ಕನ್ನಡ ಚಿತ್ರರಂಗಕ್ಕೆ ಈಗ ಹೊಸದಾಗಿ ಬರುವ ಪ್ರತಿಭೆಗಳು ಒಂದಷ್ಟು ಪೂರ್ವ ತಯಾರಿಯೊಂದಿಗೆ ಬರುತ್ತಾರೆ. ಈ ಸಾಲಿಗೆ ಹೊಸ ಸೇರ್ಪಡೆ ಅಜಯ್ ಪೃಥ್ವಿ. ಯಾರು ಈ ಅಜಯ್ ಪೃಥ್ವಿ ಎಂದರೆ “ನಾಟ್ ಔಟ್’ ಸಿನಿಮಾದ ಹೀರೋ.
ಹೌದು, “ನಾಟ್ಔಟ್’ ಎಂಬ ಸಿನಿಮಾವೊಂದು ಸದ್ದಿಲ್ಲದೇ ತಯಾರಾಗಿ ಬಿಡುಗಡೆ ಹಂತಕ್ಕೆ ಬಂದಿದೆ. ನಾಯಕ ಅಜಯ್ ಪೃಥ್ವಿ ಹೀರೋ ಆಗುವ ಮುನ್ನ ವಿದೇಶದಲ್ಲಿ ನಟನಾ ತರಬೇತಿ ಪಡೆದಿದ್ದಾರೆ. ಇತ್ತೀಚೆಗೆ ಅವರ ನಟನೆಯ “ನಾಟ್ ಔಟ್’ ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆಯಾಗಿದೆ.
ರಾಷ್ಟ್ರಕೂಟ ಪಿಕ್ಚರ್ಸ್’ ಲಾಂಛನ ದಲ್ಲಿ ವಿ.ರವಿಕುಮಾರ್ ಹಾಗೂ ಶಮುದ್ದೀನ್ ಎ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅಂಬರೀಶ್ ಈ ಸಿನಿಮಾ ನಿರ್ದೇಶಕರು. ಎಂ.ಎಲ್.ಸಿ ಪುಟ್ಟಣ್ಣ, ನಿರ್ದೇಶಕ ಎ.ಪಿ.ಅರ್ಜುನ್ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.
“ಕಣ್ಣಿಗೆ ಕಾಣದೆ ಇರುವ ವ್ಯಕ್ತಿ ಕೊಡುವ ತೀರ್ಪು ನಾಟ್ಔಟ್ ಪ್ರತಿ ಆಟದಲ್ಲಿ ಒಬ್ಬ ಅಂಪೈರ್ ಇರ್ತಾನೆ. ಜೀವನದ ಆಟಕ್ಕೂ ಒಬ್ಬ ಅಂಪೈರ್ ಇರ್ತಾನೆ.. ಈ ಚಿತ್ರದಲ್ಲಿ ಹುಲಿ – ಕುರಿ ಎಂಬ ಹಳ್ಳಿ ಸೊಗಡಿನ ಆಟವನ್ನ ಹೇಗೆ ಆಡುತ್ತಾರೋ, ಅದೇ ರೀತಿ ಚಿತ್ರದ ಕಥೆ ಸಾಗುತ್ತೆ’ ಎನ್ನುವುದು ನಿರ್ದೇಶಕ ಅಂಬರೀಶ್ ನೀಡುವ ವಿವರ.
Related Articles
ನಾಯಕ ಅಜಯ್ ಪೃಥ್ವಿ ಮಾತನಾಡಿ, “ನಾನು ಏಕಾಏಕಿ ಚಿತ್ರರಂಗಕ್ಕೆ ಬಂದಿಲ್ಲ. ಐದನೇ ತರಗತಿಯಿಂದಲೇ ಬಿಂಬ ಮೂಲಕ ಸಾಕಷ್ಟು ಕಲಿತೆ. ನಂತರ ಪ್ರಸಿದ್ಧ ತರಬೇತಿ ಶಾಲೆಯಲ್ಲಿ ನಟನೆ ಕೂಡ ಕಲಿತೆ. ಮೆಹಬೂಬ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇನ್ನೂ ಮೂರು, ನಾಲ್ಕು ಚಿತ್ರಗಳಲ್ಲೂ ಅಭಿನಯಿಸಿದ್ದೇನೆ. ಈಗ ನಾಟ್ ಔಟ್ ಚಿತ್ರದಲ್ಲಿ ನಟಿಸಿದ್ದೇನೆ. ಚಿತ್ರ ಹಾಗೂ ನನ್ನ ಪಾತ್ರ ಚೆನ್ನಾಗಿದೆ’ ಎಂದರು.
ಚಿತ್ರದಲ್ಲಿ ರಚನಾ ಇಂದರ್ ನಾಯಕಿ. ಉಳಿದಂತೆ ರವಿಶಂಕರ್, ಕಾಕ್ರೋಜ್ ಸುಧಿ, ಗೋಪಾಲಕೃಷ್ಣ ದೇಶಪಾಂಡೆ, ಗೋವಿಂದೇಗೌಡ, ಪ್ರಶಾಂತ್ ಸಿದ್ದಿ ಮುಂತಾದವರು ತಾರಾಬಳಗದಲ್ಲಿದ್ದಾರೆ.