುಗುಡು ಉರುಳುತ್ತ ಇಡೀ ಸ್ಥಾವರವನ್ನೇ ನಡುಗಿಸುತ್ತದೆ ಗುಡುಗು. ದೇವರು ಬೆಳಕಿನ ಬೇಳೆಯನ್ನು ನಾಳೆಗಾಗಿ ರುಬ್ಬು ಕಲ್ಲಲ್ಲಿ ಗಡುಗುಡು ಅರೆಯುವಂತೆ. ನೆಲದಿಂದಲೇ ಯಾರೋ ಕೋಲ್ಮಿಂಚನೆಸೆದಂತೆ ಫಳಳ್ ಕಾರ್ಮೋಡದ ನಡುವೆ ಬೆಳಕಿನ ಬಳ್ಳಿ. ಬೆನ್ನಲೇ ಸಟ್ಸಟಾಲ್ ಸಿಡಿಯುವ ಸಿಡಿಲು. ಎಷ್ಟು ಮರಗಳು ಜೀವಸಂಕುಲಗಳು ಸುಟ್ಟು ಬೂದಿಯಾಗಿವೆಯೋ ಈ ವರುಣನ ಅಬ್ಬರಕ್ಕೆ! ಮಿಂಚಿನ ಆರ್ಭಟ ಹೆಚ್ಚಾಗುತ್ತಿದ್ದಂತೆ, ನೋಡು, ಅರ್ಜುನ ಮೇಲುಲೋಕದಲ್ಲಿ ರಥ ಓಡಿಸುತ್ತಿದ್ದಾನೆ! ಅರ್ಜುನ ಪಾರ್ಥಸಾರಥಿ ಭೀಮ ಫಲ್ಗುಣ… ಎಂದು ಜಪಿಸುತ್ತ ಅಂಗಳಕ್ಕೆ ಕತ್ತಿ ಬಿಸಾಕುತಿದ್ದರು ಅಜ್ಜಿ. ಅರ್ಜುನನನ್ನು ಕರೆದರೆ ಮಿಂಚು ಕಡಿಮೆಯಾಗುತ್ತದೆ, ಕತ್ತಿ ಬಿಸಾಕಿದರೆ ಮಿಂಚನ್ನು ಕಬ್ಬಿಣ ಎಳೆದುಕೊಂಡು ಮನೆಗೆ ಬೀಳುವ ಸಿಡಿಲು ಅಂಗಳಕ್ಕೇ ಬೀಳುತ್ತದೆ ಎಂಬುದು ಸದಾ ಸಂತಾನಪಾಲನೆ ರಕ್ಷಣೆಯ ಚಿಂತೆಹೊತ್ತ ಹೆಣ್ಣುಜೀವಗಳ ನಂಬಿಕೆಯಾಗಿತ್ತು. ಅವ ನಲುವತ್ತು ಮಳೆಗಾಲ ಕಂಡಿದ್ದಾನೆ ಎನ್ನುತ್ತಾರಲ್ಲ? ಇದಕ್ಕೇ ಇರಬೇಕು.
ನಿತ್ಯ ನೀರುಳ್ಳಿ ಕೊಚ್ಚಿದಂತೆ ಹರಟೆ ಕೊಚ್ಚುತ್ತಿದ್ದ ಮೂವರು ಗೆಳೆಯರು ಅಂದು ಪಟ್ಟಾಂಗದ ಕಟ್ಟೆಯಲ್ಲಿ ಕೆನ್ನೆಯಲ್ಲಿ ಖನ್ನ ಕೈಹೊತ್ತು ಕುಳಿತಿದ್ದರಂತೆ. ಒಬ್ಬ ಹೊಟ್ಟೆ ಸವರುತ್ತ “”ಗುಡುಗುಡು ಹೇಳುತ್ತಿದೆ!” ಅಂದನಂತೆ. ಇನ್ನೊಬ್ಬ ಬಾನಿಗೆ ತಲೆಯೆತ್ತಿ, “”ಈಗ ಬರ್ತದ ಏನೋ!” ಎಂದನಂತೆ.ಮತ್ತೂಬ್ಬ ಹಾದಿನೋಡುತ್ತ “”ಬರುವವಳಾಗಿದ್ದರೆ ಮಗುವಿನ ಬಟ್ಟೆ ಕೊಂಡೋಗ್ತಿದ್ಲ?” ಎಂದನಂತೆ. ಒಬ್ಬನಿಗೆ ಹೊಟ್ಟೆ ಸರಿಯಿಲ್ಲವೆಂಬ ಚಿಂತೆಯಾದರೆ, ಇನ್ನೊಬ್ಬನಿಗೆ ಬೆಳೆಯ ಚಿಂತೆ. ಮತ್ತೂಬ್ಬನಿಗೆ ಸಿಟ್ಟಲ್ಲಿ ತವರಿಗೆ ಹೋದ ಹೆಂಡತಿಯ ಚಿಂತೆ. ಯಾರದ್ದಾದರೂ ಮುಖದಲ್ಲಿ ಚಿಂತೆ ಕಂಡರೆ ಮೋಡ ಮುಸುಕುತ್ತಿದೆ, ಇನ್ನೇನು ಮಳೆ ಬರುತ್ತದೆ, “”ಅಕ ಬಂದೇ ಬಿಟ್ಟಿತು ಗಂಗಾ ಭಾಗೀರಥಿ” ಎನ್ನುವುದುಂಟು. ಭಗೀರಥ ಯತ್ನಕ್ಕಲ್ಲವೇ ಕೈಲಾಸದಿಂದ ಗಂಗೆ ಭುವಿಗಿಳಿದದ್ದು?
ನಿಂತಲ್ಲಿ ನಿಲ್ಲದೆ ಹರಿಯುವವಳು ನೀರೆ. ದಂಡೆಯಿಲ್ಲದ ಬಾವಿ! ತೋಟತೊಡಮೆ ಕೆರೆಹಳ್ಳ ಕಲ್ಪಂಡೆ ಮಾಟೆಮಾಟೆಗಳಲ್ಲೂ ಧಿಮಿಕುಟ್ಟಿ ನೀರೇ ಹರಿಯುತ್ತ “”ಅಯ್ಯೋ ಮನೆ ಹೋಯ್ತಪ್ಪಾ! ಏನು ಸಾಯುದೀಗ” ಎಂದು ತಲೆಮೇಲೆ ಕೈಹೊತ್ತು ಕುಳಿತು ಬಿಡುತ್ತಿದ್ದರು ಬೈಹುಲ್ಲ ಛಾವಣಿಯಡಿ ಕೆಸರು ನೆಲದಲ್ಲಿ ಪಾಪದ ಹೆಣ್ಣುಜೀವಗಳು. ಹೆಣ್ಣುಮಕ್ಕಳಿಗಂತೂ ಬಹಳ ತಾಪತ್ರಯ. ಮನೆಮುಂದೆ ತೋಡಲ್ಲಿ ಹರಿಯುವ ನೀರಲ್ಲೆ ಪಾತ್ರೆಪರಡಿ ಬಟ್ಟೆಬಟ್ಟಲು ತೊಳೆಯುವುದು. ಬಟ್ಟೆ ಒಣಗುವುದೇ ಇಲ್ಲ. ಇನ್ನು ಮನೆಯಲ್ಲಿ ಹೆತ್ತು ಮಲಗಿದ ಬಾಣಂತಿ ಪಾಪು ಇದ್ದರಂತೂ ಕೇಳುವುದೇ ಬೇಡ, ಮನೆಯೊಂದು ಯಕ್ಷಗಾನದ ಚೌಕಿಯಾಗಿ ಬಿಟ್ಟಿರುತ್ತದೆ. ಒಲೆಗೂಡನ್ನು ಆರದಂತೆ ಬೆಚ್ಚಗಿಡುವುದೇ ಭಂಗ. ಆದರೂ ಮೂಲೆಯಲ್ಲಿ ಗುಬ್ಬಚ್ಚಿಯಂತೆ ಮುದುಡಿ ಕುಳಿತ ಮಕ್ಕಳುಮರಿಗಳಿಗೆ, ಪುರುಷರಿಗೆ ಹಪ್ಪಳಸೆಂಡಿಗೆ ಕಾಯಿಸಿ ಕೊಡುವ ಕಾಯಕ.
ಭತ್ತವಾದರೆ ನಾಟಿನೆಡುವುದು, ಕೊಯ್ಯುವುದು, ತುಂಬುವುದು, ಪಡಿಮಂಚಕ್ಕೆ ಹೊಡೆಯುವುದು, ಗಾಳಿಸುವುದು; ಉದ್ದು, ಎಳ್ಳು, ಹೆಸರು, ಅವರೆ, ಹುರುಳಿಯಾದರೆ ಕಿತ್ತುತಂದು ಹರಡಿ ಬಲದಿಂದ ಎಡಕ್ಕೆ ತಲೆಯ ಸುತ್ತ ಕೋಲನ್ನು ರೊಂಯೆÂಂದು ಸುತ್ತಿ ಟಪ್ಪೆಂದು ಹೊಡೆದು ಧಾನ್ಯ ಬೇರ್ಪಡಿಸಿ ಗಾಳಿಸುವುದು. ಅದಾದರೂ ಸಾಪೇತಲ್ಲಿ ಆಗ್ತದ? ಬಿಸಿಲು-ಮಳೆಯ ಕಣ್ಣುಮುಚ್ಚಾಲೆಯಾಟ. ಕನ್ಯದಲ್ಲಿ ಕೊಯ್ಲು ಹೊತ್ತಿಗೆ ಹೊಟ್ಟೆಕಿಚ್ಚಲ್ಲೇ ಕೀರುಗಟ್ಟಿ ಸುರಿಯುದುಂಟು ಮಳೆ. ಉದ್ದಿಗಂತೂ ಕೋಡುಬಂದಾಗ ಒಂದು ಪರಪರ ಪಿರಿಪಿರಿ ಮಳೆಬಂದರೂ ಹೋಯೆ¤ಂದೇ ಅರ್ಥ. ಅಲ್ಲಲ್ಲಿ ಕೊಯ್ದದ್ದು ಹತ್ತುಹದಿನೈದು ದಿನ ನೀರಲ್ಲಿ ಈಜುತ್ತವೆ. ಹೇಗೋ ಹೆಣಗಾಡಿ ಕಣ್ಣಬುಟ್ಟಿಯಲ್ಲಿ ಹೊತ್ತುತಂದು ಅಂಗಳದಲ್ಲಿ ಹರಡಿದರೆ ಮತ್ತೆ ಗುಡುಗುಡು. ಟಾರ್ಪಲಿಲ್ಲದ ಕಾಲ. ಗೋಣಿಮಡಲು ಮುಚ್ಚಿದರೆ ಒದ್ದೆಮುದ್ದೆ. ಮತ್ತೆ ಬಿಸಿಲಿಗೆ ಹರಡಬೇಕು, ಸಂಜೆ ಮುಚ್ಚಿಡಬೇಕು.
ಸುಖಸಮೃದ್ಧಿ ಹರುಷ ಹೊತ್ತು ತರುತ್ತಾಳೆ ವರ್ಷ. ಋತುಮಾನಕ್ಕೆ ತಕ್ಕಂತೆ ಬದಲಾಗುತ್ತಾಳೆ ಪ್ರಕೃತಿ. ಹಸಿರು ಸೀರೆಯುಟ್ಟು ಹೂಮುಡಿದು ಬಯಕೆ ಹಬ್ಬದೂಟವನುಂಡು ಬಸುರಿಯಂತೆ ನಿಲ್ಲುತ್ತಾಳೆ ಮೈತಳೆದ ಫಲಿತ ಶ್ರಾವಣಿ, ಅವಳ ಕೊರಳ್ಳೋ ಕೊಳಲು ಕೋಗಿಲೆಯರಸ ಕುಕಿಲು ಕೋಕಿಲ. ಈಳೆ ನಿಂಬೆ ಮಾವು ಮಾದಲಕೆ ಹುಳಿನೀರನು, ಕಬ್ಬು ಬಾಳೆ ಹಲಸು ನಾರೀಕೇಳಕೆ ಸಿಹಿನೀರನು, ಕಳವೆ ರಾಜಾನ್ನ ಶಾಲ್ಯನ್ನಕೆ ಓಗರದ ಉದಕವನು, ಮರುಗ ಮಲ್ಲಿಗೆ ಪಚ್ಚೆ ಮುಡಿವಾಳಕೆ ಪರಿಮಳದ ಉದಕವನು ಎರೆದವರಾರಯ್ಯ? ನೀರಿನ ಮೂಲರೂಪ ಒಂದೇ ಆದರೂ ಅದು ಬೇರೆ ಬೇರೆ ದ್ರವ್ಯಗಳೊಳಗೆ ಸೇರಿ ಅವುಗಳಿಗೆ ಬೇರೆ ಬೇರೆ ರುಚಿ ನೀಡುವಂತೆ ಚೆನ್ನಮಲ್ಲಿಕಾರ್ಜುನನು ಮೂಲದಲ್ಲಿ ಒಬ್ಬನೇ ಆದರೂ ಹಲವು ಹೃದಯಗಳೊಳಗೆ ಸೇರಿ ಬೇರೆ ಬೇರೆ ಗುಣಸ್ವಭಾವ ನೀಡುತ್ತಾನೆ. ಅವರವರ ಗ್ರಹಿಕೆಗೆ ಭಾವಕ್ಕೆೆ ತಕ್ಕಂತೆ ಬೇರೆ ಬೇರೆಯಾಗಿ ಲಭಿಸುತ್ತಾನೆ ಎನ್ನುತ್ತಾಳಲ್ಲ ಅಕ್ಕ ! ಲೌಕಿಕ ತಾವರೆಯೆಲೆಗೆ ಅಂಟಿಯೂ ಅಂಟದ ಅಲೌಕಿಕ ಬಿಂದುವಿನಂತೆ ಬಾಳಿದವಳು. ನೀರೆಂದರೆ ಶಿವನ ಜಟೆಯಿಂದ ಇಳಿಯುವ ಗಂಗೆ, ಸಂಜೀವಿನಿ. ನೀರೆಯೂ.
(ಅಂಕಣ ಮುಕ್ತಾಯ)
ಕಾತ್ಯಾಯಿನಿ ಕುಂಜಿಬೆಟ್ಟು