Advertisement

ಸಾಹಿತ್ಯ ಸಮ್ಮೇಳನ ನಿರ್ಣಯಗಳಿಗೆ ಇನ್ನೂ “ಜಾರಿ’ಭಾಗ್ಯವಿಲ್ಲ

12:30 AM Jan 05, 2019 | |

ಬೆಂಗಳೂರು: ಇಂಗ್ಲೀಷ್‌ ಮಾಧ್ಯಮ ಶಾಲೆಗಳಲ್ಲಿ ಕಡ್ಡಾಯವಾಗಿ  ನಾಡಗೀತೆ ಹಾಡುವುದು. ಹೈಕೋರ್ಟ್‌ ಕಲಾಪ ಹಾಗೂ ತೀರ್ಪು ಕಡ್ಡಾಯವಾಗಿ ಕನ್ನಡದಲ್ಲಿರುವುದು. ಒಂದನೇ ತರಗತಿಯಿಂದ ನಾಲ್ಕನೇ ತರಗತಿ ವರೆಗೂ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಸೇರಿದಂತೆ ಈವರೆಗೆ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಂಡಿರುವ ಕನ್ನಡ ಉಳಿಸುವ ಹಲವು ನಿರ್ಣಯಗಳು ಇನ್ನೂ ಜಾರಿಯಾಗಿಲ್ಲ.

Advertisement

ಪ್ರತಿವರ್ಷ ಸಾಹಿತ್ಯ ಸಮ್ಮೇಳನಗಳಲ್ಲಿ ನಾಡು-ನುಡಿ ರಕ್ಷಣೆ ವಿಚಾರದಲ್ಲಿ ಹಲವಾರು ಮಹತ್ವದ ನಿರ್ಣಗಳನ್ನು ಅಂಗೀಕಾರ ಮಾಡಿದ್ದರೂ ರಾಜ್ಯ ಸರ್ಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನ ಇಚ್ಛಾಶಕ್ತಿ ಕೊರತೆಯಿಂದ ಸಮ್ಮೇಳನಗಳಲ್ಲಿ ಕೈಗೊಂಡ ನಿರ್ಣಯಗಳು ಪುಸ್ತಕದಲ್ಲೇ ಉಳಿದಂತಾಗಿವೆ.

2014 ರಲ್ಲಿ ಕೊಡಗಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ನಾಡಗೀತೆಯನ್ನು ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ಕಡ್ಡಾಯವಾಗಿ ಹಾಡಬೇಕು. ಗಡಿನಾಡ ಶಾಲೆಗಳನ್ನು ಮುಚ್ಚಬಾರದು.  ಹೈಕೋರ್ಟ್‌ ಕಲಾಪ ಹಾಗೂ ತೀರ್ಪು ಕನ್ನಡದಲ್ಲಿರಬೇಕು ಎಂಬ ನಿರ್ಣಯಗಳನ್ನು ಅಂಗೀಕರಿಸಲಾಗಿತ್ತು. ಆದರೆ ಅವು ಜಾರಿಯಾಗಿಲ್ಲ.

ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ಕುರಿತಾದ ಹಲವು ನಿರ್ಣಯಗಳನ್ನು ಸಮೇಳನದ ಅಧ್ಯಕ್ಷರು ಕೈಗೊಳ್ಳುತ್ತಾರೆ. ಆದರೆ, ಬಹುತೇಕ ಅವು ಅನುಷ್ಠಾನಕ್ಕೆ ಬರುವುದಿಲ್ಲ ಎಂದು ಕೊಡಗಿನಲ್ಲಿ ನಡೆದ 80 ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಾರಥ್ಯ ವಹಿಸಿದ್ದ ಮಕ್ಕಳ ಸಾಹಿತಿ ನಾ.ಡಿಸೋಜ ಬೇಸರ ವ್ಯಕ್ತಪಡಿಸಿದ್ದಾರೆ.

ಸಮ್ಮೇಳನಗಳಲ್ಲಿ ತೆಗೆದುಕೊಳ್ಳುವ ನಿರ್ಣಯಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಸಾಪದ್ದು ಕೂಡ ತಪ್ಪಿದೆ. ಒಂದಿಷ್ಟು ನಿರ್ಣಯಗಳನ್ನು ಮಂಡಿಸಿ ವೇದಿಕೆಯಲ್ಲಿ ಓದುವುದಕ್ಕೆ ಮಾತ್ರ ಸೀಮಿತವಾಗ ಬಾರದು. ಸಮ್ಮೇಳನಗಳಲ್ಲಿನ ನಿರ್ಣಯಗಳನ್ನು ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಪ್ರಚುರಪಡಿಸಬೇಕು. ಸಾಹಿತ್ಯ ಸಮ್ಮೇಳನ ಕೇವಲ ನಿರ್ಣಯಗಳ ಮಂಡನೆಗೆ ಮಾತ್ರ ಸೀಮಿತವಾಗಬಾರದು. ನಿರ್ಣಯಗಳ ಬೆನ್ನತ್ತಿ ಹೋಗುವ ಕೆಲಸ ಆಗಬೇಕಾಗಿದೆ ಎಂದು ಹೇಳಿದ್ದಾರೆ.

Advertisement

ಸರ್ಕಾರವು ಸಹ ಆರ್ಥಿಕ ನೆರವು ಕೊಟ್ಟು ಸುಮ್ಮನಾಗುವುದು ಸರಿಯಲ್ಲ. ಸಾಹಿತ್ಯ ಸಮ್ಮೇಳನದಲ್ಲಿ ನಡೆಯುವ ಚರ್ಚೆಗಳು ಹಾಗೂ ನಿರ್ಣಯಗÙನ್ನು ಗಂಭೀರವಾಗಿ ಪರಿಗಣಿಸಿ ಅವುಗಳ ಜಾರಿಯಾಗಿಯೇ ವಿಶೇಷ ಅಧಿಕಾರಿಯನ್ನು ನೇಮಿಸಬೇಕು. ಸರ್ಕಾರವೇ ಅಧಿಕಾರಿಯೊಬ್ಬರನ್ನು ಸಮ್ಮೇಳನಕ್ಕಾಗಿಯೇ ನೇಮಕ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಸರ್ಕಾರ ಗಮನ ಹರಿಸುವುದಿಲ್ಲ
ಸಮ್ಮೇಳದ ಕೆಲವು ನಿರ್ಣಗಳು ಈಡೇರಿಕೆಯಾಗಿವೆ. ಆದರೆ ಆಗಬೇಕಾಗಿರುವವು ಕೂಡ ಹಲವು ಇವೆ. 2015 ರಲ್ಲಿ ಶ್ರವಣಗೊಳದಲ್ಲಿ ನಡೆದ 81 ನೇ ಅಖೀಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದೆ. ಆಗ ಒಂದನೇ ತರಗತಿಯಿಂದ ನಾಲ್ಕನೇ ತರಗತಿ ವರೆಗೂ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕು ಎಂಬ ಒಂದೇ ಒಂದು ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಆದರೆ, ಇಲ್ಲಿಯವರೆಗೂ ಆ ಬೇಡಿಕೆಗೆ ಈಡೇರಿಕೆಯಾಗಿಲ್ಲ ಎಂದು ಕವಿ ಸಿದ್ಧಲಿಂಗಯ್ಯ ದೂರುತ್ತಾರೆ.

ಸಮ್ಮೇಳನದ ಅಧ್ಯಕ್ಷರು ಮಂಡಿಸುವಂತಹ ಆಶಯಗಳು ಕೂಡ ಈಡೇರಿಕೆ ಆಗಬೇಕು. ದುರದೃಷ್ಟವಶಾತ್‌ ಅವುಗಳ ಅನುಷ್ಠಾನವಾಗುತ್ತಿಲ್ಲ. ಈ ಸಂಬಂಧ ಕನ್ನಡಿಗರು ಹೋರಾಟ ನಡೆಸಬೇಕಾಗಿದೆ. ಅಧಿಕಾರಿಗಳು ಸರ್ಕಾರವನ್ನು ದಿಕ್ಕು ತಪ್ಪಿಸುವ ಪ್ರಯತ್ನದಲ್ಲಿ ನಿರತವಾಗಿರುವುದೇ ಇದಕ್ಕೆ ಕಾರಣ ಎಂದು ಟೀಕಿಸುತ್ತಾರೆ.

ವರದಿ ಅನುಷ್ಠಾನಗೊಂಡಿಲ್ಲ
ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣದ ಸಂಬಂಧ  ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ ಅವರು ಶಿಕ್ಷಣ ತಜ್ಞರ ಒಂದು ಸಮಿತಿ ನೇಮಕ ಮಾಡಿದ್ದರು. ಆ ಸಮಿತಿ 21 ಅಂಶಗಳ ಒಂದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಈ ಬಗ್ಗೆ ಮೈಸೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಆದರೆ ಆ ವರದಿಯನ್ನು ಸರ್ಕಾರ ಇನ್ನೂ ಜಾರಿಗೆ ತಂದಿಲ್ಲ ಎಂದು ಮೈಸೂರಿನಲ್ಲಿ ನಡೆದ 83 ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಚಂದ್ರಶೇಖರ ಪಾಟೀಲ ದೂರುತ್ತಾರೆ.

ಕನ್ನಡ ಹಿತಾಸಕ್ತಿಗಾಗಿ ನಿರ್ಣಯವನ್ನು ಸ್ವೀಕಾರ ಮಾಡಲಾಗುತ್ತದೆ. ಆದರೆ ಸರ್ಕಾರ ಈಡೇರಿಕೆಗೆ ಮುಂದಾಗದಿದ್ದಾಗ ಮತ್ತದೇ ನಿರ್ಣಯಗಳನ್ನು ಸ್ವಲ್ಪ ಬದಲಾವಣೆ ಮಾಡಿ ಮುಂದಿನ ಅಧಿವೇಶನದಲ್ಲಿ  ಅಂಗೀಕಾರ ಮಾಡಲಾಗುತ್ತದೆ. ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು  ಕೈ ಕಟ್ಟಿ ಸುಮ್ಮನೇ ಕೂರಬಾರದು ಎನ್ನುತ್ತಾರೆ. 2004ರಲ್ಲಿ ಮೂಡುಬಿದಿರೆಯಲ್ಲಿ ನಡೆದ 71ನೇ ಅಖೀಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಕಮಲ ಹಂಪನ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಸರ್ಕಾರ ಈಡೇರಿಸಲೇಬೇಕು ಎಂಬ ನಿರ್ಣಯವಲ್ಲ. ಅದು ಆ ಸಮ್ಮೇಳನದ ಅಭಿಪ್ರಾಯವಾಗಿರುತ್ತದೆ, ಕಾರ್ಯಕಾರಿ ಸಮಿತಿಯೇ ಇದನ್ನು ನಿರ್ಧರಿಸಿ ಬಿಡುತ್ತದೆ.
– ಬರಗೂರು ರಾಮಚಂದ್ರಪ್ಪ, ಸಾಹಿತಿ.

ಸರ್ಕಾರ ಸಮ್ಮೇಳನಕ್ಕೆ ಹಣ ಕೊಡುತ್ತದೆ. ಆದರೆ ಅಲ್ಲಿ ತೆಗೆದು ಕೊಂಡಂತಹ ನಿರ್ಣಯಗಳನ್ನು ಈಡೇರಿಸುವ ಕಾರ್ಯಕ್ಕೆ ಮುಂದಾಗುವುದಿಲ್ಲ. ಹೀಗಾಗಿಯೇ ಹಳೆಯ ನಿರ್ಣಯಗಳನ್ನೇ ಮತ್ತೆ ಅಂಗೀಕಾರ ಮಾಡಿರುವ ಉದಾಹರಣೆಗಳಿವೆ.
– ಡಾ.ಗೀತಾ ನಾಗಭೂಷಣ್‌, ಗದಗ ಸಾಹಿತ್ಯ ಸಮ್ಮೇಳನಾಧ್ಯಕ್ಷೆ

– ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next