Advertisement

ಫೈನಾನ್ಸ್‌ ಮಾಲಕ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣ:  ಹಣಕಾಸಿನ ವ್ಯವಹಾರವೇ ಹತ್ಯೆಗೆ ಕಾರಣ

01:06 AM Aug 03, 2021 | Team Udayavani |

ಉಡುಪಿ: ಫೈನಾನ್ಸ್‌ ಹಣಕಾಸು ವಿಚಾರದಲ್ಲಿ ಮನಸ್ತಾಪ ವಾಗಿ ಅಜೇಂದ್ರ ಶೆಟ್ಟಿಯನ್ನು ಕೊಲೆ ಮಾಡಿರುವುದಾಗಿ ಪಾಲುದಾರ ಅನೂಪ್‌ ಶೆಟ್ಟಿ ಒಪ್ಪಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಎನ್‌. ವಿಷ್ಣುವರ್ಧನ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಜು. 30ರ ರಾತ್ರಿ ಕುಂದಾಪುರದ ಕಾಳಾವರ ನಂದಿಕೇಶ್ವರ ಕಚೇರಿಯೊಳಗೆ ಫೈನಾನ್ಸ್‌ ವ್ಯವಹಾರ ನಡೆಸಿಕೊಂಡಿದ್ದ ಅಜೇಂದ್ರ ಶೆಟ್ಟಿ ಅವರನ್ನು ಕಡಿದು ಕೊಲೆ ಮಾಡಿ ಚಿನ್ನದ ಚೈನ್‌ ಮತ್ತು ಹೊಸ ಹೊಂಡಾ ಸಿಟಿ ಕಾರನ್ನು ಅಪಹರಿಸಲಾಗಿತ್ತು. ಬಳಿಕ ಪಾಲುದಾರ ಅನೂಪ್‌ ಶೆಟ್ಟಿ ತಲೆಮರೆಸಿಕೊಂಡಿದ್ದರಿಂದ ಆತನ ವಿರುದ್ಧ ಅಜೇಂದ್ರ ಶೆಟ್ಟಿಯ ಅಣ್ಣ ಮಹೇಂದ್ರ ಶೆಟ್ಟಿ ಕುಂದಾಪುರ ಗ್ರಾಮಾಂತರ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು.

ಪೊಲೀಸರ ಕ್ಷಿಪ್ರ ಕಾರ್ಯ:

ಆತನು ಅಪಹರಿಸಿದ್ದ ಕಾರನ್ನು ವಿಶೇಷ ತಂಡದಲ್ಲಿದ್ದ ಬೈಂದೂರು ಸಿಪಿಐ ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ನಡೆದ

24 ಗಂಟೆಯೊಳಗಾಗಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣ ಭೇದಿಸಿದ ವಿಶೇಷ ತಂಡದಲ್ಲಿ ಶಂಕರನಾರಾಯಣ ಎಸ್‌ಐ ಶ್ರೀಧರ್‌ ನಾಯ್ಕ, ಗಂಗೊಳ್ಳಿ ಎಸ್‌ಐ ನಂಜನಾಯ್ಕ, ಕುಂದಾಪುರ ಗ್ರಾ. ಠಾಣೆಯ ಎಸ್‌ಐ ನಿರಂಜನ ಗೌಡ

Advertisement

ಅವರೊಂದಿಗೆ ಉಪವಿಭಾಗದ ಸಿಬಂದಿ ಮೋಹನ, ಚಂದ್ರಶೇಖರ, ನಾಗೇಂದ್ರ, ಶ್ರೀನಿವಾಸ, ಸಂತೋಷ್‌ ಕುಮಾರ್‌, ಸಂತೋಷ್‌, ರಾಘವೇಂದ್ರ, ರಾಮು, ಸೀತಾರಾಮ, ಸತೀಶ್‌, ಚಿದಾನಂದ, ಮಧುಸೂದ‌ನ್‌ ಹಾಗೂ ತಾಂತ್ರಿಕ ವಿಭಾಗದ ದಿನೇಶ್‌ ಸಹಕರಿಸಿದ್ದರು ಎಂದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕುಮಾರಚಂದ್ರ, ಕುಂದಾಪುರ ಡಿವೈಎಸ್‌ಪಿ ಕೆ. ಶ್ರೀಕಾಂತ್‌, ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಮತ್ತು ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.

ಆರೋಪಿಗೆ ಪೊಲೀಸ್‌ ಕಸ್ಟಡಿ :

ಕುಂದಾಪುರ: ಆರೋಪಿಯನ್ನು ಸೋಮವಾರ ಕುಂದಾಪುರದ ಒಂದನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶೆ ನಾಗರತ್ನಮ್ಮ ಅವರು ಆ. 9ರ ವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿದ್ದಾರೆ. ಅಭಿಯೋಜನೆ ಪರ ಸಹಾಯಕ ಸರಕಾರಿ ಅಭಿಯೋಜಕಿ ವರ್ಷಶ್ರೀ ವಾದಿಸಿದ್ದರು.

ತನಿಖೆಗಾಗಿ ಗೋವಾಕ್ಕೆ?:

ಅನೂಪ್‌ ಗೋವಾದ ಕೊಲ್ವಾ ಬೀಚ್‌ ಬಳಿ ಸೆರೆ ಸಿಕ್ಕಿದ್ದು, ಪ್ರಕರಣದ ಕುರಿತಂತೆ ಹೆಚ್ಚಿನ ತನಿಖೆ ಅಗತ್ಯವಿರುವ ಕಾರಣ, ಪೊಲೀಸರು ಗೋವಾಕ್ಕೆ ಕರೆದೊಯ್ದು ಮಾಹಿತಿ ಕಲೆಹಾಕಲಿದ್ದಾರೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ. ಆತ ಗಾಂಜಾ ಸೇವಿಸಿದ್ದಲ್ಲದೆ, ಕೊಲೆಗೆ ಡ್ಯಾಗರ್‌ (ಮುಳ್ಳು ಮುಳ್ಳಿನ) ಚೂರಿ ಬಳಸಿದ್ದ ಎನ್ನಲಾಗಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.

ವೈದ್ಯಕೀಯ ತಪಾಸಣೆ :

ಕೋರ್ಟ್‌ಗೆ ಹಾಜರುಪಡಿಸುವ ಮುನ್ನ ಕುಂದಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಪಿಯ ವೈದ್ಯಕೀಯ ತಪಾಸಣೆಯನ್ನು ನಡೆಸಲಾಯಿತು. ಕೃತ್ಯ ಎಸಗುವ ಮುನ್ನ ಮಾದಕ ದ್ರವ್ಯ ಸೇವಿಸಿದ್ದ ಎನ್ನಲಾಗುತ್ತಿದ್ದು, ಈ ಬಗ್ಗೆ ವೈದ್ಯಕೀಯ ತಪಾಸಣೆಯ ವರದಿ ಬಂದ ಬಳಿಕವಷ್ಟೇ ತಿಳಿದು ಬರಬೇಕಿದೆ.

ಕಾರು ಕೊಟ್ಟಿತು ಸುಳಿವು?:

ಅನೂಪ್‌ ಕೃತ್ಯವೆಸಗಿ ತನ್ನ ಬುಲೆಟ್‌ ಅನ್ನು ಫೈನಾನ್ಸ್‌ ಕಚೇರಿ ಬಳಿಯೇ ಬಿಟ್ಟು, ಅಜೇಂದ್ರ ಕೆಲ ದಿನಗಳ ಹಿಂದಷ್ಟೇ ಖರೀದಿಸಿದ್ದ ನೋಂದಣಿಯಾಗದ ಹೊಸ ಕಾರಿನಲ್ಲಿ ಗೋವಾಕ್ಕೆ ಪರಾರಿಯಾಗಿದ್ದ. ಇದು ಹೋಂಡ ಸಿಟಿ ಹೊಸ ಮಾದರಿಯ ಕಾರು ಆಗಿರುವುದರಿಂದ ಈ ಕಾರಿಗೆ ಮೊಬೈಲ್‌ ಜಿಪಿಎಸ್‌ ವ್ಯವಸ್ಥೆಯಿತ್ತು ಎನ್ನಲಾಗುತ್ತಿದ್ದು, ಈ ಮೂಲಕ ಆರೋಪಿ ಪತ್ತೆ ಕಾರ್ಯ ಸುಲಭವಾಯಿತೆನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next