ಧರ್ಮಶಾಲಾ: ದೇಶದಲ್ಲಿ ಕೋವಿಡ್-19 ಸೋಂಕು ತಡೆಗಾಗಿ 21 ದಿನಗಳ ಲಾಕ್ ಡೌನ್ ಹೇರಲಾಗಿದೆ. ಈ ಮಧ್ಯೆ ಕಬಡ್ಡಿ ಸ್ಟಾರ್ ಅಜಯ್ ಠಾಕೂರ್ ಕೂಡಾ ಡ್ಯೂಟಿಯಲ್ಲಿದ್ದು, ಖಾಕಿ ತೊಟ್ಟು ಪ್ರಧಾನ ಮಂತ್ರಿಗಳ ಲಾಕ್ ಡೌನ್ ಆದೇಶವನ್ನು ಪಾಲಿಸುವಂತೆ ನೋಡಿಕೊಳ್ಳುತ್ತಿದ್ದಾರೆ.
ನಿಮಗೆ ಗೊತ್ತಿರುವಂತೆ ಅಜಯ್ ಠಾಕೂರ್ ಹಿಮಾಚಲ ಪ್ರದೇಶದಲ್ಲಿ ಪೊಲೀಸ್ ಉಪವರಿಷ್ಠಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ವಿಶ್ವ ಕಬಡ್ಡಿಯಲ್ಲಿ ಪ್ರಸಿದ್ದಿ ಪಡೆದಿರುವ ಅಜಯ್ ಠಾಕೂರ್ ಪದ್ಮಶ್ರೀ ಪುರಸ್ಕೃತ ಕೂಡಾ. ಸದ್ಯ ಹಿಮಾಚಲ ಪ್ರದೇಶ ರಾಜ್ಯದ ಬಿಲಾಸ್ಪುರದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿರುವ ಮಾಜಿ ಬೆಂಗಳೂರು ಬುಲ್ಸ್ ಆಟಗಾರ “ ಆನ್ ಡ್ಯೂಟಿ” ಎಂದು ಬರೆದುಕೊಂಡಿದ್ದಾರೆ.
“ಇನ್ನೂ ಸಮಯವಿದೆ. ನೀವೂ ಮನೆಯಲ್ಲಿರಿ.ನಿಮ್ಮವರಿಗೂ ಹೇಳಿ. ಆಡಳಿತದೊಂದಿಗೆ ಸಹಕರಿಸಿ. ಆವಾಗ ಮಾತ್ರ ಇದು ಸಾಧ್ಯ” ಎಂದು ಅಜಯ್ ಠಾಕೂರ್ ಮನವಿ ಮಾಡಿದ್ದಾರೆ.
ದೇಶದಾದ್ಯಂತ ಕೋವಿಡ್-19 ಸೋಂಕು ಹರಡುವುದನ್ನು ತಡೆಯಲು 21 ದಿನಗಳ ಲಾಕ್ ಡೌನ್ ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆದೇಶಿಸಿದ್ದಾರೆ.