Advertisement

Ajekar;ಕೆರೆಗೆ ಮೀನು ಹಿಡಿಯಲು ತೆರಳಿದ್ದ ಮಾವ-ಅಳಿಯ ಮುಳುಗಿ ಸಾವು

09:49 PM May 19, 2024 | Team Udayavani |

ಕಾರ್ಕಳ:/ಅಜೆಕಾರು: ಮೀನು ಹಿಡಿಯಲು ತೆರಳಿದ್ದ ಒಂದೆ ಕುಟುಂಬದ ಇಬ್ಬರು ಸದಸ್ಯರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಮುದೆಲ್ಕಡಿ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ. ದರ್ಖಾಸು ನಿವಾಸಿ ವಿವಾಹಿತ ಹರೀಶ್ ಪೂಜಾರಿ( 43) ಮತ್ತು ಸಹೋದರಿ ಮಗ ಕೆರ್ವಾಶೆಯ ಪಾಚಾರಬೆಟ್ಟು ನಿವಾಸಿ ಬಾಲಕ ರಿತೇಶ್(17) ಮೃತ ದುರ್ದೈವಿಗಳು.

Advertisement

ಶಿರ್ಲಾಲುವಿನ ಮೂಡಯಿಗುಡ್ಡೆ ದರ್ಖಾಸು ನಿವಾಸಿ, ಸೇತು ಪೂಜಾರಿ ಕಮಲ ದಂಪತಿಗಳ ಪುತ್ರರಾಗಿರುವ ಹರೀಶ್ ಪೂಜಾರಿ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದರು. ಬೇಸಗೆ ರಜೆ ಹಿನ್ನಲೆಯಲ್ಲಿ ಅಜ್ಜಿ ಮನೆಗೆ ಕೆರ್ವಾಶೆಯ ಶೆಟ್ಟಿಬೆಟ್ಟು ಪಾಚಾರ ಬೆಟ್ಟುವಿನಿಂದ ಅಕ್ಕನ ಮಗ ರಿತೇಶ್ ತನ್ನ ತಂದೆ- ತಾಯಿ, ಸಹೋದರಿ ಜತೆ ಶನಿವಾರ ಬಂದಿದ್ದರು.

ಹರೀಶ್ ಪೂಜಾರಿ ಮತ್ತು  ರಿತೇಶ್ ಬಲೆ ಹಾಕಿ ಮೀನು ಹಿಡಿಯಲೆಂದು ಉಬ್ರೇಲು ಗುಂಡಿ ಕೆರೆಗೆ ತೆರಳಿದ್ದರು. ಮೀನು ಹಿಡಿಯಲೆಂದು ನೀರಿಗೆ ಇಳಿದಿದ್ದ ವೇಳೆ ರಿತೇಶ್ ಕಾಲು ಕೆಸರಿನಲ್ಲಿ ಸಿಲುಕಿಕೊಂಡು ಮುಳುಗಿದ್ದಾನೆ. ಆತನ ರಕ್ಷಣೆಗೆಂದು ತೆರಳಿದ ಮಾವ ಹರೀಶ್ ಪೂಜಾರಿ ಕೂಡ ಕೆಸರು ನೀರಿನಲ್ಲಿ ಸಿಲುಕಿಕೊಂಡು ಮುಳುಗಿ ಮೃತಪಟ್ಟರು.ಘಟನೆ ಮನೆಯ ಪಕ್ಕದಲ್ಲೆ ನಡೆದಿದೆ.

ಘಟನೆ ನಡೆದಾಗ ಹತ್ತಿರದಲ್ಲಿ ಕುಟುಂಬ ಸದಸ್ಯರು ಇದ್ದು ಅಪಾಯದ ಮುನ್ಸೂಚನೆ ಅರಿತು ರಕ್ಷಣೆಗೆ ಬೊಬ್ಬೆ ಹಾಕಿದ್ದಾರೆ.ಆದರೆ ರಕ್ಷಿಸಲು ಸಾಧ್ಯವಾಗದೆ ಅಸಹಾಯಕರಾದರು. ನೋಡನೋಡುತ್ತಿದ್ದಂತೆ ಅವರಿಬ್ಬರು ಮುಳುಗಿ ಮೃತಪಟ್ಟರು. ಮೃತ ಹರೀಶ್ ಪೂಜಾರಿ ಪತ್ನಿ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next