Advertisement

ಅಜೇಂದ್ರ ಶೆಟ್ಟಿ ಕೊಲೆಗೆ ಹಣಕಾಸಿನ ವ್ಯವಹಾರವೇ ಕಾರಣ : S.P. ವಿಷ್ಣುವರ್ಧನ್‌ ಹೇಳಿಕೆ

04:43 PM Aug 02, 2021 | Team Udayavani |

ಉಡುಪಿ : ಫೈನಾನ್ಸ್‌ ಹಣಕಾಸು ವಿಚಾರದಲ್ಲಿ ಮನಸ್ತಾಪ ಉಂಟಾಗಿ ಅಜೇಂದ್ರ ಶೆಟ್ಟಿಯನ್ನು ಕೊಲೆ ಮಾಡಿದ್ದಾಗಿ ಪಾಲುದಾರ ಅನೂಪ್‌ ಶೆಟ್ಟಿ ಒಪ್ಪಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ವಿಷ್ಣುವರ್ಧನ್‌ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಜು.30ರಂದು ರಾತ್ರಿ ಕುಂದಾಪುರ ಗ್ರಾಮಾಂತರ ಠಾಣಾ ಸರಹದ್ದಿನ ಕಾಳಾವರ ನಂದಿಕೇಶ್ವರ ಕಚೇರಿಯೊಳಗೆ ಫೈನಾನ್ಸ್‌ ವ್ಯವಹಾರ ನಡೆಸಿಕೊಂಡಿದ್ದ ಅಜೇಂದ್ರ ಶೆಟ್ಟಿಯನ್ನು ಮಾರಕಾಯುಧದಿಂದ ಕಡಿದು ಕೊಲೆ ಮಾಡಿ ಆತನ ಕೊರಳಿನಲ್ಲಿದ್ದ ಚಿನ್ನದ ಚೈನ್‌ ಮತ್ತು ಅವರ ಹೊಸ ಹೊಂಡಾ ಸಿಟಿ ಕಾರನ್ನು ಅಪಹರಿಸಲಾಗಿತ್ತು. ಈ ಘಟನೆ ನಡೆದ ಬಳಿಕ ಈ ಫೈನಾನ್ಸ್‌ನಲ್ಲಿ ಪಾಲುದಾರಿಕೆ ಮಾಡಿಕೊಂಡಿದ್ದ ಅನೂಪ್‌ ಶೆಟ್ಟಿಯು ತಲೆಮರೆಸಿಕೊಂಡಿದ್ದರಿಂದ ಈತನ ವಿರುದ್ಧ ಅಜೇಂದ್ರ ಶೆಟ್ಟಿಯ ಅಣ್ಣ ಮಹೇಂದ್ರ ಶೆಟ್ಟಿ ನೀಡಿರುವ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದಲ್ಲಿ ಆರೋಪಿಯ ಬಂಧನಕ್ಕಾಗಿ ಕುಂದಾಪುರ ಪೊಲೀಸ್‌ ಉಪಾಧೀಕ್ಷಕರಾದ ಕೆ.ಶ್ರೀಕಾಂತ್‌ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕರಾದ ಕುಂದಾಪುರದ ಗೋಪಿಕೃಷ್ಣ ಮತ್ತು ಬೈಂದೂರಿನ ಸಂತೋಷ ಕಾಯ್ಕಿಣಿ ನೇತೃತ್ವದಲ್ಲಿ ಕುಂದಾಪುರ ಉಪವಿಭಾಗದ ಅಪರಾಧ ಪತ್ತೆ ದಳದ ಸಿಬಂದಿಯವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿ ಆರೋಪಿಯನ್ನು ಜು.31 ರಂದು ಗೋವಾ ರಾಜ್ಯದ ಕೋಲ್ವಾ ಬೀಚ್‌ ಬಳಿ ಬಂಧಿಸಲಾಗಿದೆ ಎಂದರು.

ಇದನ್ನೂ ಓದಿ :ರಾಷ್ಟ್ರ ಧ್ವಜಕ್ಕೆ ಅಗೌರವ : ಕಣ್ಣು ಮುಚ್ಚಿ‌ ಕುಳಿತ ಉಪ್ಪರಪೇಟೆ ಗ್ರಾ.ಪಂ. ಅಧಿಕಾರಿಗಳು

ಆರೋಪಿ ಅನೂಪ್‌ ಶೆಟ್ಟಿ ಈ ಮೊದಲು ದುಬಾಯಿ ಮತ್ತು ಸಿಂಗಾಪುರದಲ್ಲಿ ಕೆಲಸ ಮಾಡಿಕೊಂಡಿದ್ದು ಬಳಿಕ ಊರಿಗೆ ಮರಳಿ ಅಜೇಂದ್ರ ಶೆಟ್ಟಿಯೊಂದಿಗೆ ಸೇರಿಕೊಂಡು ಫೈನಾನ್ಸ್‌ ವ್ಯವಹಾರ ಮಾಡಿಕೊಂಡಿದ್ದ. ಕೊಲೆಯ ಬಗ್ಗೆ ಇನ್ನಷ್ಟು ಮಾಹಿತಿ ಹೆಚ್ಚಿನ ತನಿಖೆಯ ಬಳಿಕ ತಿಳಿಯಲಿದೆ ಎಂದರು.

Advertisement

ಆತನು ಅಪಹರಿಸಿಕೊಂಡು ಹೋಗಿರುವ ಕಾರನ್ನು ವಿಶೇಷ ತಂಡದಲ್ಲಿದ್ದ ಬೈಂದೂರು ಸಿಪಿಐ ರವರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ನಡೆದ 24 ಗಂಟೆಯೊಳಗಾಗಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ವಿಶೇಷ ತಂಡದಲ್ಲಿ ಶ್ರೀಧರ್‌ ನಾಯ್ಕ ಪಿ.ಎಸ್‌.ಐ. ಶಂಕರನಾರಾಯಣ, ನಂಜನಾಯ್ಕ ಪಿ.ಎಸ್‌.ಐ. ಗಂಗೊಳ್ಳಿ, ಕುಂದಾಪುರ ಗ್ರಾಮಾಂತರ ಠಾಣೆಯ ಪಿ.ಎಸ್‌.ಐ. ನಿರಂಜನ ಗೌಡ ಅವರೊಂದಿಗೆ ಉಪವಿಭಾಗದ ಸಿಬಂದಿಯವರಾದ ಮೋಹನ, ಚಂದ್ರಶೇಖರ ನಾಗೇಂದ್ರ, ಶ್ರೀನಿವಾಸ, ಸಂತೋಷ್‌ ಕುಮಾರ್‌, ಸಂತೋಷ್‌, ರಾಘವೇಂದ್ರ, ರಾಮು, ಸೀತಾರಾಮ, ಸತೀಶ್‌, ಚಿದಾನಂದ, ಮಧುಸೂಧನ್‌ ಹಾಗೂ ತಾಂತ್ರಿಕ ವಿಭಾಗದ ಸಿಬಂದಿಗಳಾದ ದಿನೇಶ್‌ ಸಹಕರಿಸಿರುತ್ತಾರೆ ಎಂದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕುಮಾರಚಂದ್ರ, ಕುಂದಾಪುರ ಪೊಲೀಸ್‌ ಉಪಾಧೀಕ್ಷಕರಾದ ಕೆ.ಶ್ರೀಕಾಂತ್‌ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕರಾದ ಗೋಪಿಕೃಷ್ಣ ಮತ್ತು ಬೈಂದೂರು ವೃತ್ತ ನಿರೀಕ್ಷರಾದ ಸಂತೋಷ ಕಾಯ್ಕಿಣಿ, ಶಂಕರನಾರಾಯಣ ಪಿಎಸ್‌ಐ ಶ್ರೀಧರ್‌ ನಾಯ್ಕ, ಗಂಗೊಳ್ಳಿ ಪಿಎಸ್‌ ಐ ನಂಜಾನಾಯ್ಕ, ಗ್ರಾಮಾಂತರ ಠಾಣೆಯ ಪಿ.ಎಸ್‌.ಐ. ನಿರಂಜನ ಗೌಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next