Advertisement

4 ವರ್ಷಗಳಿಂದ ಉಡುಪಿ ಜಿಲ್ಲೆಗೆ ಕೇಳಿಸದ ಆಕಾಶವಾಣಿ

05:50 PM May 20, 2019 | sudhir |

ಉಡುಪಿ: ಮಧುರವಾದ ಗಾಯನ, ಕೃಷಿಕರು- ಯುವಕರು- ಮಹಿಳೆಯರು- ಮಕ್ಕಳು ಹೀಗೆ ವಿವಿಧ ವರ್ಗಗಳ ಜನರಿಗೆ ಮುದ ನೀಡುತ್ತಿದ್ದ ಮಂಗಳೂರು ಆಕಾಶವಾಣಿ ಉಡುಪಿ ಜಿಲ್ಲೆಯ ಮಟ್ಟಿಗೆ ಮರೀಚಿಕೆಯಾಗಿ ನಾಲ್ಕು ವರ್ಷಗಳು ಕಳೆದಿವೆ.

Advertisement

ಪ್ರಧಾನಿ ನರೇಂದ್ರ ಮೋದಿಯವರ “ಮನ್‌ ಕೀ ಬಾತ್‌’ ಆರಂಭವಾದ ಬಳಿಕ ಆಕಾಶವಾಣಿಗೆ ಮತ್ತೆ ಬೇಡಿಕೆ ಶುರುವಾಗಿತ್ತು. ಎಫ್ಎಂ. ಯುಗ ಆರಂಭವಾದ ಮೇಲೆ ಕಾರುಗಳಲ್ಲೂ ರೇಡಿಯೋ ಕೇಳುವವರ ಸಂಖ್ಯೆ ಹೆಚ್ಚಿದೆ.

ಬೆಂಗಳೂರಿನಂತಹ ನಗರಗಳಲ್ಲಿ ಎಫ್.ಎಂ. ರೇಡಿಯೋ ಸಾಕಷ್ಟು ಜನಪ್ರಿಯವೂ ಆಗಿದೆ. ಈಗ ಲೋಕಸಭಾ ಚುನಾವಣೆ ಫ‌ಲಿತಾಂಶ ಹೊರ ಬೀಳಲು ದಿನಗಣನೆ ಆರಂಭವಾಗಿದೆ. ಆದರೆ ಚುನಾವಣೆ ಫ‌ಲಿತಾಂಶದಂತಹ ಕುತೂಹಲಗಳನ್ನು ಮಂಗಳೂರು ಆಕಾಶವಾಣಿ ಮೂಲಕ ಆಲಿಸಲು ಜಿಲ್ಲೆಯ ಜನರಿಗೆ ಸಾಧ್ಯವಾಗುತ್ತಿಲ್ಲ.

ಪರ್ಯಾಯ ವ್ಯವಸ್ಥೆ ಇಲ್ಲ
ಇದಕ್ಕೆ ಕಾರಣ ಬ್ರಹ್ಮಾವರದ ಉಪ ಕೇಂದ್ರದಲ್ಲಿದ್ದ 100 ಮೀ. ಎತ್ತರದ ಟವರ್‌ 2015ರ ಎಪ್ರಿಲ್‌ 21ರಂದು ಕುಸಿದು ಬಿದ್ದದ್ದು. ಅನಂತರ ಮತ್ತೆ ಎದ್ದು ನಿಲ್ಲಿಸಲಿಲ್ಲ. ಕರಾವಳಿಯ ಮೂಲ್ಕಿಯಿಂದ ಬೈಂದೂರು ಶಿರೂರು ವರೆಗೆ ಅಂದರೆ ಸುಮಾರು 50 ಕಿ.ಮೀ. ಸುತ್ತಳತೆಯಲ್ಲಿ ಮಂಗಳೂರು ಆಕಾಶವಾಣಿಯ ಕೇಳುಗರಿಗೆ ಬಹುತೇಕ ಲಭ್ಯವಿಲ್ಲ. ಕುಸಿದು ಬಿದ್ದ ಟವರ್‌ನ್ನು ಮತ್ತೆ ಎತ್ತಬೇಕಾದರೆ ದುಬಾರಿ. ಇದು ಮೀಡಿಯಂ ವೇವ್‌ ತಂತ್ರಜ್ಞಾನ ಆಧಾರಿತವಾದುದು. ಈಗ ಇಂತಹ ರೇಡಿಯೋಗಳೂ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಇದರ ಬದಲು ಈಗ ಚಾಲ್ತಿಯಲ್ಲಿರುವ ಎಫ್ಎಂ ರೇಡಿಯೋ ತಂತ್ರಜ್ಞಾನದ ಟ್ರಾನ್ಸ್‌ ಮಿಟರ್‌ ಅಳವಡಿಸಿದರೆ ಉಡುಪಿ ಜಿಲ್ಲೆಗೆ ಮಂಗಳೂರು ಆಕಾಶವಾಣಿಯ ಗತಕಾಲದ ವೈಭವ ಮರುಕಳಿಸೀತು.

ಸ್ಥಳೀಯರ ಬೇಡಿಕೆಯಂತೆ ಸ್ಥಳೀಯ ಸಂಸದೆ ಶೋಭಾ ಕರಂದ್ಲಾಜೆಯವರು ಎಫ್ಎಂ ಆ್ಯಂಟೆನಾ ಸ್ಥಾಪಿಸಲು ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆದು ಒತ್ತಾಯಿಸಿದ್ದರು. ಅಲ್ಲಿಂದ ಪ್ರಸಾರ ಭಾರತಿ ಕಾರ್ಯಾಲಯಕ್ಕೆ ಕಡತ ಚಲಿಸಿತು. ಅಲ್ಲಿಂದ ಮುಂದೆ ಚಲಿಸಲೇ ಇಲ್ಲ. ಈಗ ಸ್ಥಳೀಯರು ಎಫ್ಎಂ ಟವರ್‌ ಸ್ಥಾಪಿಸಲು ಹಕ್ಕೊತ್ತಾಯ ಮಂಡಿಸುತ್ತಿದ್ದು ಪ್ರಧಾನಿಯವರಿಗೂ ಪತ್ರ ಬರೆದಿದ್ದಾರೆ.

Advertisement

ಟ್ರಾನ್ಸ್‌ಮಿಟರ್‌ ಸ್ಥಾಪನೆಗೆ ಪ್ರಸ್ತಾವ
ಮೀಡಿಯಂ ವೇವ್‌ ತಂತ್ರಜ್ಞಾನದ ಟವರ್‌ ಸ್ಥಾಪನೆಗಿಂತ ಎಫ್ಎಂ ಟ್ರಾನ್ಸ್‌ಮಿಟರ್‌ ಸ್ಥಾಪನೆ ಸೂಕ್ತ. ನಮ್ಮ ಕಡೆಯಿಂದ ಎಫ್ಎಂ ಟ್ರಾನ್ಸ್‌ಮಿಟರ್‌ ಸ್ಥಾಪನೆಗೆ ಪ್ರಸ್ತಾವನೆ ಹೋಗಿದ್ದು ಸರಕಾರ ನಿರ್ಧಾರ ತಳೆಯಬೇಕಾಗಿದೆ.
– ಉಷಾಲತಾ, ನಿಲಯ ಮುಖ್ಯಸ್ಥರು, ಮಂಗಳೂರು ಆಕಾಶವಾಣಿ

ಹೊಸ ಸರಕಾರ ಬಂದ ಬಳಿಕ ಮತ್ತೆ ಫಾಲೋ ಅಪ್‌
ಬ್ರಹ್ಮಾವರ ಆಕಾಶವಾಣಿಯ ಟವರ್‌ ಸ್ಥಾಪಿಸಲು ಹಿಂದೆ ವೆಂಕಯ್ಯ ನಾಯ್ಡು ಸಚಿವರಾಗಿದ್ದಾಗ, ಅನಂತರ ರವಿಶಂಕರ ಪ್ರಸಾದ್‌, ರಾಜ್ಯವರ್ಧನ ಸಿಂಗ್‌ ರಾಥೋಡ್‌ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದೆ. ಅವರು ಹಣಕಾಸು ಮತ್ತು ಜನರ ಬೇಡಿಕೆ ಕೊರತೆಯನ್ನು ಮುಂದಿಟ್ಟಿದ್ದರು. ಈಗ ಹೊಸ ಸರಕಾರ ಬಂದ ಬಳಿಕ ಮತ್ತೆ ಫಾಲೋ ಅಪ್‌ ಮಾಡುತ್ತೇನೆ.
– ಶೋಭಾ ಕರಂದ್ಲಾಜೆ, ಸಂಸದೆ, ಉಡುಪಿ -ಚಿಕ್ಕಮಗಳೂರು ಕ್ಷೇತ್ರ

ಶ್ರೋತೃವರ್ಗಕ್ಕೆ ನ್ಯಾಯ ಸಿಗಲಿ
ನಾವು ರೇಡಿಯೋ ಕೇಳುಗರ ಸಂಘವನ್ನು ರಚಿಸಲು ನಿರ್ಧರಿಸಿದ್ದೇವೆ. ಹೊಸ ಟವರ್‌ ಸ್ಥಾಪನೆ ಮಾಡಿ ಬ್ರಹ್ಮಾವರ ಕೇಂದ್ರವನ್ನು ಮತ್ತೆ ಚಾಲ್ತಿಗೆ ತರಬೇಕು. ಈಗಾಗಲೇ ನಾಲ್ಕು ವರ್ಷ ವಿಳಂಬಿಸಿದ್ದು ಸರಿಯಲ್ಲ. ನಾವೀಗ ಪ್ರಧಾನ ಮಂತ್ರಿಯವರಿಗೂ ಪತ್ರ ಬರೆದು ಉಡುಪಿ ಜಿಲ್ಲೆಯ ಆಕಾಶವಾಣಿ ಶ್ರೋತೃವರ್ಗಕ್ಕೆ ನ್ಯಾಯ ಕೊಡಿಸಲು ಒತ್ತಾಯಿಸಿದ್ದೇವೆ.
– ಚಂದ್ರಗುಪ್ತ ಖಾರ್ವಿ, ಅಧ್ಯಕ್ಷರು, ಪ್ರಕಾಶ್‌ ಪಡಿಯಾರ್‌, ಸದಸ್ಯ, ಸಮಾಜ ಸೇವಾ ವೇದಿಕೆ, ಮರವಂತೆ

Advertisement

Udayavani is now on Telegram. Click here to join our channel and stay updated with the latest news.

Next