Advertisement

ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಸರಣಿ ತಾಳಮದ್ದಳೆ ಉದ್ಘಾಟನೆ

03:39 PM Jul 12, 2017 | Team Udayavani |

ಮುಂಬಯಿ: ಯಾವುದೇ ಕಲಾ ತಂಡವನ್ನು ತವರೂರಿನಿಂದ ನಗರಕ್ಕೆ ಆಹ್ವಾನಿಸಿ ಪ್ರದರ್ಶನವನ್ನು ನೀಡುವುದು ಸುಲಭದ ಕೆಲಸವಲ್ಲ. ಇಂತಹ ಕೆಲಸವನ್ನು ನಗರದ ಯಕ್ಷಗಾನ ಕಲಾವಿದ, ಕಲಾ ಸಂಘಟಕ ಬಾಲಕೃಷ್ಣ ಶೆಟ್ಟಿ ಅಜೆಕಾರು ತಮ್ಮ ನೇತೃತ್ವದ ಅಜೆಕಾರು ಕಲಾಭಿಮಾನಿ ಬಳಗದ ಮುಖಾಂತರ ಯಶಸ್ವಿಯಾಗಿ ನಡೆಸುತ್ತಿರುವುದು ಅಭಿನಂದನೀಯವಾಗಿದೆ. ಕಳೆದ 15 ವರ್ಷಗಳಿಂದ ನಿರಂತರವಾಗಿ ತವರೂರಿನ ಕಲಾವಿದರನ್ನು ಮುಂಬಯಿಗೆ ಆಹ್ವಾನಿಸಿ   ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಕಷ್ಟ, ನಷ್ಟದ ಜತೆಗೂ ತವರೂರ ಕಲಾವಿದರನ್ನು ಮುಂಬಯಿ ಕಲಾರಸಿಕರಿಗೆ ಪರಿಚಯಿಸುತ್ತಾ ಬಂದಿದ್ದಾರೆ. ಬಾಲಕೃಷ್ಣ ಶೆಟ್ಟಿ ಅವರ ಈ ರೀತಿಯ ಕಲಾಸೇವೆ ನಿಜವಾಗಿಯೂ ಶ್ಲಾಘನೀಯವಾಗಿದೆ ಎಂದು ಯಕ್ಷಮಾನಸ ಮುಂಬಯಿ ಅಧ್ಯಕ್ಷ ಶೇಖರ ಆರ್‌. ಶೆಟ್ಟಿ ಅವರು ನುಡಿದರು.

Advertisement

ಜು. 8ರಂದು ಸಂಜೆ ಕಾಂಜೂರ್‌ಮಾರ್ಗ ಪೂರ್ವದ ಹನುಮಾನ್‌ ನಗರದ ಶ್ರೀ ಅಂಬಿಕಾ ಮಂದಿರದ ಸನ್ನಿಧಾನದಲ್ಲಿ ಶ್ರೀ ಅಂಬಿಕಾ ಮಂದಿರದ ಆಡಳಿತ ಸಮಿತಿಯ ಪ್ರಾಯೋಜಕತ್ವದಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ಆಶ್ರಯದಲ್ಲಿ ತವರೂರ ಪ್ರಬುದ್ಧ ಕಲಾವಿದರ ಕೂಡುವಿಕೆಯಲ್ಲಿ ಸರಣಿ ತಾಳಮದ್ದಳೆಯ ಮುಂಬಯಿ ಪ್ರವಾಸದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂಬಯಿಯಲ್ಲಿ ಕಲೆ, ಕಲಾವಿದರನ್ನು ಪ್ರೋತ್ಸಾಹಿಸುವ, ಪ್ರೀತಿಸುವ ಉತ್ತಮ ಪ್ರೇಕ್ಷಕರು, ಕಲಾರಸಿಕರಿದ್ದಾರೆ. ಇವರೆಲ್ಲರ ಪ್ರೋತ್ಸಾಹದ ನೆಲೆಯಲ್ಲಿ ಮುಂಬಯಿಯಲ್ಲಿ ಯಕ್ಷಗಾನ ತಾಳಮದ್ದಳೆ ಹಾಗೂ ಇತರ ಕಲಾ ಮಾಧ್ಯಮಗಳು ಉಳಿದಿವೆ-ಬೆಳೆದಿವೆ ಎನ್ನಲು ಸಂತೋಷವಾಗುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಬಂಟರ ಸಂಘ ಮುಂಬಯಿ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಆನಂದ ಶೆಟ್ಟಿ ಅವರು ಮಾತನಾಡಿ, ಅಜೆಕಾರು ಕಲಾಭಿಮಾನಿ ಬಳಗದ ಆಶ್ರಯದಲ್ಲಿ ಮುಂಬಯಿಯಲ್ಲಿ ನಿರಂತರ ಯಕ್ಷಗಾನ ಹಾಗೂ ತಾಳಮದ್ದಳೆ ಕಾರ್ಯಕ್ರಮಗಳು ನಡೆಯುತ್ತಾ ಬಂದಿವೆ. ಈ ವರ್ಷವೂ ಈಗಾಗಲೇ ಎರಡನೇ ತಾಳಮದ್ದಳೆ ತಂಡವು ನಗರಕ್ಕೆ ಬಂದಿದ್ದು, ಕಾಂಜೂರ್‌ಮಾರ್ಗದ ಶ್ರೀ ಅಂಬಿಕಾ ಮಂದಿರದ ಈ ಪವಿತ್ರ ಸನ್ನಿಧಾನದಲ್ಲಿ ಇದರ ಉದ್ಘಾಟನೆ ನಡೆದಿರುವುದು ಸಂತೋಷದ ಸಂಗತಿಯಾಗಿದೆ. ದೇವರ ಸನ್ನಿಧಾನದಲ್ಲಿ ನಡೆದ ಈ ಕೆಲಸ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ. ಬಳಗದ ಮುಂಬಯಿ ಪ್ರವಾಸ ಯಶಸ್ವಿಯಾಗಲಿ. ಕಲಾರಸಿಕರ ಪ್ರೀತಿ, ಗೌರವ ಬಳಗದ ಮೇಲೆ ಸದಾಯಿರಲಿ ಎಂದರು.

ಆಶೀರ್ವಚನ ನೀಡಿದ ಕಾಂಜೂರ್‌ಮಾರ್ಗ ಅಂಬಿಕಾ ಮಂದಿರದ ಪ್ರಧಾನ ಅರ್ಚಕ ಅನಂತ್‌ ಭಟ್‌ ಅವರು, ಯಕ್ಷಗಾನ ಮತ್ತು ತಾಳಮದ್ದಳೆ ಎಂದು ಅದೊಂದು ಅಪೂರ್ವ ಕಲೆಯಾಗಿದೆ. ಖಂಡಿತವಾಗಿಯೂ ಈ ಕಲೆಗೆ ಅಳಿವು ಎಂಬುದಿಲ್ಲ. ಕಲಾ ರಸಿಕರಿಗೆ, ಕಲಾ ಸಂಘಟಕರಿಗೆ ಕೊರತೆಯಿಲ್ಲ. ಅದಕ್ಕೆ ಅಜೆಕಾರು ಕಲಾಭಿಮಾನಿ ಬಳಗ ಕಳೆದ 15 ವರ್ಷಗಳಿಂದ ನಿರಂತರ
ನೀಡುತ್ತಾ ಬಂದಿರುವ ಈ ಸರಣಿ ತಾಳಮದ್ದಳೆ ಸಾಕ್ಷಿಯಾಗಿದೆ. ಮುಂದೆಯೂ ಈ ಕಲಾ ಬಳಗದಿಂದ ಕಲಾ ಸೇವೆ ನಿರಂತರ ವಾಗಿರಲಿ. ಮುಂಬಯಿ ಪ್ರವಾಸ ಯಶಸ್ವಿಯಾಗಲಿ ಎಂದರು.

ಅತಿಥಿಗಳಾಗಿ ಎಣ್ಣೆಹೊಳೆ ಸುಧಾಕರ ಶೆಟ್ಟಿ, ಹಿರಿಯ ಯಕ್ಷಗಾನ ಅರ್ಥದಾರಿ ಕೆ. ಕೆ. ಶೆಟ್ಟಿ, ಹಿರಿಯರಾದ ಎಸ್‌. ಎಂ. ಶೆಟ್ಟಿ, ಶ್ರೀ ಅಂಬಿಕ ಮಂದಿರದ ಅಧ್ಯಕ್ಷ ಸುಂದರ ಶೆಟ್ಟಿ, ಅಜೆಕಾರು ಕಲಾಭಿಮಾನಿ ಬಳಗದ ಅಜೆಕಾರು ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಅತಿಥಿಗಳನ್ನು ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅಜೆಕಾರು ಗೌರವಿಸಿದರು. ತಂಡದ ಎಲ್ಲಾ ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರನ್ನು ಅನಂತ್‌ ಭಟ್‌ ಮತ್ತು ಅತಿಥಿಗಳು ಶಾಲು ಹೊದೆಸಿ, ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಬಳಗದ ಅರ್ಥದಾರಿ ಶೇಣಿ ವೇಣುಗೋಪಾಲ್‌ ಭಟ್‌ ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರ್ವಹಿಸಿದರು. ಅಜೆಕಾರು ಬಾಲಕೃಷ್ಣ ಶೆಟ್ಟಿ ವಂದಿಸಿದರು. ಭಕ್ತ ರುಕಾ¾ಂಗಧ ತಾಳಮದ್ದಳೆಯು ಅಜೆಕಾರು ಕಲಾಭಿಮಾನಿ ಬಳಗದ ಕಲಾವಿದರಿಂದ ನಡೆಯಿತು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next