Advertisement

ಬೆಳೆ ಹಾನಿಗೆ ಪರಿಹಾರ ನೀಡದಿದ್ದರೆ ಪ್ರತಿಭಟನೆ

05:17 PM Dec 22, 2019 | Naveen |

ಅಜ್ಜಂಪುರ: ಭದ್ರಾ ನದಿ ನೀರು ಹರಿದಬಂದ ಪರಿಣಾಮ ಆಗಿರುವ ಬೆಳೆ ಹಾನಿಗೆ ಪರಿಹಾರ ನೀಡಬೇಕು. ಇಲ್ಲವಾದರೆ ಅನಿರ್ದಿಷ್ಠಾವಧಿ
ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ತಾಲೂಕಿನ ಚೌಳಹಿರಿಯೂರು ಹೋಬಳಿ ಎಚ್‌.ತಿಮ್ಮಾಪುರ ಗ್ರಾಮಸ್ಥರು ತಹಶೀಲ್ದಾರ್‌ಗೆ ಎಚ್ಚರಿಕೆ ನೀಡಿದರು.

Advertisement

ಗ್ರಾಮಕ್ಕೆ ಭೇಟಿ ನೀಡಿದ ತಹಶೀಲ್ದಾರ್‌ ವಿಶ್ವೇಶ್ವರ ರೆಡ್ಡಿ ಮತ್ತು ಭದ್ರಾ ಮೇಲ್ದಂಡೆ ಇಂಜಿನಿಯರ್‌ ಶಿವಕುಮಾರ್‌ ಅವರಿಗೆ ಗ್ರಾಮಸ್ಥರು ತಮ್ಮ ಅಹವಾಲುಗಳನ್ನು ಸಲ್ಲಿಸಿದ ನಂತರ ಈ ರೀತಿ ಎಚ್ಚರಿಕೆ ನೀಡಿದರು.

ಬುಕ್ಕಾಂಬು ದಿಂದ ಹರಿಯುವ 22 ಕೆರೆಗಳ ನೀರು ಗ್ರಾಮದ ಮೂಲಕ ಕುಕ್ಕೆ ಸಮುದ್ರ ಸೇರುತ್ತದೆ. ಬಳಿಕ ವಾಣಿವಿಲಾಸ ಸಾಗರದ ಕಡೆಗೆ ಹರಿಯುತ್ತದೆ. ಭದ್ರಾ ನೀರು ಹರಿಯುವುದರಿಂದ ವರ್ಷವಿಡೀ ಬೆಳೆ ನಾಶವಾಗಿದೆ ಎಂಬ ವಿಷಯವನ್ನು ರೈತ ಸುರೇಶ್‌ ಅಧಿಕಾರಿಗಳ ಗಮನಕ್ಕೆ ತಂದರು.

ಭದ್ರಾ ನೀರು ಕಲ್ಕೆರೆ, ಎಚ್‌.ತಿಮ್ಮಾಪುರ, ಹಡಗಲು, ಸಿದ್ದಾಪುರ, ಚೋಮನಹಳ್ಳಿ, ಆಸಂದಿ, ಮುದಿಗೆರೆ, ಕಳ್ಳಿಹೊಸಹಳ್ಳಿ, ಹನುಮನಹಳ್ಳಿ, ಚಿಕ್ಕಬಳ್ಳೆಕೆರೆಯ ಕೃಷಿ ಭೂಮಿಗೆ ಹಾನಿ ಮಾಡಿದೆ. ಎಚ್‌.ತಿಮ್ಮಾಪುರ ಮತ್ತು ಹನುಮನಹಳ್ಳಿ ಗಡಿ ಭಾಗದಲ್ಲಿ 400 ಎಕರೆಯಷ್ಟು ಬೆಳೆ ನಾಶ ಮಾಡಿದೆ ಎಂದರು.

ಮುಂಗಾರಿನ ಪ್ರಮುಖ ವಾಣಿಜ್ಯ ಬೆಳೆ ಈರುಳ್ಳಿ, ಮೆಣಸಿನಕಾಯಿ, ದನಿಯಾ ಬೆಳೆಗಳು ಭದ್ರಾ ನೀರು ಹರಿದು ಕೊಳೆತು ಹೋದವು ಎಂದು ಮಹೇಶ್ವರಪ್ಪ ಹಾಗೂ ಚನ್ನಬಸಪ್ಪ ಅಳಲು ತೋಡಿಕೊಂಡರು.

Advertisement

ಅಧಿಕಾರಿಗಳು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ಬೆಳೆ ಹಾನಿ ಪರಿಹಾರವನ್ನೂ ನೀಡಿಲ್ಲ ಎಂದು ರವಿಕುಮಾರ್‌, ಜಗದೀಶ್‌, ಶಿವಕುಮಾರ್‌ ಅಸಮಧಾನ ವ್ಯಕ್ತಪಡಿಸಿದರು. ಭದ್ರಾ ಮೇಲ್ದಂಡೆ ಇಂಜಿನಿಯರ್‌ ಶಿವಕುಮಾರ್‌ ಮಾತನಾಡಿ, ಬೆಂಗಳೂರಿನ ವಿಶ್ವೇಶ್ವರ ಜಲ ನಿಗಮದ ಕಚೇರಿಯಲ್ಲಿ ಸೋಮವಾರ ಸಭೆ ಇದೆ. ತಮ್ಮ ಸಮಸ್ಯೆ ಬಗ್ಗೆ ಸಭೆಯ ಗಮನಕ್ಕೆ ತರಲಾಗುವುದು. ನೀರು, ಹೊಲ-ತೋಟಗಳಿಗೆ ಹರಿಯದಂತೆ ಪರ್ಯಾಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ತಹಶಿಲ್ದಾರ್‌ ವಿಶ್ವೇಶ್ವರ ರೆಡ್ಡಿ ಮಾತನಾಡಿ, ಭದ್ರಾ ನೀರು ಹರಿದು ಹಾನಿಗೀಡಾದ ಕೃಷಿ ಭೂಮಿಯನ್ನು ಗ್ರಾಮ ಲೆಕ್ಕಿಗರ ಮೂಲಕ ಸರ್ವೆ ಮಾಡಿಸಲಾಗುವುದು. ಅದನ್ನು ಸರ್ಕಾರಕ್ಕೆ ಕಳುಹಿಸಿ, ಸಂತ್ರಸ್ತರಿಗೆ ಪರಿಹಾರ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು. ಸರ್ಕಾರ, ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಹಾಲಸಿದ್ದಪ್ಪ ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next