ಹೊಸದಿಲ್ಲಿ: ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನು ಖಂಡಿಸಿ ಶಿರೋಮಣಿ ಅಕಾಲಿದಳ ಪಕ್ಷವೂ ಎನ್ ಡಿಎ ನಿಂದ ಹೊರಬಂದಿದೆ. ಶನಿವಾರ ತಡರಾತ್ರಿ ನಡೆದ ಸಭೆಯಲ್ಲಿ ಅಕಾಲಿ ದಳ ಈ ನಿರ್ಧಾರ ಕೈಗೊಂಡಿದೆ.
ರೈತ ವಿರೋಧಿ ವಿಧೇಯಕಗಳನ್ನು ಒಪ್ಪಲು ಸಾಧ್ಯವಿಲ್ಲ. ತಮ್ಮ ನಿರಂತರ ಮನವಿಯ ಹೊರತಾಗಿಯೂ ನರೇಂದ್ರ ಮೋದಿ ಸರ್ಕಾರ ರೈತ ವಿರೋದಿ ವಿಧೇಯಕಗಳನ್ನು ಜಾರಿಗೆ ತರುತ್ತಿದೆ. ಈ ಕಾರಣಗಳಿಂದ ಇನ್ನು ಮುಂದೆ ಎನ್ ಡಿಎ ಭಾಗವಾಗಿ ಮುಂದುವರಿಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಶಿರೋಮಣಿ ಅಕಾಲಿ ದಳ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಹೇಳಿದ್ದಾರೆ.
ಇದನ್ನೂ ಓದಿ: ಪಂಜಾಬ್: ತೀವ್ರಗೊಂಡ ಪ್ರತಿಭಟನೆ : ಸೆ. 29ರ ವರೆಗೂ ರೈಲು ತಡೆಗೆ ರೈತರ ನಿರ್ಧಾರ
ಕೃಷಿ ವಿಧೇಯಕವು “ಬಡ ರೈತರ ಮೇಲೆ ಹತ್ಯೆಯ ದಾಳಿ” ಎಂದಿರುವ ಬಾದಲ್, ಮೋದಿ ಸರಕಾರವು ಮೊಂಡುತನದ ಮತ್ತು ಸೂಕ್ಷ್ಮತೆಯಿಲ್ಲದ ಸರಕಾರ ಎಂದಿದ್ದಾರೆ.
ಕೆಲವೇ ದಿನಗಳ ಹಿಂದೆ ಕೇಂದ್ರ ಸಚಿವೆ, ಅಕಾಲಿ ದಳ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕೇಂದ್ರ ಸರ್ಕಾರದ ಕೃಷಿ ವಿಧೇಯಕವನ್ನು ಖಂಡಿಸಿ ಪಂಜಾಬ್, ಹರ್ಯಾಣ ಸೇರಿದಂತೆ ದೇಶಾದ್ಯಂತ ರೈತರು, ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.