ಮುಂಬೈ: ಬಾಲಿವವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ಪುತ್ರ ಅಭಿಷೇಕ್ ಬಚ್ಚನ್ ಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾದ ನಂತರ ಇದೀಗ ಐಶ್ವರ್ಯ ರೈ ಮತ್ತು ಮಗಳು ಆರಾಧ್ಯ ಗೂ ಕೋವಿಡ್ 19 ಸೋಂಕು ದೃಢವಾಗಿದೆ.
ಮಹಾರಾಷ್ಟ್ರ ಸರಕಾರದ ಆರೋಗ್ಯ ಸಚಿವ ರಾಜೇಶ್ ಟೋಪೆ ಈ ಬಗ್ಗೆ ಟ್ವೀಟ್ ಮಾಡಿದ್ದು, ಐಶ್ವರ್ಯ ರೈ ಬಚ್ಚನ್ ಮತ್ತು ಮಗಳು ಆರಾಧ್ಯ ಅಭಿಷೇಕ್ ಬಚ್ಚನ್ ಗೆ ಕೋವಿಡ್ 19 ಸೋಂಕು ದೃಢವಾಗಿದೆ. ಜಯ ಬಚ್ಚನ್ ಅವರ ವರದಿ ನೆಗೆಟಿವ್ ಆಗಿದೆ. ಬಚ್ಚನ್ ಕುಟುಂಬವು ಶೀಘ್ರ ಗುಣಮುಖವಾಗುವಂತೆ ನಾವೆಲ್ಲ ಪ್ರಾರ್ಥಿಸುವ ಎಂದು ಹೇಳಿದ್ದಾರೆ.
ಬೃಹನ್ ಮುಂಬೈ ನಗರ ಪಾಲಿಕೆಯ ಉಪ ಆಯುಕ್ತ ಸುರೇಶ್ ಕಕಾನಿ ಈ ಬಗ್ಗೆ ಮಾಹಿತಿ ನಿಡಿದ್ದು, ಬಚ್ಚನ್ ಮನೆಯ ಕೆಲಸದವರನ್ನೂ ಸೇರಿಸಿ 16 ಜನರನ್ನು ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಕೆಲವು ವರದಿ ಇನ್ನು ಕೈ ಸೇರಬೇಕಿದೆ. ಐಶ್ವರ್ಯ ರೈ ಮತ್ತು ಆರಾಧ್ಯ ಅವರಿಗೆ ಯಾವುದೇ ಕೋವಿಡ್ ಸೋಂಕು ಲಕ್ಷಣಗಳಿಲ್ಲ. ಒಂದು ವೇಳೆ ಅವರು ಬಯಸಿದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು, ಇಲ್ಲದಿದ್ದರೆ ಮನೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುವುದು ಎಂದಿದ್ದಾರೆ.
ಅಮಿತಾಬ್ ಬಚ್ಚನ್ ಅವರ ನಿವಾಸವನ್ನು ಸ್ಯಾನಿಟೈಸ್ ಮಾಡಲಾಗಿದೆ. ಬಚ್ಚನ್ ನಿವಾಸಕ್ಕೆ ಯಾರಿಗೂ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗಿದೆ. ಈ ಪ್ರದೇಶವನ್ನು ಕಂಟೈನ್ ಮೆಂಟ್ ಏರಿಯಾ ಎಂದು ಘೋಷಿಸಲಾಗಿದೆ.
ಅಮಿತಾಬ್ ಬಚ್ಚನ್ ಅವರಿಗೆ ಶನಿವಾರ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ. ಸೋಂಕು ಲಕ್ಷಣಗಳು ಕಂಡುಬಂದ ಹಿನ್ನಲೆಯಲ್ಲಿ ಅವರು ಸ್ವತಃ ಕೋವಿಡ್ ಪರೀಕ್ಷಗೆ ಒಳಗಾಗಿದ್ದರು. ನಂತರ ರಾತ್ರಿ ಅಭಿಷೇಕ್ ಬಚ್ಚನ್ ಅವರಿಗೂ ಕೋವಿಡ್ 19 ಸೋಂಕು ದೃಢವಾಗಿತ್ತು. ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.