Advertisement

ಎಲ್ಲರಿಗಲ್ಲ ಏರ್‌ಪೋರ್ಟ್‌ ಮೆಟ್ರೋ

04:20 PM Dec 16, 2017 | Team Udayavani |

ಬೆಂಗಳೂರು: ಬೆಂಗಳೂರಿಗರು ಬಹುದಿನಗಳಿಂದ ಎದುರುನೋಡುತ್ತಿದ್ದ ನಾಗವಾರ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್‌) ನಡುವಿನ ಮೆಟ್ರೋ ಸಂಪರ್ಕ ಯೋಜನೆಗೆ ಸಚಿವ ಸಂಪುಟ ಅಸ್ತು ಎಂದಾಗಿದೆ. ಆದರೆ, ನಾಗವಾರದಿಂದ ಆಚೆಗಿನ ಅಥವಾ ನಾಗವಾರ ಸಮೀಪದ ಪ್ರಯಾಣಿಕರಿಗಷ್ಟೇ ಈ ಸೇವೆಯ ಪ್ರಯೋಜನ ಲಭ್ಯವಾಗಲಿದೆ.

Advertisement

ಒಂದೊಮ್ಮೆ ನಾಗವಾರ-ವಿಮಾನ ನಿಲ್ದಾಣ ನಡುವೆ ಮೆಟ್ರೋ ಕಾಮಗಾರಿ ಪೂರ್ಣಗೊಂಡು ಸೇವೆ ಆರಂಭವಾದರೂ, ನಗರದ ಕೇಂದ್ರ ಭಾಗ ಹಾಗೂ ಇತರ ಹೊರವಲಯಗಳಿಂದ ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರು ನಾಗವಾರದವರೆಗೆ ಮತ್ತದೇ ಟ್ರಾಫಿಕ್‌ ಕಿರಿಕಿರಿಯಲ್ಲಿ ಪ್ರಯಾಣಿಸಬೇಕು.

ಅಂದುಕೊಂಡ ವೇಗದಲ್ಲಿ ಕಾಮಗಾರಿ ನಡೆದಿದ್ದೇ ಆದರೆ, ಸರಿಯಾಗಿ ಮೂರೂವರೆ ವರ್ಷದ ನಂತರ ಕೆಐಎಎಲ್‌ಯಿಂದ ನಾಗವಾರದವರೆಗೆ ಮೆಟ್ರೋ ಸೇವೆ ಲಭ್ಯವಾಗುತ್ತದೆ. ಆದರೆ, ಅಲ್ಲಿಂದ ಅದೇ ಮೆಟ್ರೋದಲ್ಲಿ ಮುಂದೆ ಸಾಗಲು ಮತ್ತೆ ಕನಿಷ್ಠ ಮೂರು ವರ್ಷ ಕಾಯುವುದು ಅನಿವಾರ್ಯ. ಆದರೆ ಈ ಮೂರು ವರ್ಷದೊಳಗೆ ಕಾಮಗಾರಿ ಮುಗಿಯುವುದು ಶೇ90ರಷ್ಟು ಅನುಮಾನ!

ಉದ್ದದ ಸುರಂಗ: 21.25 ಕಿ.ಮೀ. ಉದ್ದದ ಗೊಟ್ಟಿಗೆರೆ-ನಾಗವಾರ ಮಾರ್ಗದಲ್ಲಿ 13.9 ಕಿ.ಮೀ ಸುರಂಗ ನಿರ್ಮಿಸಬೇಕು. ಇದು ಬಿಎಂಆರ್‌ಸಿಎಲ್‌ ಪಾಲಿಗೆ ಅತಿ ದೊಡ್ಡ ಸವಾಲು. 2021ಕ್ಕೂ ಮೊದಲೇ ಈ ಮಾರ್ಗದ ಕೆಲಸ ಮುಗಿಸಬೇಕೆಂಬ ಗಡುವು ನಿಗಮದ ಮುಂದಿದೆ. ಆದರೆ ಪ್ರಸಕ್ತ ಯೋಜನೆಗೆ 2014ರಲ್ಲೇ ಅನುಮೋದನೆ ದೊರೆತಿದ್ದರೂ ಇದುವರೆಗೆ ಕಾಮಗಾರಿ ಕೂಡ ಆರಂಭವಾಗಿಲ್ಲ! ಹೀಗಿರುವಾಗ, ಮುಂದಿನ ಮೂರು ವರ್ಷಗಳಲ್ಲಿ ಇಡೀ ಕಾಮಗಾರಿ ಮುಗಿಯುವುವು ಅಸಾಧ್ಯ ಎಂದು ನಿಗಮದ ತಜ್ಞರೇ ಹೇಳುತ್ತಿದ್ದಾರೆ.

ತಂತ್ರಜ್ಞಾನ ಬಳಸಿ; ಗಡುವಿನೊಳಗೆ ಮುಗಿಸಿ: “ವಿಮಾನ ನಿಲ್ದಾಣದಿಂದ ನಾಗವಾರದವರೆಗಿನ ಎತ್ತರಿಸಿದ ಮಾರ್ಗದ ಕಾಮಗಾರಿ ಬೇಗ ಮುಗಿಯಬಹುದು. ಆದರೆ ನಾಗವಾರದಿಂದ ಈಚೆಗೆ ಸುರಂಗ ಕೊರೆಯಬೇಕಿರುವ ಕಾರಣ ಕಾಮಗಾರಿ ವಿಳಂಬವಾಗಲಿದೆ. ಆದರೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿದರೆ, ಆ ಮಾರ್ಗವನ್ನು ನಿಗದಿತ ಅವಧಿಯೊಳಗೆ ಮುಗಿಸಬಹುದು. ಈಗಿನಿಂದಲೇ ಕಾಮಗಾರಿ ಕೈಗೆತ್ತಿಕೊಂಡರೂ ಅದು ಪೂರ್ಣಗೊಳ್ಳಲು ಕನಿಷ್ಠ ಆರು ವರ್ಷವಾದರೂ ಬೇಕು,’ ಎಂದು ಸಾರಿಗೆ ತಜ್ಞ ಪ್ರೊ.ಎಂ.ಎನ್‌. ಶ್ರೀಹರಿ ಅಭಿಪ್ರಾಯಪಡುತ್ತಾರೆ.

Advertisement

“ಬೆಂಗಳೂರಿನ ಮಣ್ಣು ಕಲ್ಲುಮಿಶ್ರಿತವಾಗಿದ್ದು, ಮೊದಲ ಹಂತದ ಎರಡೂ ಸುರಂಗ ಕೊರೆಯುವಾಗಲೇ ಇದರ ಕಹಿ ಅನುಭವವಾಗಿದೆ. ಸುರಂಗದಲ್ಲಿ ತಿಂಗಳುಗಟ್ಟಲೆ ಟಿಬಿಎಂ (ಟನಲ್‌ ಬೋರಿಂಗ್‌ ಮಷಿನ್‌) ಕೆಟ್ಟುನಿಂತಿದ್ದೂ ಇದೆ. ಈಗ 13.9 ಕಿ.ಮೀ ಉದ್ದದ ಜೋಡಿ ಸುರಂಗ ಮಾರ್ಗ ಕೊರೆಯಬೇಕಿದೆ. ಇದಕ್ಕೆ ಕನಿಷ್ಠ 5ರಿಂದ 6 ವರ್ಷ ಬೇಕೇಬೇಕು,’ ಎಂದು ಬಿಎಂಆರ್‌ಸಿಎಲ್‌ನ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2 ಕಿ.ಮೀ.ಗೊಂದು ಯಂತ್ರ ಬಳಕೆ: ಈ ಮಧ್ಯೆ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು 2 ಕಿ.ಮೀ.ಗೊಂದು ಟಿಬಿಎಂ ಬಳಕೆಗೆ ಬಿಎಂಆರ್‌ಸಿ ನಿರ್ಧರಿಸಿದೆ. ಈ ನಿಟ್ಟಿನಲ್ಲಿ 12 ಟಿಬಿಎಂಗಳ ಅಗತ್ಯವಿದೆ. ಮೊದಲ ಹಂತದಂತೆ, ಎರಡನೇ ಹಂತದಲ್ಲೂ ಸುರಂಗದ ಮಣ್ಣು ಗಟ್ಟಿಕಲ್ಲು, ಮಣ್ಣು ಮತ್ತು ಕಲ್ಲಿನಿಂದ ಮಿಶ್ರಿತವಾಗಿದೆ. ಹಾಗಾಗಿ, ಹೆಚ್ಚು ಟಿಬಿಎಂ ಬಳಸುವುದನ್ನು ಹೊರತುಪಡಿಸಿ, ತಜ್ಞರ ಮುಂದೆ ಸದ್ಯಕ್ಕೆ ಅನ್ಯಮಾರ್ಗಗಳಿಲ್ಲ. ಆದ್ದರಿಂದ ಮಾರ್ಗದುದ್ದಕ್ಕೂ ಬರುವ ಎಲ್ಲ 12 ನಿಲ್ದಾಣಗಳಲ್ಲಿ ತಲಾ ಒಂದು ಟಿಬಿಎಂಗಳನ್ನು ಬಳಸಲು ಉದ್ದೇಶಿಸಲಾಗಿದೆ. 

ಗಡುವಿನಲ್ಲಿ ಪೂರ್ಣ; ಎರಡೂ ಅನುಮಾನ?: ಗೊಟ್ಟಿಗೆರೆ-ನಾಗವಾರ ಮಾತ್ರವಲ್ಲ; ನಾಗವಾರ-ಕೆಐಎಎಲ್‌ ನಡುವಿನ ಕಾಮಗಾರಿ ಕೂಡ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುವ ಸಾಧ್ಯತೆಗಳಿಲ್ಲ. ಉದ್ದೇಶಿತ ಯೋಜನೆಗೆ ಕೇಂದ್ರದ ಅನುಮೋದನೆ ಸಿಕ್ಕ ನಂತರವೇ ಕಾಮಗಾರಿ ಆರಂಭವಾಗಲಿದೆ. ವಿಮಾನ ನಿಲ್ದಾಣ ಮಾರ್ಗದಲ್ಲಿ ಜಕ್ಕೂರು-ಹೆಗ್ಗಡೆ ನಗರ ಮಧ್ಯೆ 5 ಕಿ.ಮೀ. ವ್ಯಾಪ್ತಿಯಲ್ಲಿ ಕಾವೇರಿ, ಜಲಮಂಡಳಿ ಪೈಪ್‌ಲೈನ್‌ಗಳು ಹಾಗೂ ಗೇಲ್‌ನ ಅನಿಲ ಕೊಳವೆ ಮಾರ್ಗಗಳು ಹಾದುಹೋಗಿವೆ. ಮೊದಲು ಇವುಗಳ ಸ್ಥಳಾಂತರ ಅನಿವಾರ್ಯ ಎಂದು ತಜ್ಞರು ತಿಳಿಸಿದ್ದಾರೆ.

ಹಾಗೇ ಜಕ್ಕೂರಿನ ಟೆಲಿಕಾಂ ಲೇಔಟ್‌ ಬಳಿ ಚತುಷ್ಪಥ ರೈಲ್ವೆ ಅಂಡರ್‌ಪಾಸ್‌ ನಿರ್ಮಾಣವಾಗಲಿದೆ. ಜಕ್ಕೂರು ಏರೋಡ್ರಾಂ ಎದುರು ಮೆಟ್ರೋ ಎತ್ತರಿಸಿದ ಮಾರ್ಗ ನಿರ್ಮಿಸಿದರೆ, ರನ್‌ವೇ ಉದ್ದ ತಗ್ಗಲಿದ್ದು, ವಿಮಾನಗಳ ಟೇಕ್‌ ಆಫ್ ಮತ್ತು ಭೂಸ್ಪರ್ಶ ಕಷ್ಟವಾಗಲಿದೆ. ಈ ಎಲ್ಲ ಅಡತಡೆಗಳನ್ನು ಮೀರಿ, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವುದು ಅನುಮಾನ ಎಂದು ಪ್ರಜಾ ರಾಗ್‌ ಸದಸ್ಯ ಸಂಜೀವ ದ್ಯಾಮಣ್ಣವರ ಅಭಿಪ್ರಾಯಪಡುತ್ತಾರೆ. 

ವಿಮಾನ ಪ್ರಯಾಣಿಕರ ಮೇಲೆ ಹೆಚ್ಚುವರಿ 50 ರೂ. ಅಭಿವೃದ್ಧಿ ಶುಲ್ಕ: ಮೆಟ್ರೋ ಯೋಜನೆಗಾಗಿ ಬೆಂಗಳೂರಿನಿಂದ ಪ್ರಯಾಣಿಸುವ ಪ್ರತಿಯೊಬ್ಬ ವಿಮಾನ ಪ್ರಯಾಣಿಕರಿಂದ ಹೆಚ್ಚುವರಿಯಾಗಿ 50 ರೂ. ಬಳಕೆದಾರರ ಅಭಿವೃದ್ಧಿ ಶುಲ್ಕ (ಯುಡಿಎಫ್) ಪಡೆಯಲು ಉದ್ದೇಶಿಸಲಾಗಿದೆ.

ನಾಗವಾರ-ಕೆಐಎಎಲ್‌ ನಡುವಿನ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಆಗಲಿರುವ ವೆಚ್ಚದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಪಾಲು ಸಾವಿರ ಕೋಟಿ ರೂ. ಇದೆ. ಈ ಮೊತ್ತವನ್ನು ಸಂಗ್ರಹಿಸಲು ಪ್ರತಿಯೊಬ್ಬ ವಿಮಾನ ಪ್ರಯಾಣಿಕರಿಂದ ಹಾಲಿ ಟಿಕೆಟ್‌ ದರಕ್ಕಿಂತ ಹೆಚ್ಚುವರಿಯಾಗಿ 50 ರೂ. ಪಡೆಯಲು ಪ್ರಾಧಿಕಾರ ನಿರ್ಧರಿಸಿದೆ. ಪ್ರಸ್ತುತ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ 1,537 ತೂ. ಮತ್ತು ದೇಶಿ ಪ್ರಯಾಣಿಕರಿಗೆ 384 ರೂ. ಯುಡಿಎಫ್ ವಿಧಿಸಲಾಗುತ್ತಿದೆ.

ಶುಲ್ಕ ವಸೂಲಿಗೆ ಆರಂಭದಲ್ಲೇ ಅಪಸ್ವರ ಕೇಳಿಬರುತ್ತಿದೆ. ಮುಂಬೈನಲ್ಲೂ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸುತ್ತಿದ್ದು, ಅಲ್ಲಿ ಕೇವಲ 20 ರೂ. ಸಂಗ್ರಹಿಸಲಾಗುತ್ತಿದೆ. ಆದರೆ ಕೆಐಎಎಲ್‌ನಲ್ಲಿ ಮೆಟ್ರೋ ನಿಲ್ದಾಣ ನಿರ್ಮಾಣಕ್ಕಾಗಿ 50 ರೂ. ಸಂಗ್ರಹಿಸಲು ಮುಂದಾಗಿರುವುದು ಸರಿ ಅಲ್ಲ ಎಂದು ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಿತ್ಯ 50 ಸಾವಿರ ಪ್ರಯಾಣಿಕರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದಕ್ಷಿಣ ಭಾರತದ ಅತಿ ಹೆಚ್ಚು ದಟ್ಟಣೆ ಇರುವ ನಿಲ್ದಾಣವಾಗಿದ್ದು, ಇಲ್ಲಿಂದ ನಿತ್ಯ 50ರಿಂದ 60 ಸಾವಿರ ಪ್ರಯಾಣಿಕರು ಸಂಚರಿಸುತ್ತಿದ್ದು, 270 ವಿಮಾನಗಳು ಹಾರಾಟ ನಡೆಸುತ್ತವೆ.

* ವಿಜಯಕುಮಾರ್‌ ಚಂದರಗಿ 

Advertisement

Udayavani is now on Telegram. Click here to join our channel and stay updated with the latest news.

Next