ಹೊಸದಿಲ್ಲಿ : ನಗರದಲ್ಲಿನ ವಾಯು ಮಾಲಿನ್ಯ ಪೀಡೆಯನ್ನು ತಡೆಯುವಲ್ಲಿ ವಿಫಲವಾಗಿರುವ ದಿಲ್ಲಿ ಸರಕಾರಕ್ಕೆ ರಾಷ್ಟ್ರೀಯ ಹಸಿರು ಮಂಡಳಿ (NGT) ಇಂದು ಸೋಮವಾರ 25 ಕೋಟಿ ರೂ. ದಂಡ ವಿಧಿಸಿದೆ.
ಈ ದಂಡವನ್ನು ದಿಲ್ಲಿ ಸರಕಾರದ ಅಧಿಕಾರಿಗಳ ಸಂಬಳದಿಂದ ಮತ್ತು ವಾಯು ಮಾಲಿನ್ಯ ಎಸಗುತ್ತಿರುವ ಜನರಿಂದ ವಸೂಲಿ ಮಾಡಿ ಪಾವತಿಸಬೇಕು; ಇದಕ್ಕೆ ವಿಫಲವಾದಲ್ಲಿ ದಿಲ್ಲಿ ಸರಕಾರ ಪ್ರತೀ ತಿಂಗಳೂ ಹತ್ತು ಕೋಟಿ ರೂ. ದಂಡವನ್ನು ಪಾವತಿಸಬೇಕಾಗುವುದು ಎಂದು ಎನ್‌ಜಿಟಿ ಹೇಳಿದೆ.
ದಿಲ್ಲಿ ಮಾತ್ರವಲ್ಲದೆ ಆಸುಪಾಸಿನ ಗುರುಗ್ರಾಮ, ನೋಯ್ಡಾ, ಫರೀದಾಬಾದ್ ಮತ್ತು ಗಾಜಿಯಾಬಾದ್ ನ ಜನರು ವಿಶ್ವ ಆರೋಗ್ಯ ಸಂಸ್ಥೆಯ ನಿಗದಿಸಿರುವ ಸುರಕ್ಷಿತ ಮಟ್ಟಕ್ಕಿಂತ ಎಷ್ಟೋ ಅಧಿಕ ಮಟ್ಟದ ಅಸುರಕ್ಷಿತ ಗಾಳಿಯನ್ನು ಸೇವಿಸುತ್ತಿದ್ದಾರೆ. ಕಳೆದ ಅನೇಕ ವಾರಗಳಿಂದ ರಾಷ್ಟ್ರ ರಾಜಧಾನಿ ವಲಯದ ಹೆಚ್ಚಿನ ಭಾಗಗಳ ಜನರು 2.5 ಪಿಎಂ ಮಟ್ಟಕ್ಕಿಂತ 300 ಪಟ್ಟು ಹೆಚ್ಚು (ಇದು 60ರ ಸುರಕ್ಷಿತ ಮಟ್ಟಕ್ಕಿಂತ ಹಲವು ಪಟ್ಟ ಅಧಿಕ) ಅಸುರಕ್ಷಿತ ಗಾಳಿಯನ್ನು ಸೇವಿಸುತ್ತಿದ್ದಾರೆ.
ವಾಯು ಮಾಲಿನ್ಯ ನಿಯಂತ್ರಣ ಅಥವಾ ತಡೆಗೆ ಬಹಳಷ್ಟು ಚರ್ಚೆ, ವಿಶ್ಲೇಷಣೆ, ಸಲಹೆ ಸೂಚನೆಗಳು ಕೇಳಿ ಬಂದಿರುವ ಹೊರತಾಗಿಯೂ ಪ್ರಾಥಮಿಕ ಮಟ್ಟದಲ್ಲಿ ಯಾವುದೇ ಕೆಲಸ ಈ ವರೆಗೂ ನಡೆದಿಲ್ಲ. ಇದರಿಂದ ವಾಯು ಮಾಲಿನ್ಯ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲೆ ಇದೆ. ರಾಜಕೀಯ ಪಕ್ಷಗಳು ಕೇವಲ ಆರೋಪ-ಪ್ರತ್ಯಾರೋಪಗಳ ಕೆಸರೆರೆಚಾಟದಲ್ಲಿ ತೊಡಗಿವೆ ಎಂದು ವರದಿಗಳು ತಿಳಿಸುತ್ತವೆ.
ದಿಲ್ಲಿ ವಾಯ ಮಾಲಿನ್ಯ ಸಮಸ್ಯೆ ಈ ಮಟ್ಟಕ್ಕೇರಲು ನಿಷ್ಕ್ರಿಯ ಅರವಿಂದ ಕೇಜ್ರಿವಾಲ್ ಸರಕಾರವೇ ಕಾರಣ ಎಂದು ಬಿಜೆಪಿಯ ದಿಲ್ಲಿ ಮುಖ್ಯಸ್ಥ ಮನೋಜ್ ತಿವಾರಿ ಹೇಳುತ್ತಾರೆ.
ಆದರೆ ವಾಯು ಮಾಲಿನ್ಯ ಸಮಸ್ಯೆ ಬಿಗಡಾಯಿಸಲು ದಿಲ್ಲಿ ಆಸುಪಾಸಿನ ಪ್ರದೇಶಗಳಲ್ಲಿನ ರೈತರು ಬೆಳೆ ಅವಶೇಷಗಳಿಗೆ ಬೆಂಕಿ ಕೊಡುತ್ತಿರುವುದೇ ಕಾರಣ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಈಗ ಬೆಳೆ ಅವಶೇಷ ಸುಡುವ ಋತು ಮುಗಿದಿರುವ ಕಾರಣ ಜನರು ರಾಜಧಾನಿಯಲ್ಲಿನ ವಾಯು ಮಟ್ಟ ಕಳಪೆಯಾಗಿರುವುದಕ್ಕೆ ಏನು ಕಾರಣ ಎಂದು ಜನರು ದಿಲ್ಲಿ ಸಿಎಂ ಅವರನ್ನೇ ಪ್ರಶ್ನಿಸುತ್ತಿದ್ದಾರೆ.