ಬೀದರ: ದಶಕದಿಂದ ನನೆಗುದಿಗೆ ಬಿದ್ದಿರುವ ನಾಗರಿಕ ವಿಮಾನಯಾನ ಸೇವೆಯನ್ನು 2018-19ನೇ ಸಾಲಿನಲ್ಲಿ ಪ್ರಾರಂಭಿಸುವುದಾಗಿ ಭರವಸೆ ನೀಡಿದ್ದ ಜನ ಪ್ರತಿನಿಧಿಗಳ ಭರವಸೆ ಮತ್ತೆ ಹುಸಿಯಾಗಿದೆ.
2018-19ನೇ ಸಾಲಿನಲ್ಲಿ ಖಂಡಿತವಾಗಿ ವಿಮಾನ ಹಾರಾಟ ಶುರುವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಇತರೆ ಜನ ಪ್ರತಿನಿಧಿಗಳು ವಿವಿಧೆಡೆ ನಡೆದ ಕಾರ್ಯಕ್ರಮಗಳಲ್ಲಿ ದೊಡ್ಡ ಭರವಸೆಗಳನ್ನು ನೀಡಿ ಜನರಲ್ಲಿ ಹೊಸ ಕನಸು ಹುಟ್ಟಿಸಿದ್ದರು. ಆದರೆ, ನೀಡಿದ ಭರವಸೆಯಂತೆ ಜನಪ್ರತಿನಿಧಿಗಳು ಮಾತ್ರ ಕೆಲಸ ಮಾಡುತ್ತಿಲ್ಲ ಎಂಬ ಆರೋಪ ಜಿಲ್ಲೆಯ ಜನರದಾಗಿದೆ.
ಟರ್ಮಿನಲ್ ಕಟ್ಟಡ: ನಗರದ ಹೊರವಲಯದ ಚಿದ್ರಿ ಸಮೀಪದ ವಾಯು ನೆಲೆ ತರಬೇತಿ ಕೇಂದ್ರದಲ್ಲಿ ನಾಗರಿಕ ವಿಮಾನಯಾನ ಸೇವೆ ಆರಂಭಿಸುವ ನಿಟ್ಟಿನಲ್ಲಿ ಭೂಸ್ವಾಧೀನ ಇತರೆ ಕಾಮಗಾರಿಗಳಿಗೆ 2007ರಲ್ಲಿ ಸರ್ಕಾರ ಅನುಮೋದನೆ ನೀಡಿತ್ತು. ಅಂದಾಜು 3 ಕೋಟಿ ರೂ. ವೆಚ್ಚದಲ್ಲಿ ಪ್ರತ್ಯೇಕ ಟರ್ಮಿನಲ್ ಕಟ್ಟಡ ನಿರ್ಮಿಸಲಾಗಿತ್ತು.
ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರದಿಂದ 5.35 ಕೋಟಿಗೂ ಅಧಿಕ ಹಣ ಭರಿಸಲಾಗಿತ್ತು. ನಂತರ ಕಸ್ಟಮ್ ಅಧಿಕಾರಿಗಳ ಹಾಲ್, ಟ್ರಾಕ್ ಆಪರೇಟರ್ ಕೊಠಡಿ, ವಿಶ್ರಾಂತಿ ಕೋಣೆ ಹೊಂದಿರುವ ಟರ್ಮಿನಲ್ ನಿರ್ಮಿಸಲಾಗಿತ್ತು. ಆದರೆ, ಒಂದು ದಶಕದಲ್ಲಿಯೇ ಟರ್ಮಿನಲ್ ಕಟ್ಟಡ ಹಾಳಾಗಿದ್ದು, ಅನೇಕ ಅನುಮಾನಕ್ಕೆ ಕಾರಣವಾಗಿದೆ. ಬಳಕೆ ಮಾಡದ ಕಟ್ಟಡ ಹೇಗೆ ಹಾಳಾಯ್ತು ಎಂಬ ಪ್ರಶ್ನೆ ಜನರನ್ನು ಕಾಡುತ್ತಿದ್ದು, ಈ ಕುರಿತು ತನಿಖೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.
ರಾಜಕೀಯಕ್ಕೆ ಸೀಮಿತ: ಪ್ರಸಕ್ತ ವರ್ಷದಲ್ಲಿ ವಿಮಾನ ಹಾರಾಟ ಶುರುವಾಗುತ್ತದೆ ಎಂದು ಹೇಳುತ್ತಿದ್ದ ಜಿಲ್ಲೆಯ ಜನ ಪ್ರತಿನಿಧಿಗಳು ರಾಜಕೀಯ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಚುನಾಯಿತ ಜನಪ್ರತಿನಿಧಿಗಳು ಜಿಲ್ಲೆಯ ಜನರಿಗೆ ಹಗಲ ಕನಸು ತೋರಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯದಿಂದ ಕೆಲಸ ಮಾಡಿದ್ದರೆ ಜಿಲ್ಲೆಯಲ್ಲಿ ಕೂಡ ಸಾರ್ವಜನಿಕರಿಗೆ ವಿಮಾನ ಸೇವೆ ದೊರೆಯುತ್ತಿತ್ತು. ಜನ ಪ್ರತಿನಿಧಿಗಳು ಪ್ರಾಮಾಣಿಕತೆಯಿಂದ ಸರ್ಕಾರದ ಮೇಲೆ ಒತ್ತಡ ಹೇರಿದ್ದರೆ ಈ ವರೆಗೆ ತಾತ್ಕಾಲಿಕ ವಿಮಾನ ಸೇವೆ ಆರಂಭಗೊಳ್ಳುತ್ತಿತ್ತು. ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಒಂದು ದಶಕದಿಂದ ಯೋಜನೆ ನನೆಗುದಿಗೆ ಬಿದ್ದಿದೆ ಎಂಬುದು ಜನರ ಮಾತು.
ವಿಮಾನಯಾನಕ್ಕೆ ಬೇಕಿರುವ ಭೂಸ್ವಾ ಧೀನ ಪ್ರಕ್ರಿಯೆಗಳು ನಡೆದಿದೆ. ಜಿಎಂಆರ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವ ಪ್ರಕ್ರಿಯೆ ಸರ್ಕಾರ ಮಟ್ಟದಲ್ಲಿ ಇದೆ. ಡಾ| ಎಚ್.ಆರ್. ಮಹಾದೇವ, ಜಿಲ್ಲಾಧಿಕಾರಿ ಬಳಕೆಯಾಗದ ಬೀದರ್ ನಾಗರಿಕ ವಿಮಾನಯಾನ ಟರ್ಮಿನಲ್ ಕಟ್ಟಡ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ 32 ಕೋಟಿ ಅನುದಾನ ಘೊಷಣೆ ಮಾಡಲಾಗಿದೆ. ವಿಮಾನಯಾನ ಶುರು ಮಾಡಬೇಕಾದರೆ ಹೆಚ್ಚು ಭೂಮಿ ಬೇಕು ಎಂದು ಜಿಎಂಆರ್ ಕಂಪನಿ ಜಿಲ್ಲಾಡಳಿತಕ್ಕೆ 8 ತಿಂಗಳ ಹಿಂದೆ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಸುತ್ತಲ್ಲಿನ 13.03 ಎಕರೆ ಭೂಮಿಯನ್ನು ಜಿಲ್ಲಾಡಳಿತ ಗುರುತಿಸಿದೆ. ಇದಕ್ಕಾಗಿ ಈಗಾಗಲೇ ಸರ್ಕಾರ 15 ಕೋಟಿ ಅನುದಾನ ಕೂಡ ಬಿಡುಗಡೆ ಮಾಡಿದೆ. ಮುಂದಿನ ಒಂದು ವಾರದಲ್ಲಿ ಭೂಮಿ ಖರೀದಿ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ.
ಬಲಭೀಮ ಕಾಂಬಳೆ, ಯೋಜನಾಧಿಕಾರಿ
ದುರ್ಯೋಧನ ಹೂಗಾರ