ಬೆಳ್ತಂಗಡಿ: ಆತ್ಮ ವಿಮರ್ಶೆ ಇರುವ ಭಕ್ತರಾದ ನಮಗೆ ವೇದಗಳು, ಪುರಾಣಗಳಿಂದ ಸಾರ್ಥಕ ಬದುಕಿನ ಪ್ರೇರಣೆ ದೊರಕುತ್ತದೆ. ಬಹುತ್ವಕ್ಕೆ ಶ್ರದ್ಧೆಯೇ ನೆಲೆಯಾಗಿದೆ. ಬದುಕಬೇಕಾದರೆ ಶ್ರದ್ಧೆ ಮತ್ತು ನಂಬಿಕೆ ಇರಲೇಬೇಕು. ಭಾವವಿಲ್ಲದೆ ಬದುಕಿಲ್ಲ. ಭಾವ ಸಮೃದ್ಧಿ ಕಟ್ಟಲು ನುಡಿ ಸಾಮ್ರಾಜ್ಯ ಬೇಕು ಎಂದು ಮೈಸೂರು ಆಕಾಶವಾಣಿಯ ದಿವಾಕರ ಹೆಗಡೆ ಅಭಿಪ್ರಾಯಪಟ್ಟರು.
ಅವರು ಉಜಿರೆಯಲ್ಲಿ ಅ.ಭಾರತೀಯ ಸಾಹಿತ್ಯ ಪರಿಷದ್‌ನ ವತಿಯಿಂದ ನಡೆದ “ನುಡಿಸಾಮ್ರಾಜ್ಯದಲ್ಲಿ ಸ್ವರಾಜ್ಯ’ 3ನೇ ರಾಜ್ಯ ಅಧಿವೇಶನದ ಸಮಾರೋಪದಲ್ಲಿ ರವಿವಾರ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಅ.ಭಾ.ಸಾ.ಪ. ರಾಜ್ಯಾಧ್ಯಕ್ಷ ಡಾ| ನಾ. ಮೊಗಸಾಲೆ ಮಾತನಾಡಿ, ನಮ್ಮ ಭವ್ಯ ಇತಿಹಾಸ ತಿಳಿಯದೆ ದೇಶಕಟ್ಟಲಾಗದು. ಸಾಮ್ರಾಜ್ಯ ಎಂದರೆ ಮುರಿದು ಕಟ್ಟುವುದು ಎಂದರ್ಥ. ಇತಿಹಾಸವನ್ನು ಮುರಿದು ಕಟ್ಟುವ ಕೆಲಸ ಇಂದು ನುಡಿಸಾಮ್ರಾಜ್ಯದಿಂದಾಗಿದೆ ಎಂದು ಬಣ್ಣಿಸಿದರು.
ಇಂದು ಅನೇಕ ಟ್ರಸ್ಟ್‌ಗಳ ಹೆಸರಲ್ಲಿ ಸರಕಾರದ ಹಣ ಪೋಲಾಗುತ್ತಿದೆ. ಸರ ಕಾರವು ಕರಾವಳಿಯ ಸಾಹಿತಿಗಳನ್ನು ಸಾಂಸ್ಕೃತಿಕವಾಗಿ ಅವಗಣಿಸಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಕಾಂತಾವರದಲ್ಲಿ ಅಲ್ಲಮ ಪೀಠವನ್ನು ನಾನು ಪ್ರಾರಂಭಿಸಿದ್ದೇನೆ. ಮಂಗಳೂರು ವಿ.ವಿ. ರತ್ನಾಕರವರ್ಣಿ ಪೀಠಕ್ಕೆ ಸರಕಾರ ಒಂದು ಕೋಟಿ ರೂ. ಅನುದಾನ ನೀಡಿದೆ. ಆದರೆ ಏನು ಪ್ರಗತಿ ಸಾಧಿಸಿಲ್ಲ ಎಂದು ವಿಷಾದಿಸಿದರು.
ಶ್ರೋತೃಗಳ ಅಭಿಪ್ರಾಯ ಆಲಿಸದ್ದಕ್ಕೆ ಸಭಾತ್ಯಾಗ
ಸಮಾರೋಪ ಸಮಾರಂಭದಲ್ಲಿ ಸಭಾಸದರೊಬ್ಬರು ಶ್ರೋತೃಗಳ ಅಭಿಪ್ರಾಯ ಮಂಡಿಸಲು ಅವಕಾಶ ಕೋರಿದರು. ಸ್ವಲ್ಪ ಸಮಯದ ಬಳಿಕ ತಿಳಿಸುವುದಾಗಿ ಸಂಘಟಕರು ಪ್ರಕಟಿಸಿದರು. ಆದರೆ ಸಮಾರೋಪ ಸಮಾರಂಭ 4 ಗಂಟೆಗೆ ಪೂರ್ಣಗೊಳ್ಳಬೇಕಿದ್ದರಿಂದ ಸಮಯದ ಅಭಾವದ ಕಾರಣ ಅವಕಾಶ ಕಷ್ಟ ಎಂದು ಸಮ್ಮೇಳನಾಧ್ಯಕ್ಷರು ಬಿನ್ನವಿಸಿದರು. ಆಗ ಸಭಾಸದರಾದ ನಿವೃತ್ತ ತಹಶೀಲ್ದಾರ್ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆಯ ಸುರೇಶ ಕುದ್ರೆಂತ್ತಾಯ ಬರ್ಕಾಸ್ತು ಗೊಳಿಸಬೇಕು ಎಂದು ಆಗ್ರಹಿಸಿದರು. ಅಭಿಪ್ರಾಯಕ್ಕೆ ಅವಕಾಶವಿಲ್ಲ ಎಂದಾಗ ಸಭೆಯನ್ನು ಬಹಿಷ್ಕರಿಸಿ ಹೊರನಡೆದರು. ಸಭೆ ಮುಂದುವರಿಯಿತು.