ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನಾಪಡೆ ಅಮಾನವೀಯ ಕೃತ್ಯ ಎಸಗುತ್ತಿದೆ ಎಂಬ ಆರೋಪವನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತಳ್ಳಿಹಾಕಿದ್ದು, ಈ ಪ್ರದೇಶದಲ್ಲಿರುವ ಸೇನಾ ಯೋಧರು ಭಯೋತ್ಪಾದಕರ ವಿರುದ್ಧ ಮಾತ್ರ ಹೋರಾಡುತ್ತಿದ್ದಾರೆ. ಜಮ್ಮು-ಕಾಶ್ಮೀರದ ಪೊಲೀಸರು ಮತ್ತು ಅರೆಸೇನಾಪಡೆ ಕಣಿವೆ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುತ್ತಿದ್ದಾರೆ ಎಂದು ಹೇಳಿದರು.
ಕಣಿವೆ ರಾಜ್ಯದಲ್ಲಿ ಸೇನಾಪಡೆ ಅಮಾನವೀಯ ಕೃತ್ಯ ಎಸಗುತ್ತಿದೆ ಎಂಬ ಪ್ರಶ್ನೆಯೇ ಅಸಂಬದ್ಧ. ಸೇನೆ ಕೇವಲ ಉಗ್ರರ ವಿರುದ್ಧ ಹೋರಾಡುತ್ತಿದೆ ಅಷ್ಟೇ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ರದ್ದುಗೊಳಿಸಿರುವುದನ್ನು ಜಮ್ಮು-ಕಾಶ್ಮೀರದ ಬಹುಮತದಲ್ಲಿ ಬೆಂಬಲಿಸಿದ್ದಾರೆ ಎಂದರು.
ಗಡಿ ಭಾಗದ 20 ಕಿಲೋ ಮೀಟರ್ ದೂರದಲ್ಲಿರುವ ಪಾಕಿಸ್ತಾನದ ಕಮ್ಯೂನಿಕೇಶನ್ ಟವರ್ಸ್ ನಿಂದ, ಸಂದೇಶಗಳನ್ನು ರವಾನಿಸಲು ಪ್ರಯತ್ನಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ದೋವಲ್ ಈ ಸಂದರ್ಭದಲ್ಲಿ ಪಾಕ್ ವಿರುದ್ಧ ವಾಗ್ದಾಳಿ ನಡೆಸಿದರು.
ನಾವು ಪಾಕಿಸ್ತಾನದ ಕಳ್ಳಾಟಿಕೆಯ ಸಂಭಾಷಣೆಯನ್ನು ಕೇಳಿಸಿಕೊಂಡಿದ್ದೇವೆ, ಎಷ್ಟೊಂದು ಆ್ಯಪಲ್ ತುಂಬಿದ ಲಾರಿಗಳು ಸಂಚರಿಸುತ್ತಿವೆ..ಯಾಕೆ ನೀವು ಅದನ್ನು ತಡೆಯುತ್ತಿಲ್ಲ? ನಾವು ನಿಮಗೆ ಬಳೆಗಳನ್ನು ಕಳುಹಿಸುತ್ತೇವೆ” ಎಂಬುದಾಗಿ ತಮ್ಮ ವ್ಯಕ್ತಿಯೊಬ್ಬನಿಗೆ ಹೇಳುತ್ತಿರುವುದನ್ನು ದೋವಲ್ ಉಲ್ಲೇಖಿಸಿದ್ದಾರೆ.
ಕಣಿವೆ ರಾಜ್ಯದಲ್ಲಿ 370ನೇ ವಿಧಿಯನ್ನು ರದ್ದುಪಡಿಸಿರುವುದನ್ನು ಕಾಶ್ಮೀರದ ಜನರು ಬೆಂಬಲಿಸಿದ್ದಾರೆ. ಅವರೀಗ ಭವಿಷ್ಯದಲ್ಲಿನ ದೊಡ್ಡ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅದರಲ್ಲಿ ಉದ್ಯೋಗ, ಆರ್ಥಿಕ ಅಭಿವೃದ್ಧಿಯೂ ಸೇರಿದೆ. ಕೇವಲ ಕೆಲವೇ ಕೆಲವು ಜನರು ಮಾತ್ರ ಇದನ್ನು ವಿರೋಧಿಸುತ್ತಿದ್ದಾರೆ ಎಂದು ದೋವಲ್ ತಿಳಿಸಿದ್ದಾರೆ.