ಅಜ್ಜಂಪುರ: ಹೇಮರಡ್ಡಿ ಮಲ್ಲಮ್ಮ ಕೇವಲ ರಡ್ಡಿ ಜನಾಂಗಕ್ಕೆ ಸೀಮಿತ ಅಲ್ಲ. ಇಡೀ ನಾಡಿನ ಆಸ್ತಿ. ಅವರ ಜಯಂತಿಯನ್ನು ಎಲ್ಲ ವರ್ಗದ ಜನರೂ ಆಚರಿಸುವಂತಾಗಲಿ ಎಂದು ಯಡಿಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ ಆಶಿಸಿದರು.
ಸಮೀಪದ ಗಿರಿಯಾಪುರ ಗ್ರಾಮದಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಮತ್ತು ಬಡಗನಾಡು ಹೇಮರಡ್ಡಿ ವೀರಶೈವ ಜನಾಂಗ ಸಂಘದ ಶತಮಾನೋತ್ಸವ ಅಂಗವಾಗಿ ಶನಿವಾರ ನಡೆದ ಧಾರ್ಮಿಕ ಸಮಾವೇಶದಲ್ಲಿ ಅವರು ಮಾತನಾಡಿದರು.
ವಿಧಾನ ಪರಿಷತ್‌ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಮಾತನಾಡಿ, ಹೇಮರಡ್ಡಿ ಮಲ್ಲಮ್ಮ ಬದುಕಿನ ನೋವುಗಳನ್ನು ಸಹಿಸಿದವರು. ಸೊಸೆಯಾಗಿ ಮನೆ ಗೌರವ ಕಾಪಾಡಿದವರು. ತಾಯಿಯಾಗಿ ಇಡೀ ಸಮುದಾಯಕ್ಕೆ ಸುಖ ಸಂಪತ್ತನ್ನು ವರವಾಗಿ ತಂದುಕೊಟ್ಟರು. ಇಂಥವರ ಜೀವನ ದಾರಿಯನ್ನು ಯುವಪೀಳಿಗೆಗೆ ತಿಳಿಸಬೇಕಿದೆ ಎಂದರು. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ತಾಯಿ ಹಡೆದ ಹತ್ತು ಮಕ್ಕಳನ್ನು ಸಾಕುತ್ತಾಳೆ. ಆದರೆ ಹತ್ತು ಮಕ್ಕಳು ಸೇರಿ ಓರ್ವ ತಾಯಿಯನ್ನು ಸಲಹದೇ, ವೃದ್ಧಾಶ್ರಮಕ್ಕೆ ಕಳುಹಿಸುತ್ತಾರೆ. ಇದನ್ನು ತಪ್ಪಿಸಲು ತಂದೆ-ತಾಯಿಯರು ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕೃತಿ-ಸಂಸ್ಕಾರ ಕಲಿಸಬೇಕು ಎಂದು ಸಲಹೆ ನೀಡಿದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಪ್ರಕೃತಿ ವಿಕೋಪ ಮತ್ತು ಸರ್ಕಾರದ ಕಡಗಣನೆಯಿಂದಾಗಿ ಕೃಷಿಕರ ಬದುಕು ಸಂಕಷ್ಟದಲ್ಲಿದೆ. ಕೃಷಿಯಿಂದ ವಿಮುಖರಾಗುವರ ಸಂಖ್ಯೆ ಹೆಚ್ಚಿದೆ. ಇದು ಮುಂದುವರೆದರೆ ಆಹಾರಕ್ಕಾಗಿ ಪರದಾಡುವ-ಹೋರಾಟ ನಡೆಸುವ ದಿನ ದೂರವಿಲ್ಲ ಎಂದು ಎಚ್ಚರಿಸಿದರು. ಮೈಸೂರು ಮುಕ್ತ ವಿವಿ ಪ್ರಾಧ್ಯಾಪಕಿ ಜ್ಯೋತಿ ಶಂಕರ್ ವಿಶೇಷ ಉಪನ್ಯಾಸವನ್ನು, ಬ್ರಹ್ಮಕುಮಾರಿ ಈಶ್ವರೀ ವಿವಿಯ ಸಂಚಾಲಕಿ ಬಿ.ಕೆ.ಭಾಗ್ಯ ಸಂದೇಶ ನೀಡಿದರು.ಮಲ್ಲಿಕಾಂಭ ಮಹಿಳಾ ಸಂಘದ ಉಷಾ ಮತ್ತು ಪದಾಧಿಕಾರಿಗಳು ಗೀತೆ ಹಾಡಿದರು. ಬೀರೂರಿನ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಕುಪ್ಪೂರು ಗದ್ದಿಗೆಯ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಡಗನಾಡು ಹೇಮರಡ್ಡಿ ಜನಾಂಗ ಸಂಘದ ಅಧ್ಯಕ್ಷ ಎಚ್.ಸಿ.ರೇವಣಸಿದ್ದಪ್ಪ, ಉಪಾಧ್ಯಕ್ಷ ಶಿವಶಂಕರಪ್ಪ, ತಾಲ್ಲೂಕು ಅಧ್ಯಕ್ಷ ಸಿದ್ದೇಗೌಡ ಮತ್ತಿತರರಿದ್ದರು.