ಅಜ್ಜಂಪುರ: ಯೋಗ ಕೇವಲ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲ, ಮನಸ್ಸಿನ ಏಕಾಗ್ರತೆಗೂ ಅಗತ್ಯವಾಗಿದೆ ಎಂದು ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅಜ್ಜಂಪುರ ಸಮೀಪದ ಸಾಣೆಹಳ್ಳಿ ಶಿವಕುಮಾರ ರಂಗಮಂದಿರದಲ್ಲಿ ವಿಶ್ವಯೋಗ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಯೋಗದ ಮುಖ್ಯ ಉದ್ದೇಶ ತನ್ನೊಳಗಿನ ದೋಷಗಳನ್ನು ಮನಗಂಡು ತಿದ್ದಿಕೊಳ್ಳುವುದಾಗಿದೆ. ಇಂತಹ ಯೋಗ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗದೇ, ನಿತ್ಯ ಜೀವನದ ವಿಧಾನ ಆಗಬೇಕೆಂದು ತಿಳಿಸಿದರು.
ಶಿವಶರಣರು ಶಿವಯೋಗ ಪರಿಚಯಿಸಿದ್ದಾರೆ. ಯೋಗ ನುಡಿಯುವುದಲ್ಲ. ಅಭ್ಯಾಸವೂ ಅಲ್ಲ. ಅದು ಆಚರಣೆಯಾಗಿದೆ. ವ್ಯಕ್ತಿ ಮೊದಲು ಯೋಗಿಯಾಗಬೇಕು. ಜಗತ್ತು ಮತ್ತು ತಾನು ಪರಬ್ರಹ್ಮ ಎಂದು ಭಾವಿಸುವುದೇ ಯೋಗ. ಆಗ ವ್ಯಕ್ತಿ ಮತ್ತು ತನ್ಮೂಲಕ ಸಮಾಜ ಎರಡೂ ವಿಕಾಸವಾಗುತ್ತವೆ ಎಂದರು.
ಅಣ್ಣಿಗೇರಿಯ ಯಶಸ್ವಿನಿ ಯೋಗ ಸಂಸ್ಥೆ ಮುಖ್ಯಸ್ಥ ಹಾಗೂ ಯೋಗ ಗುರು ದೇವೇಂದ್ರಪ್ಪ, ವಿರೂಪಾಕ್ಷಪ್ಪ, ಮುಖ್ಯ ಶಿಕ್ಷಕ ಹೊನ್ನೇಶಪ್ಪ, ಶಿವಕುಮಾರ್ ಇತರರು ಭಾಗವಹಿಸಿದ್ದರು. ಶಾಲಾ, ಕಾಲೇಜು ವಿದ್ಯಾರ್ಥಿಗಳು ಸಾಮೂಹಿಕ ಯೋಗಾಭ್ಯಾಸ ನಡೆಸಿದರು.