ಕೊಯಂಬತ್ತೂರು: ದುಲೀಪ್ ಟ್ರೋಫಿ ಕೂಟದ ಫೈನಲ್ ಪಂದ್ಯದ ಅಂತಿಮ ದಿನ ವಿವಾದಾತ್ಮಕ ಘಟನೆಯೊಂದು ನಡೆದಿದೆ. ಬ್ಯಾಟಿಂಗ್ ನಲ್ಲಿ ಮಿಂಚಿದ್ದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಅತಿಯಾದ ಸ್ಲೆಡ್ಜಿಂಗ್ ನಿಂದ ಶಿಕ್ಷೆ ಅನುಭವಿಸಿದ ಘಟನೆ ರವಿವಾರ ನಡೆದಿದೆ.
ಕೊಯಂಬತ್ತೂರಿನ ಎಸ್ಎನ್ಆರ್ ಕಾಲೇಜು ಮೈದಾನದಲ್ಲಿ ಪಶ್ಚಿಮ ವಲಯ ಮತ್ತು ದಕ್ಷಿಣ ವಲಯದ ನಡುವೆ ದುಲೀಪ್ ಟ್ರೋಫಿ ಫೈನಲ್ ಪಂದ್ಯ ನಡೆಯುತ್ತಿತ್ತು. ಅಂತಿಮ ದಿನವಾದ ರವಿವಾರ ದಕ್ಷಿಣ ವಲಯ ಬ್ಯಾಟಿಂಗ್ ನಡೆಸುತ್ತಿತ್ತು. ಈ ವೇಳೆ ಪ.ವಲಯದ ಯಶಸ್ವಿ ಜೈಸ್ವಾಲ್ ಅವರು ಪದೇ ಪದೇ ಬ್ಯಾಟರ್ ಗಳೊಂದಿಗೆ ಸ್ಲೆಡ್ಜಿಂಗ್ ಮಾಡುತ್ತಿದ್ದರು.
ದಕ್ಷಿಣ ವಲಯದ ಬ್ಯಾಟರ್ ಟಿ.ರವಿತೇಜ ಅವರೊಂದಿಗೆ ಜೈಸ್ವಾಲ್ ಪದೇ ಪದೇ ಜಗಳ ಮಾಡುತ್ತಿದ್ದರು. ಒಮ್ಮೆಯಂತೂ ಜಗಳ ಹೆಚ್ಚಾದಾಗ ಅಂಪೈರ್ ಗಳು ಮಧ್ಯಪ್ರವೇಶ ಮಾಡಬೇಕಾಯಿತು.
ಇದನ್ನೂ ಓದಿ:ಚಂಡೀಗಢ ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಹೆಸರು: ಪ್ರಧಾನಿ ಮೋದಿ ಘೋಷಣೆ
ಇನ್ನಿಂಗ್ ನ 50ನೇ ಓವರ್ ನ ವೇಳೆ ಜೈಸ್ವಾಲ್ ಮತ್ತು ರವಿತೇಜ ಅವರು ಜಗಳ ಕಾಯ್ದುಕೊಂಡಾಗ ಮಧ್ಯಪ್ರವೇಶಿಸಿದ ಪಶ್ವಿಮ ವಲಯ ನಾಯಕ ಅಜಿಂಕ್ಯ ರಹಾನೆ, ಜಗಳ ನಿಲ್ಲಿಸಿದರು.
ಜೈಸ್ವಾಲ್ ಅವರೊಂದಿಗೆ ಮಾತುಕತೆ ನಡೆಸಿದ ರಹಾನೆ, ನಂತರ ಅವರನ್ನು ಮೈದಾನದಿಂದ ಹೊರಕ್ಕೆ ಕಳುಹಿಸಿದರು. ನಾಯಕನ ನಿರ್ಧಾರದಿಂದ ಅಸಮಧಾನಗೊಂಡ ಯಶಸ್ವಿ ಮೈದಾನದಿಂದ ಹೊರಡುವಾಗಲೂ ಗೊಣಗುತ್ತಲೇ ಇದ್ದರು.
ನಂತರ 65ನೇ ಓವರ್ ನ ವೇಳೆಗೆ ಯಶಸ್ವಿ ಜೈಸ್ವಾಲ್ ಅವರನ್ನು ಮತ್ತೆ ಮೈದಾನಕ್ಕೆ ಕರೆಯಲಾಯಿತು.
ಫೈನಲ್ ಪಂದ್ಯದಲ್ಲಿ ರಹಾನೆ ನಾಯಕತ್ವದ ಪಶ್ಚಿಮ ವಲಯ ತಂಡವು 294 ರನ್ ಅಂತರದ ಗೆಲುವು ಸಾಧಿಸಿತು. ಭರ್ಜರಿ ದ್ವಿಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಜಯದೇವ್ ಉನಾದ್ಕತ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.