ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದತಿಯ ಬಳಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಶೋಪಿಯಾನ್‌ಗೆ ಭೇಟಿ ನೀಡಿದ್ದು, ಭದ್ರತೆ ಪರಿಶೀಲಿಸಿದ್ದಾರೆ. ಈ ವೇಳೆ ಅವರು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್, ಕೇಂದ್ರೀಯ ಭದ್ರತಾ ಪಡೆಗಳ ಸ್ಥಳೀಯ ಮುಖ್ಯಸ್ಥರನ್ನು ಭೇಟಿಯಾಗಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಜತೆಗೆ ಸೈನಿಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಸ್ಥಳೀಯರೊಂದಿಗೂ ದೋವಲ್ ಮಾತುಕತೆ ನಡೆಸಿದ್ದು, ಅವರೊಂದಿಗೆ ಊಟವನ್ನೂ ಮಾಡಿದ್ದಾರೆ. ಈ ಕುರಿತ ವೀಡಿಯೋ ಈಗ ವೈರಲ್ ಆಗಿದೆ.
ಶ್ರೀನಗರದಲ್ಲಿ ಪ್ರತಿಭಟನೆ
ಇತ್ತ ಶ್ರೀನಗರದಲ್ಲಿ ಬುಧವಾರ 370 ರದ್ದತಿ ವಿರೋಧಿಸಿ ಪ್ರತಿಭಟನೆ ನಡೆದಿದ್ದು, 100ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಎಂದು ನ್ಯೂಸ್ 18 ವರದಿ ಮಾಡಿದೆ. ಸ್ಥಳದಲ್ಲಿ ಕರ್ಫ್ಯೂ ಹಾಕಲಾಗಿದ್ದು, ಪ್ರತಿಭಟನಕಾರನೊಬ್ಬನನ್ನು ಹಿಡಿಯಲು ಪೊಲೀಸರು ಯತ್ನಿಸಿದ್ದಾರೆ. ಈ ವೇಳೆ ಆತ ಝೀಲಂ ನದಿಗೆ ಹಾರಿದ್ದು ಬಳಿಕ ಮೃತಪಟ್ಟಿದ್ದಾನೆ ಎನ್ನಲಾಗಿದೆ.