ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ನಡೆದ ಮಹಾ ಟ್ವಿಸ್ಟ್ ನಲ್ಲಿ ನ್ಯಾಷಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಸೋದರಳಿಯ ಅಜಿತ್ ಪವಾರ್ ಬಿಜೆಪಿ ಜೊತೆಗೆ ಕೈಜೋಡಿಸಿದ್ದಾರೆ. ರವಿವಾರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಅಜಿತ್ ಅವರು ಏಕನಾಥ್ ಶಿಂಧೆ ಸರ್ಕಾರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ವರ್ಷದ ಹಿಂದೆ ಶಿವಸೇನೆಯನ್ನು ಇಬ್ಭಾಗ ಮಾಡಿ ಶಿಂಧೆ ಬಣದ ಸಹಾಯದಿಂದ ಸರ್ಕಾರ ಕಟ್ಟಿದ್ದ ಬಿಜೆಪಿ ಇದೀಗ ಮತ್ತೊಂದು ವಿರೋಧ ಪಕ್ಷ ಎನ್ ಸಿಪಿಯನ್ನು ಒಡೆದಿದೆ.
ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಉದ್ಧವ್ ಠಾಕ್ರೆ ಬಣದ ಶಿವಸೇನೆಯು ಹೊಸ ಶಾಕಿಂಗ್ ವಿಚಾರವನ್ನು ಹೊರಹಾಕಿದೆ. ಶೀಘ್ರದಲ್ಲೇ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸ್ಥಾನದಲ್ಲಿ ಅಜಿತ್ ಪವಾರ್ ಇರಲಿದ್ದಾರೆ ಎಂದಿದೆ.
ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಈ ರೀತಿ ಬರೆಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಭಾರತೀಯ ಜನತಾ ಪಕ್ಷ (ಬಿಜೆಪಿ) ಮಹಾರಾಷ್ಟ್ರದ ರಾಜಕೀಯವನ್ನು ಮಾತ್ರವಲ್ಲದೆ ದೇಶದ ರಾಜಕೀಯವನ್ನು ಕೆಸರು ಮಾಡಿದೆ ಎಂದಿದೆ.
ಅಜಿತ್ ಪವಾರ್ ಅವರು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ದಾಖಲೆ ಬರೆದಿದ್ದಾರೆ. ಈ ಬಾರಿ ‘ಡೀಲ್’ ದೊಡ್ಡದಾಗಿರಬೇಕು. ಪವಾರ್ ಅವರು ಡಿಸಿಎಂ ಹುದ್ದೆಗಾಗಿ ಹೋಗಿಲ್ಲ. ಸಿಎಂ ಏಕನಾಥ್ ಶಿಂಧೆ ಮತ್ತು ಶಿವಸೇನೆಯ ಬಂಡಾಯ ಅಭ್ಯರ್ಥಿಗಳನ್ನು ಶೀಘ್ರದಲ್ಲಿ ಅನರ್ಹ ಮಾಡಲಾಗುತ್ತದೆ. ಅಜಿತ್ ಪವಾರ್ ಗೆ ಪಟ್ಟಾಭಿಷೇಕ ಮಾಡಲಾಗುತ್ತದೆ ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.
ಇದನ್ನೂ ಓದಿ:Gadar 2: ಸಿನಿಮಾ ರಿಲೀಸ್‌ಗೂ ಮುನ್ನ ನಿರ್ದೇಶಕರ ವಿರುದ್ದ ಗಂಭೀರ ಆರೋಪ ಮಾಡಿದ ನಟಿ ಅಮೀಶಾ
ಶಿಂಧೆ ಮತ್ತು ಇತರ ಶಾಸಕರು ಶಿವಸೇನೆಯನ್ನು ತೊರೆದಾಗ, ಅವರು ಪಕ್ಷದ ಅಧ್ಯಕ್ಷ ಮತ್ತು (ಅಂದಿನ) ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ನಿಧಿ ವಿತರಣೆ ಮತ್ತು ಕೆಲಸದ ಆದೇಶಗಳನ್ನು ಮಂಜೂರು ಮಾಡುವಲ್ಲಿ ಅಪಾರ ಹಿಡಿತವನ್ನು ಹೊಂದಿದ್ದ ಅಂದಿನ ಹಣಕಾಸು ಸಚಿವ ಅಜಿತ್ ಪವಾರ್ ಅವರನ್ನು ನಿಯಂತ್ರಿಸಲಿಲ್ಲ ಎಂದು ಹೇಳಿದ್ದರು. ಬಂಡಾಯ ಶಾಸಕರ ಪ್ರಕಾರ, ಅವರು ಪಕ್ಷ ತೊರೆಯಲು ಪ್ರಾಥಮಿಕ ಕಾರಣವೆಂದರೆ ಅದು ಎನ್ ಸಿಪಿ ಎಂದು ಸಂಪಾದಕೀಯ ಹೇಳಿದೆ.
ಇವರೆಲ್ಲಾ ಈಗ ಏನು ಮಾಡುತ್ತಾರೆ? ರವಿವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಶಿಂಧೆ ಬಣದ ಸಚಿವರ ಮುಖಚಹರೆಯಲ್ಲಿ ಮುಂದಿನ ದಿನಗಳ ಬಗ್ಗೆ ಸ್ಪಷ್ಟವಾಗಿ ಕಾಣುತ್ತಿತ್ತು ಎಂದು ಮರಾಠಿ ದಿನಪತ್ರಿಕೆ ಸಾಮ್ನಾ ಬರೆದಿದೆ.