ಬೆಂಗಳೂರು: ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮುಖ್ಯ ಸಂಪರ್ಕ ರಸ್ತೆಯಲ್ಲಿ ಇದೇ ಜೂ.10ರಿಂದ ಮುಂದಿನ ಎರಡು ವರ್ಷಗಳ ಕಾಲ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ.
ಪ್ರಸ್ತುತ ಮುಖ್ಯ ಸಂಪರ್ಕ ರಸ್ತೆಯ ಕಾಮಗಾರಿ ಕೈಗೆತ್ತಿಕೊಳ್ಳಲು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್) ನಿರ್ಧರಿಸಿದೆ. ಅದರಂತೆ ಉದ್ದೇಶಿತ ರಸ್ತೆಯನ್ನು ನಾಲ್ಕು ಪಥದಿಂದ ಹತ್ತು ಪಥಗಳಿಗೆ ವಿಸ್ತರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ 1.4 ಕಿ.ಮೀ. ಉದ್ದದ ಪ್ರಮುಖ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಪಕ್ಕದಲ್ಲೇ ಇರುವ ಆರು ಪಥದ ಸಮಾನಾಂತರ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಅದರಂತೆ ಜೂನ್ 10ರಿಂದ ನಿಲ್ದಾಣಕ್ಕೆ ಬರುವ ಎಲ್ಲ ವಾಹನಗಳು ನೂತನವಾಗಿ ನಿರ್ಮಿಸಲಾದ ಆರು ಪಥದ ದಕ್ಷಿಣ ಸಂಪರ್ಕ ರಸ್ತೆಯ ಮೂಲಕ ಸಂಚರಿಸಲಿವೆ. 2021ರ ಆರಂಭದಲ್ಲಿ ಮುಖ್ಯ ಸಂಪರ್ಕ ರಸ್ತೆಯಲ್ಲಿ ಸಂಚಾರ ಪುನರಾರಂಭಗೊಳ್ಳುವ ನಿರೀಕ್ಷೆ ಇದೆ. ಹೆಚ್ಚುತ್ತಿರುವ ದಟ್ಟಣೆ ಹಿನ್ನೆಲೆಯಲ್ಲಿ ಈ ವಿಸ್ತರಣೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಅಲ್ಲದೆ, ಸರಕು ಸಾಗಣೆ ಸಂಚಾರದಟ್ಟಣೆ ನಿಭಾಯಿಸಲು ಇದೇ ವರ್ಷ ಕಾರ್ಗೋ ಟರ್ಮಿನಲ್ಗೆ ಸಾಗುವ ಸೆಕಂಡರಿ ರಸ್ತೆಯನ್ನು ಕೂಡ ವಿಸ್ತರಣೆ ಮಾಡಲು ಉದ್ದೇಶಿಸಲಾಗಿದೆ ಎಂದು ಬಿಐಎಎಲ್ ಸ್ಪಷ್ಟಪಡಿಸಿದೆ
ಪ್ರಯಾಣಿಕರು ಮತ್ತು ಸರಕು ಸಾಗಣೆ ಪ್ರಮಾಣ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಷಿಪ್ರಗತಿಯಲ್ಲಿ ಹೆಚ್ಚಾಗುತ್ತಿದೆ. ಮುಂಬರುವ ವರ್ಷಗಳಲ್ಲಿ ಇದರ ಪ್ರಮಾಣ ಇನ್ನೂ ಹೆಚ್ಚಳ ಆಗುವ ಸಾಧ್ಯತೆ ಇದೆ. ಈ ದಟ್ಟಣೆಯನ್ನು ನೀಗಿಸಲು ಬಿಐಎಎಲ್ ಟರ್ಮಿನಲ್-2 ಮತ್ತು 2ನೇ ರನ್‌ವೇ ಸೇರಿದಂತೆ 13 ಸಾವಿರ ಕೋಟಿ ವೆಚ್ಚದಲ್ಲಿ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ.
ಪರ್ಯಾಯ ಮಾರ್ಗ:ವಿಮಾನ ನಿಲ್ದಾಣಕ್ಕೆ ಬರುವ ವಾಹನಗಳು ಟ್ರಂಪೆಟ್ ಇಂಟರ್‌ಚೇಂಜ್ ನಂತರ ಮೊದಲ ವೃತ್ತದಲ್ಲಿ ಬಲಕ್ಕೆ ತಿರುಗುತ್ತವೆ. ತದನಂತರ ದಕ್ಷಿಣ ಸಂಪರ್ಕ ರಸ್ತೆ ಪ್ರವೇಶಿಸಿ ಟರ್ಮಿನಲ್ ತಲುಪುತ್ತವೆ. ಅದೇ ರೀತಿ, ವಿಮಾನ ನಿಲ್ದಾಣದಿಂದ ನಿರ್ಗಮನ ಗೇಟ್‌ಗಳಿಂದ ಹೊರಬರುವ ವಾಹನಗಳು ಟರ್ಮಿನಲ್ನಿಂದ ಪ್ರಸ್ತುತ ನಿರ್ಗಮನದ ದಾರಿಯನ್ನು ಅನುಸರಿಸಬೇಕು. ಅಲ್ಲಿಂದ ದಕ್ಷಿಣ ಸಂಪರ್ಕ ರಸ್ತೆಯ ಕಡೆ ಇರುವ ಮಾರ್ಗ ವನ್ನು ಬಳಸಿ ನಿರ್ಗಮಿಸಬೇಕಾಗುತ್ತದೆ