ಕನ್ನಡದಲ್ಲಿ ಮಲ್ಟಿಸ್ಟಾರ್ ಸಿನಿಮಾಗಳಿಗೆ ಈಗ ಬರವಿಲ್ಲ. ಕನ್ನಡದ ಬಹುತೇಕ ಸ್ಟಾರ್ ನಟರು ಜೊತೆಗೂಡಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಹಲವು ಮಲ್ಟಿಸ್ಟಾರ್ ಚಿತ್ರಗಳು ಬಂದಿವೆ, ಬರುತ್ತಿವೆ, ಆ ಪೈಕಿ ಬೆರಳೆಣಿಕೆ ಚಿತ್ರಗಳು ಗೆದ್ದಿವೆ. ಈಗ ಶಿವರಾಜ್‌ಕುಮಾರ್ ಮತ್ತು ಸುದೀಪ್ “ದಿ ವಿಲನ್’ ಚಿತ್ರದಲ್ಲಿ ಮಿಂಚಿದರೆ, ಅತ್ತ ಪುನೀತ್‌ರಾಜ್‌ಕುಮಾರ್ ಅವರು ಸಹ ಒಳ್ಳೆಯ ಕಥೆ ಸಿಕ್ಕರೆ ಖಂಡಿತ ಮಲ್ಟಿಸ್ಟಾರ್ ಸಿನಿಮಾದಲ್ಲಿ ನಟಿಸುವುದಾಗಿ ಇತ್ತೀಚೆಗೆ ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೆ ಕೊಟ್ಟಿದ್ದರು. ಈಗಾಗಲೇ ಒಂದಷ್ಟು ಮಲ್ಟಿಸ್ಟಾರ್ ಚಿತ್ರಗಳು ಸೆಟ್ಟೇರುತ್ತಿವೆ. ಈಗ ಇನ್ನೊಂದು ಹೊಸ ಬೆಳವಣಿಗೆಯೆಂದರೆ, ಕನ್ನಡದ ಮತ್ತೂಬ್ಬ ಸಕ್ಸಸ್ ನಟ ಕೃಷ್ಣ ಅಜೇಯ್‌ರಾವ್ ಅವರು ಇನ್ನೊಂದು ಮಲ್ಟಿಸ್ಟಾರ್ ಚಿತ್ರಕ್ಕೆ ಜೈ ಎಂದಿದ್ದಾರೆ.
ಈ ಹಿಂದೆ ಯೋಗಿ ಹಾಗು ಮದರಂಗಿ ಕೃಷ್ಣ ಜೊತೆಗೆ “ಜಾನ್ ಜಾನಿ ಜನಾರ್ದನ್’ ಚಿತ್ರ ಮಾಡಿದ್ದ ಅಜೇಯ್‌ರಾವ್, ಹೊಸ ತಂಡದ ಜತೆ ಹೊಸಬಗೆಯ ಚಿತ್ರದಲ್ಲಿ ಕಾಣಿಸಿಕೊಳ್ಳಲು ಅಣಿಯಾಗಿದ್ದಾರೆ. ಅದೊಂದು ಪಕ್ಕಾ ಔಟ್ ಅಂಟ್ ಔಟ್ ಆ್ಯಕ್ಷನ್ ಕಮ್ ಥ್ರಿಲ್ಲರ್ ಸಿನಿಮಾ ಎನ್ನುವ ಅಜೇಯ್‌ರಾವ್, ಆ ಚಿತ್ರ ಏಕಕಾಲದಲ್ಲಿ ಕನ್ನಡ, ತೆಲುಗು ಹಾಗು ಹಿಂದಿಯಲ್ಲಿ ತಯಾರಾಗಲಿದೆ ಎನ್ನುತ್ತಾರೆ. ಸದ್ಯಕ್ಕೆ ಅಜೇಯ್‌ರಾವ್ ಆ ಹೊಸ ಚಿತ್ರದಲ್ಲಿ ನಟಿಸುವುದು ಪಕ್ಕಾ ಆಗಿದೆ. ಅವರ ಜತೆಗೆ ವಿನೋದ್‌ಪ್ರಭಾಕರ್ ಅವರು ಕೂಡ ಸ್ಪೆಷಲ್ ಪಾತ್ರ ಮಾಡಲಿದ್ದಾರೆ.
ಇನ್ನು, ಅಜೇಯ್‌ರಾವ್ ನಟಿಸಲಿರುವ ಹೊಸ ಚಿತ್ರಕ್ಕೆ ಅನಿಲ್ ಎಂಬುವವರು ನಿರ್ದೇಶನ ಮಾಡಲಿದ್ದಾರೆ. ಹೈದರಾಬಾದ್ ಮೂಲದ ಅನಿಲ್‌ಗೆ ಕನ್ನಡದಲ್ಲಿ ಇದು ಮೊದಲ ಸಿನಿಮಾವಂತೆ. ಇನ್ನು, ಸಾಗರ್ ಎಂಬುವವರು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಅವರೊಂದಿಗೆ ಹಲವು ಕಾಪೋರೇಟ್ ಕಂಪೆನಿಗಳು ಸಹ ನಿರ್ಮಾಣದಲ್ಲಿ ಕೈ ಜೋಡಿಸಿದ್ದು, ಸಿನಿಮಾಗಿನ್ನೂ ಶೀರ್ಷಿಕೆ ಪಕ್ಕಾ ಆಗಿಲ್ಲ. “ಅದೊಂದು ಬಿಗ್‌ಬಜೆಟ್ ಸಿನಿಮಾ ಆಗಲಿದೆ. ನಾನು ಬಯಸಿದ ಕಥೆ ಅದಾಗಿದ್ದರಿಂದ ನಟಿಸಲು ಒಪ್ಪಿದ್ದೇನೆ. ಮೊದಲೇ ಹೇಳಿದಂತೆ, ಅದು ಪಕ್ಕಾ ಕಮರ್ಷಿಯಲ್ ಹಾಗು ಆ್ಯಕ್ಷನ್ ಪ್ಯಾಕೇಜ್ ಸಿನಿಮಾ ಆಗಲಿದೆ’ ಎಂಬುದು ಅಜೇಯ್‌ರಾವ್ ಮಾತು.
ಅಂದಹಾಗೆ, ಅಜೇಯ್‌ರಾವ್ ಅವರೀಗ ಸದ್ಯಕ್ಕೆ “ತಾಯಿಗೆ ತಕ್ಕ ಮಗ’ ಚಿತ್ರಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಶಶಾಂಕ್ ನಿರ್ಮಾಣದ ಈ ಚಿತ್ರಕ್ಕೆ ನವೆಂಬರ್ ಮೊದಲ ವಾರದಲ್ಲಿ ಟ್ರಯಲ್ ಶೂಟ್ ನಡೆಯಲಿದೆ. ಅದಾದ ಬಳಿಕ ಮುಹೂರ್ತ ನಡೆಯಲಿದೆ. “ತಾಯಿಗೆ ತಕ್ಕ ಮಗ’ ಬಳಿಕ ಅಜೇಯ್‌ರಾವ್ ಹೊಸ ಸಿನಿಮಾಗೆ ಗ್ರೀನ್‌ಸಿಗ್ನಲ್ ಕೊಡಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಅದು ಜನವರಿ, 2018 ರಲ್ಲಿ ಶುರುವಾಗಲಿದೆ. ಹಾಗಾದರೆ, ಅಜೇಯ್‌ರಾವ್ ನಟಿಸಲಿರುವ ಹೊಸ ಚಿತ್ರದಲ್ಲಿ ವಿನೋದ್‌ಪ್ರಭಾಕರ್ ಪಾತ್ರ ಏನು ಗೊತ್ತಾ? ಅದು ಸಿಬಿಐ ಅಧಿಕಾರಿ. ಅವರಿಲ್ಲಿ ಸ್ಟೈಲಿಷ್ ಆಗಿರುವ ಸಿಬಿಐ ಅಧಿಕಾರಿಯಂತೆ. ವಿನೋದ್‌ಪ್ರಭಾಕರ್‌ಗೆ ಕಥೆ ಮತ್ತು ಪಾತ್ರ ಇಷ್ಟವಾಗಿದ್ದಕ್ಕೆ ನಟಿಸಲು ಒಪ್ಪಿದ್ದಾಗಿ ಹೇಳುತ್ತಾರೆ ವಿನೋದ್ ಪ್ರಭಾಕರ್.
ನಾನು ಬಿಜಿಯಾಗಿದ್ದರೂ, ಆ ಕಥೆ, ಪಾತ್ರ ಕೇಳಿದಾಗ ಬಿಡಬಾರದು ಎನಿಸಿತು. ಹಾಗಾಗಿ 20 ದಿನಗಳ ಕಾಲ ಡೇಟ್ ಕೊಟ್ಟಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ಆ ತಂಡ ನೋಡಿ ಖುಷಿಯಾಯ್ತು. ತುಂಬಾನೇ ತಯಾರಿ ಮಾಡಿಕೊಂಡಿದ್ದಾರೆ. ಕನ್ನಡ, ತೆಲುಗು, ಹಿಂದಿಯಲ್ಲಿ ತಯಾರಾಗುತ್ತಿದೆ. ನನ್ನದು ಅಲ್ಲಿ ಅತಿಥಿ ಪಾತ್ರವಷ್ಟೇ. ಆದರೂ, ಅದಕ್ಕೇ ಸಾಕಷ್ಟು ಆದ್ಯತೆ ಇದೆ. ಯೂನಿಫಾರಂ ಇಲ್ಲದ, ರಗಡ್ ಆಫೀಸರ್ ನಾನು ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ ವಿನೋದ್. ಅಂದಹಾಗೆ, ಬುಧವಾರ ಹೈದರಾಬಾದ್‌ನಲ್ಲಿ ಅಜೇಯ್‌ರಾವ್ ಮತ್ತು ವಿನೋದ್‌ಪ್ರಭಾಕರ್ ನಟಿಸಲಿರುವ ಹೊಸ ಚಿತ್ರಕ್ಕೆ ಚಿಕ್ಕದ್ದಾಗಿ ಪೂಜೆಯೂ ನಡೆದಿದೆ.