ನವದೆಹಲಿ: ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಶನಿವಾರ (ಜನವರಿ 15) ತಿಳಿಸಿದ್ದಾರೆ.
ಇದನ್ನೂ ಓದಿ:ಜಿಲ್ಲೆಯಲ್ಲಿ ಮುಚ್ಚಿವೆ 12 ಶಾಲೆ : ಶಿಕ್ಷಕ- ವಿದ್ಯಾರ್ಥಿ ಅನುಪಾತದಲ್ಲಿ ಅಜಗಜಾಂತರ
ಅಖಿಲೇಶ್ ಯಾದವ್ ಗೆ ದಲಿತರ ಬೆಂಬಲ ಬೇಕಾಗಿಲ್ಲ, ಅವರಿಗೆ ದಲಿತ್ ವೋಟ್ ಬ್ಯಾಂಕ್ ರಾಜಕಾರಣ ಮಾತ್ರ ಬೇಕಾಗಿದೆ ಎಂದು ಆಜಾದ್ ಆರೋಪಿಸಿದ್ದಾರೆ. ಅಖಿಲೇಶ್ ಜತೆಗಿನ ಎಲ್ಲಾ ಚರ್ಚೆ ಮುಗಿದಿದೆ. ಸುಮಾರು ಒಂದು ತಿಂಗಳ ಕಾಲ ಮೈತ್ರಿಗಾಗಿ ಚರ್ಚೆ ನಡೆಸಿದ್ದೆ, ಆದರೆ ಅದು ಸಾಧ್ಯವಾಗಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಹೇಳಿದರು.
ಎನ್ ಡಿಟಿವಿ ವರದಿ ಪ್ರಕಾರ, ಆಜಾದ್ ಸಮಾಜ್ ಪಕ್ಷಕ್ಕೆ ಮೂರು ಕ್ಷೇತ್ರಗಳನ್ನು ನೀಡುವ ಬಗ್ಗೆ ಅಖಿಲೇಶ್ ಆಫರ್ ನೀಡಿದ್ದರು. ಆದರೆ ಚಂದ್ರಶೇಖರ್ ಆಜಾದ್ ತಮಗೆ 10 ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದು, ಈ ಹಿನ್ನೆಲೆಯಲ್ಲಿ ಮೈತ್ರಿ ಮಾತುಕತೆ ಮುರಿದು ಬಿದ್ದಿರುವುದಾಗಿ ತಿಳಿಸಿದೆ.
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಸ್ಪರ್ಧಿಸುವುದಾಗಿ ಚಂದ್ರಶೇಖರ್ ಆಜಾದ್ ನವೆಂಬರ್ ನಲ್ಲಿ ಚಾನೆಲ್ ವೊಂದಕ್ಕೆ ತಿಳಿಸಿದ್ದರು. ಏನೇ ಆದರೂ ಯೋಗಿ ಅವರನ್ನು ಚುನಾವಣೆಯಲ್ಲಿ ಗೆಲ್ಲಲು ಅವಕಾಶ ನೀಡುವುದಿಲ್ಲ ಎಂದು ವಿಶ್ವಾಸವ್ಯಕ್ತಪಡಿಸಿದ್ದರು ಎಂದು ವರದಿ ಹೇಳಿದೆ.