ನಾನು ಸಾಕಷ್ಟು ಕಥೆ ಕೇಳಿದ್ದೇನೆ. ಆದರೆ, ಎಲ್ಲವನ್ನೂ ಒಪ್ಪಿಲ್ಲ. ಆದಷ್ಟು ಚ್ಯೂಸಿಯಾದೆ. ಬಂದ ಕಥೆಗಳಲ್ಲಿ ಅನೇಕ ಕಥೆಗಳು ರೆಗ್ಯುಲರ್ ಪ್ಯಾಟ್ರನ್‌ನಲ್ಲಿದ್ದವು. ಹಾಗಾಗಿ ನನಗೆ ಅವುಗಳು ಇಷ್ಟವಾಗಲಿಲ್ಲ. ನಾನು ಮೊದಲು ಇಷ್ಟ ಪಡೋದು ಒಳ್ಳೆಯ ಕಥೆ, ಆಮೇಲೆ ಪಾತ್ರ…
ಐಶಾನಿ ಶೆಟ್ಟಿ…
ಈ ಹೆಸರು ಕೇಳಿದಾಕ್ಷಣ, ನೆನಪಾಗೋದೇ “ರಾಕೆಟ್’ ಹಾಗು “ವಾಸ್ತು ಪ್ರಕಾರ’ ಚಿತ್ರಗಳು. ಅವರ ನಿರೀಕ್ಷೆಯ ಮಟ್ಟಕ್ಕೆ “ರಾಕೆಟ್’ ಹಾರಲಿಲ್ಲ. ಅವರ ಪ್ರಕಾರ ಸಿನಿಮಾ “ವಾಸ್ತು’ ಕೂಡ ಸರಿ ಹೋಗಲಿಲ್ಲ. ಹಾಗಂತ ಐಶಾನಿ ಶೆಟ್ಟಿ ಸುಮ್ಮನೆ ಕೂರಲಿಲ್ಲ. ಅತ್ತ ಓದಿನ ಕಡೆಯೂ ಗಮನಹರಿಸಿ ಪದವಿ ಪಡೆದರು. ತಮ್ಮ ಪಾಡಿಗೊಂದು ಕಿರುಚಿತ್ರ ನಿರ್ದೇಶಿಸಿ ಸೈ ಎನಿಸಿಕೊಂಡರು. ಅದರ ಜೊತೆ ಜೊತೆಯಲ್ಲೇ ಬಂದ ಸಿನಿಮಾಗಳನ್ನು ಒಪ್ಪಿಕೊಂಡು ಆ ಮೂಲಕ ಮತ್ತಷ್ಟು ಗಮನಸೆಳೆದಿದ್ದೂ ಉಂಟು. ಐಶಾನಿ ಶೆಟ್ಟಿ ಕೈಯಲ್ಲೀಗ ಒಂದಷ್ಟು ಕಥೆಗಳಿವೆ. ಅವರ ಸಿನಿಮಾ ಪಯಣದ ವೇಗವೂ ಹೆಚ್ಚಿದೆ. ಆ ಕುರಿತು ಒಂದು ಮಾತುಕತೆ.
ಐಶಾನಿ ಶೆಟ್ಟಿ ಈಗ ಹೊಸಬರ ಚಿತ್ರಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಕಥೆ ಮತ್ತು ಪಾತ್ರ ಎಂಬುದು ಅವರಿಂದ ಬರುವ ಉತ್ತರ. ಅಷ್ಟಕ್ಕೂ ಐಶಾನಿ ಶೆಟ್ಟಿಯ ಆಯ್ಕೆ ಹೇಗಿರುತ್ತೆ? ಈ ಪ್ರಶ್ನೆ ಅವರ ಮುಂದಿಟ್ಟರೆ, “ನಾನು ಸಾಕಷ್ಟು ಕಥೆ ಕೇಳಿದ್ದೇನೆ. ಆದರೆ, ಎಲ್ಲವನ್ನೂ ಒಪ್ಪಿಲ್ಲ. ಆದಷ್ಟು ಚ್ಯೂಸಿಯಾದೆ. ಬಂದ ಕಥೆಗಳಲ್ಲಿ ಅನೇಕ ಕಥೆಗಳು ರೆಗ್ಯುಲರ್ ಪ್ಯಾಟ್ರನ್‌ನಲ್ಲಿದ್ದವು. ಹಾಗಾಗಿ ನನಗೆ ಅವುಗಳು ಇಷ್ಟವಾಗಲಿಲ್ಲ. ನಾನು ಮೊದಲು ಇಷ್ಟ ಪಡೋದು ಒಳ್ಳೆಯ ಕಥೆ, ಆಮೇಲೆ ಪಾತ್ರ, ಆ ನಂತರ ತಂಡ. ಇದೆಲ್ಲವೂ ಇಷ್ಟವಾದರೆ ಖಂಡಿತ ನಾನು ಕೆಲಸ ಮಾಡ್ತೀನಿ. ಹಾಗೆ ನಾನು ಬಂದ ಚಿತ್ರಗಳನ್ನು ಒಪ್ಪಿಕೊಂಡು ಸಿನಿಮಾ ಮಾಡಿದ್ದರೆ, ಇಷ್ಟೊತ್ತಿಗೆ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿತ್ತು. ನನಗೆ ಸಿನಿಮಾ ಸಂಖ್ಯೆಗಿಂತ ಒಳ್ಳೆಯ ಚಿತ್ರ ಮಾಡಿದ್ದೇನೆ ಎಂಬ ತೃಪ್ತಿ ಬೇಕು. ಮಾಡಿರುವ ಚಿತ್ರಗಳಲ್ಲಿ ಖಂಡಿತ ಖುಷಿಯಂತೂ ಇದೆ. “ನಡುವೆ ಅಂತರವಿರಲಿ’ ಸಿನಿಮಾ ಬಗ್ಗೆ ಎಲ್ಲೆಡೆಯಿಂದಲೂ ಮೆಚ್ಚುಗೆ ಸಿಕ್ಕಿತ್ತು. ಕಥೆ, ಚಿತ್ರಕಥೆ, ಪಾತ್ರಗಳು, ಆ ಚಿತ್ರದ ಮೇಕಿಂಗ್ ಎಲ್ಲವೂ ಮಾತಾಡುವಂತೆ ಮಾಡಿತು. ಒಬ್ಬ ನಟಿಗೆ ಅಷ್ಟು ಸಾಕಲ್ಲವೇ?’ ಎನ್ನುತ್ತಾರೆ ಐಶಾನಿ,
ಇನ್ನು ಇಂದು ಬಿಡುಗಡೆಯಾಗುತ್ತಿರುವ “ಗಣಿ ಬಿಕಾಂ ಪಾಸ್’ ಚಿತ್ರದಲ್ಲೂ ಐಶಾನಿಗೆ ವಿಶೇಷ ಪಾತ್ರವಿದೆಯಂತೆ. ಅಲ್ಲಿ ಸ್ಕೂಲ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡುವ ಐಶಾನಿ, “ಪಾತ್ರಕ್ಕಾಗಿ ಸ್ಕೂಲ್ ಯೂನಿಫಾರಂ ಧರಿಸಿದ್ದೇನೆ. ಅದೊಂದು ಕ್ಲಾಸಿಕ್ ಪಾತ್ರ. ಕಾಮಿಡಿ ಡ್ರಾಮಾ ಆಗಿರುವ ಚಿತ್ರದಲ್ಲಿ ವಿದ್ಯಾರ್ಥಿಯೊಬ್ಬ ಬಿಕಾಂ ಕಂಪ್ಲೀಟ್ ಮಾಡಿದ ನಂತರ, ಉದ್ಯೋಗ ಸಿಗಲ್ಲ. ಆಗ ಮನೆಯಲ್ಲಿ ಹೇಗೆಲ್ಲಾ ಸಮಸ್ಯೆ ಎದುರಾಗುತ್ತೆ, ಎಂಬುದನ್ನೇ ಹಾಸ್ಯಮಯವಾಗಿ ಸಂದೇಶದ ಜೊತೆಗೆ ಸಾಗುತ್ತದೆ. ಚಿತ್ರದಲ್ಲಿ ಎರಡು ಟೈಮ್‌ಲೈನ್ ಪಾತ್ರವಿದೆ. ಒಂದು ಸ್ಕೂಲ್ ಹುಡುಗಿ ಪಾತ್ರ. ಇನ್ನೊಂದು ಹಲವು ವರ್ಷಗಳ ಬಳಿಕ ಬರುವ ವಿಶೇಷ ಪಾತ್ರ. ಸ್ಕೂಲ್ ಡೇಸ್ ಹುಡುಗಿಯ ಪಾತ್ರದಲ್ಲಿ ಸುಮಾರು 15 ವರ್ಷದ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಆ ಏಜ್‌ನ ಹುಡುಗಿಯರಲ್ಲಿ ಆಗುವಂತಹ ಸಣ್ಣ ಸಣ್ಣ ಕ್ರಶ್, ಚಡಪಡಿಕೆ, ಉತ್ಸಾಹ ಹೀಗೆ ಎಲ್ಲವೂ ಆ ಪಾತ್ರದಲ್ಲಿವೆ. ನನ್ನ ಸಿನಿಜರ್ನಿಯಲ್ಲಿ ನ ವಿಶೇಷ ಪಾತ್ರವದು’ ಎನ್ನುತ್ತಾರೆ ಐಶಾನಿ.
ಎಲ್ಲಾ ಸರಿ, ಐಶಾನಿ ಮುಂದಿನ ಚಿತ್ರ ಯಾವುದು, ಕಥೆ, ಪಾತ್ರದ ಬಗ್ಗೆ ಏನಾದರೂ ಮಾಹಿತಿ ಕೊಡಬಹುದಾ? ಇದಕ್ಕೆ ಉತ್ತರಿಸುವ ಅವರು, “ಗುಳುr’ ಚಿತ್ರದ ಹೀರೋ ನವೀನ್ ಶಂಕರ್ ಜೊತೆ ಹೊಸ ಸಿನಿಮಾ ಮಾಡುತ್ತಿದ್ದೇನೆ. ಆ ಚಿತ್ರಕ್ಕೆ “ಧರಣಿ ಮಂಡಲ ಮಧ್ಯದೊಳಗೆ’ ಎಂದು ಹೆಸರಿಡಲಾಗಿದೆ. ನಾನು ಇದುವರೆಗೆ ಮಾಡಿದ್ದು ಬೆರಳೆಣಿಕೆ ಚಿತ್ರಗಳಲ್ಲಿ ಮಾತ್ರ. ಮಾಡಿದ ಎಲ್ಲಾ ಚಿತ್ರಗಳಲ್ಲೂ ಕಥೆ ಮತ್ತು ಪಾತ್ರಗಳು ವಿಶೇಷವಾಗಿದ್ದವು. ನವೀನ್ ಶಂಕರ್ ಜೊತೆ ನಟಿಸುತ್ತಿರುವ ಚಿತ್ರದಲ್ಲೂ ನನ್ನ ಹಿಂದಿನ ಎಲ್ಲಾ ಚಿತ್ರಗಳಿಗಿಂತಲೂ ಭಿನ್ನವಾಗಿರುವಂತಹ ಪಾತ್ರವಿದೆ. ಶ್ರೀಧರ್ ಷಣ್ಮುಖ ನಿರ್ದೇಶಕರು. ಆ ಚಿತ್ರದಲ್ಲಿ ಸ್ಕ್ರೀನ್‌ಪ್ಲೇ ಹೈಲೈಟ್. ಕಥೆ ಕೂಡ ಹೊಸ ಶೈಲಿಯಲ್ಲಿದೆ. ಅದೊಂದು ಹೈಪರ್ ಲಿಂಕ್ ಸ್ಟೋರಿ ಎನ್ನಬಹುದು. ಒಂದೇ ಚಿತ್ರದಲ್ಲಿ ತರಹೇವಾರಿ ಕಥೆ ಹುಟ್ಟುಕೊಳ್ಳುತ್ತವೆ. ನಾನು ಹಿಂದೆ ಮಾಡದೇ ಇರುವಂತಹ ಪಾತ್ರ ಮಾಡುತ್ತಿದ್ದೇನೆ. ಈವರೆಗೆ ಕ್ಯೂಟ್ ಆಗಿರುವ ಪಾತ್ರ ಮಾಡುತ್ತ ಬಂದಿದ್ದೇನೆ. ಆದರೆ, ಈ ಚಿತ್ರದಲ್ಲಿ ಬೇರೆ ರೀತಿಯ ಪಾತ್ರವಿದೆ. ಅಲ್ಲಿ ಥ್ರಿಲ್ಲರ್, ಕ್ರೈಮ್, ಲವ್‌ಸ್ಟೋರಿ, ಎಮೋಷನಲ್ ಎಲ್ಲವೂ ಇದೆ. ಆಟಿಟ್ಯೂಡ್ ಇರುವಂತಹ ಹುಡುಗಿ ಪಾತ್ರವದು. ಹಾಗಾಗಿ ನನ್ನ ಮಟ್ಟಿಗೆ ಅದು ಚಾಲೆಂಜ್ ಸಿನಿಮಾವದು’ ಎನ್ನುತ್ತಾರೆ ಐಶಾನಿ.
ಇದರೊಂದಿಗೆ “ಹೊಂದಿಸಿ ಬರೆಯಿರಿ’ ಎಂಬ ಹೊಸ ಚಿತ್ರದಲ್ಲೂ ಐಶಾನಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತವೂ ನಡೆದಿದೆ. ಆ ಚಿತ್ರವನ್ನು ಜಗನ್ನಾಥ್ ನಿರ್ದೇಶಿಸುತ್ತಿದ್ದಾರೆ. ಇದೊಂದು ಗೆಳೆತನದ ಮೇಲೆ ಸಾಗುವ ಮ ಲ್ಟಿಸ್ಟಾರರ್ ಚಿತ್ರವಿದು. ಪ್ರವೀಣ್ ತೇಜ್, ನವೀನ್ ಶಂಕರ್, ಸಂಯುಕ್ತಾ ಹೊರನಾಡು, ಭಾವನಾರಾವ್ ಇದ್ದಾರೆ. ಗೆಳೆಯರ ಪಯಣದ ಮುದ್ದಾದ ಕಥೆ ಇದೆ.
ನಿರ್ದೇಶನಕ್ಕೂ ಒಳ್ಳೇ ಕಾಲ ಬೇಕು
ಐಶಾನಿ ಅವರು ಈಗಾಗಲೇ “ಕಾಜಿ’ ಎಂಬ ಕಿರುಚಿತ್ರ ನಿರ್ದೇಶಿಸಿ, ಅಲ್ಲೂ ಗುರುತಿಸಿಕೊಂಡಿದ್ದಾಯ್ತು. ಮುಂದೆ ಸಿನಿಮಾ ನಿರ್ದೇಶನದ ಐಡಿಯಾ ಇದೆಯಾ? ಈ ಪ್ರಶ್ನೆಯನ್ನು ಅವರ ಮುಂದಿಟ್ಟರೆ, “ಸದ್ಯಕ್ಕೆ ನನಗೆ ನಟನೆ ಮೇಲೆ ಹೆಚ್ಚು ಗಮನ. ಸಮಯ ಸಿಕ್ಕಾಗೆಲ್ಲಾ ಕಥೆ ಬರೆಯುತ್ತಿದ್ದೆ. ಅದನ್ನು ನಾನೇ ನಿರ್ದೇಶಿಸಬೇಕು ಅಂದುಕೊಂಡಿದ್ದೆ. ಆ ಅವಕಾಶ ಸಿಕ್ಕಿತು ಬಳಸಿಕೊಂಡೆ. ಹಾಗಂತ, ನಾನು ಸಿನಿಮಾ ನಿರ್ದೇಶಿಸುವಷ್ಟು ಪ್ರಬುದ್ಧಳಲ್ಲ. ನಾನಿನ್ನೂ ನಿರ್ದೇಶನದಲ್ಲಿ ತುಂಬಾ ಕಲಿಯಬೇಕಿದೆ. ನಿರ್ದೇಶಕರಿಗೆ ಜವಾಬ್ದಾರಿ ಇರಬೇಕು. ಕಿರುಚಿತ್ರದಲ್ಲಿ ಒಂದಷ್ಟು ಅನುಭವ ಪಡೆದಿದ್ದೇನೆ. ತಪ್ಪು ಸರಿಗಳನ್ನು ಅರಿತಿದ್ದೇನೆ. ಈಗಾಗಲೇ ಒಂದು ಕಥೆ ರೆಡಿ ಮಾಡಿಟ್ಟುಕೊಂಡಿದ್ದೇನೆ. ಆ ಬಗ್ಗೆ ಈಗಲೇ ಯೋಚನೆ ಮಾಡಿಲ್ಲ. ನಿರ್ದೇಶನ ಮಾಡೋಕೂ ಒಳ್ಳೆಯ ಸಮಯ ಬೇಕು. ಎಲ್ಲದ್ದಕ್ಕೂ ಕಾಲ ಉತ್ತರಿಸುತ್ತೆ ಎಂದಷ್ಟೇ’ ಹೇಳುತ್ತಾರೆ ಅವರು.
ವಿಜಯ್ ಭರಮಸಾಗರ