ವಿಧಾನಸಭೆ: ಅಕೇಶಿಯಾ ಮರಗಳನ್ನು ಜಮೀನಿನಲ್ಲಿ ಬೆಳೆದಿರುವುದರಿಂದ ಮಳೆಯ ನೀರು ಹಾಗೂ ಭೂಮಿಯ ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಹೀರಿಕೊಂಡು ಅಂತರ್ಜಲ ತಗ್ಗುತ್ತದೆ ಎಂಬ ಬಗ್ಗೆ ಇದುವರೆಗೂ ಯಾವುದೇ ಸಂಶೋಧನೆಯನ್ನು ಕೈಗೊಂಡಿಲ್ಲ ಎಂದು ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದೆ.
ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ ಅವರ ಪ್ರಶ್ನೆಗೆ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಈ ಉತ್ತರ ನೀಡಿದ್ದಾರೆ. ಅಕೇಶಿಯಾ ಬೆಳೆಸುವುದರಿಂದ ಅಂತರ್ಜಲ ಪ್ರಮಾಣ ತಗ್ಗುತ್ತದೆ ಎಂಬುದನ್ನು ನಿರೂಪಿಸುವುದಕ್ಕೆ ಅಗತ್ಯವಾದ ಯಾವುದೇ ಸ್ಪಷ್ಟ ವರದಿ ನಮ್ಮಲ್ಲಿಲ್ಲ. ಹೀಗಾಗಿ ಖಾಸಗಿಯವರಿಗೆ ಅಕೇಶಿಯಾ ಬೆಳೆಯಬೇಡಿ ಎನ್ನಲು ಸಾಧ್ಯವಿಲ್ಲ ಎಂದರು.
ಅಕೇಶಿಯಾದಲ್ಲಿ ಮೂರು ವಿಧಗಳಿವೆ. ಹರ್ಕುಲಸ್ ಎಂಬ ತಳಿ ಸಾಗವಾನಿಗೆ ಪರ್ಯಾಯವಾಗಿ ಬಳಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಅಕೇಶಿಯಾ ಹಾಗೂ ನೀರಿನ ವಿಚಾರದಲ್ಲಿ ವರದಿ ಬಂದರೆ ಸರ್ಕಾರ ಆ ಬಗ್ಗೆ ಗಮನ ಹರಿಸಲಿದೆ ಎಂದರು.
ಜಂಟಿ ಅರಣ್ಯ ಯೋಜನೆ ಪ್ರದೇಶಗಳಲ್ಲಿ ಗ್ರಾಮ ಅರಣ್ಯ ಸಮಿತಿಯ ಅನುಮೋದಿತ ನಿರ್ವಹಣಾ ಯೋಜನೆಯಂತೆ ಅಕೇಶಿಯಾ ಮರಗಳನ್ನು ಬೆಳೆಸಬೇಕೆಂದು ಸರ್ಕಾರದಿಂದ ನಿರ್ದೇಶನ ನೀಡಲಾಗಿದೆ ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದರು.
ಅಕೇಶಿಯಾ ಹೈಬ್ರಿಡ್ ಮತ್ತು ಅಕೇಶಿಯಾ ಮ್ಯಾಂಜಿಯಮ್ ಜಾತಿಯನ್ನು ಹೊರತುಪಡಿಸಿ ಬೇರೆ ಎಲ್ಲಾ ಅಕೇಶಿಯಾ ಜಾತಿಯ ಮರಗಳನ್ನು ಖಾಸಗಿ ಜಮೀನಿನಲ್ಲಿ ಬೆಳೆದು ಕಟಾವು ಮಾಡಲು ಇಲಾಖಾ ಅನುಮತಿ ಅವಶ್ಯ ಇರುತ್ತದೆ ಎಂದು ಶಾಸಕರ ಪ್ರಶ್ನೆಗೆ ಉತ್ತರ ನೀಡಿದ ಅವರು, ಬಂಜರು ಲ್ಯಾಟ್ರೈಟ್ ಪ್ರದೇಶಗಳಲ್ಲಿ ಅಕೇಶಿಯಾ ಗಿಡ ಬೆಳೆಸುವುದು, ಶೇ.25ಕ್ಕಿಂತ ಕಡಿಮೆ ಅರಣ್ಯ ಕವಚ ಇರುವ ಪ್ರದೇಶಗಳಲ್ಲಿ ಎಲ್ಲಿ ಸ್ಥಳೀಯ ಮರಗಳ ನೈಸರ್ಗಿಕ ಪುನರುತ್ಪತ್ತಿ ಕೊರತೆ ಇದೆಯೋ ಅಂಥಹ ಪ್ರದೇಶಗಳಲ್ಲಿ ಅಕೇಶಿಯಾ ಗಿಡಗಳನ್ನು ಬೆಳೆಸುವುದು, ಒತ್ತುವರಿ ತೆರವುಗೊಳಿಸಿದ ಪ್ರದೇಶಗಳಲ್ಲಿ ಹಾಗೂ ಒತ್ತುವರಿ ತಡೆಗಟ್ಟಲು ಶೀಘ್ರವಾಗಿ ಮರಗಳನ್ನು ಬೆಳೆಸುವ ದೃಷ್ಟಿಯಿಂದ ಅಕೇಶಿಯಾ ನೆಡುತೋಪಗಳನ್ನು ಬೆಳೆಸಬಹುದಾಗಿರುತ್ತದೆ ಎಂದರು.