ದುಬೈ: ಇಲ್ಲಿಂದ ಕೊಚ್ಚಿಗೆ ಬರಬೇಕಾಗಿದ್ದ ಏರ್ ಇಂಡಿಯಾ ವಿಮಾನವೊಂದು ಕಳೆದ 24 ಗಂಟೆಗಳಿಂದ ಇಲ್ಲಿನ ವಿಮಾನ ನಿಲ್ದಾಣದಲ್ಲೇ ನಿಲುಗಡೆಯಾಗಿದೆ. ಎ1934 ಸಂಖ್ಯೆಯ ಈ ವಿಮಾನದಲ್ಲಿ 200 ಜನ ಪ್ರಯಾಣಿಕರಿದ್ದರು, ಈ ವಿಮಾನ ಕೊಚ್ಚಿಗೆ ಆಗಮಿಸುವುದಿತ್ತು.
ಈ ವಿಮಾನ ಶನಿವಾರ ಮಧ್ಯಾಹ್ನ 1.30ಕ್ಕೆ ದುಬೈ ವಿಮಾನ ನಿಲ್ದಾಣದಿಂದ ಹೊರಡಬೇಕಿತ್ತು ಆದರೆ ಕೊನೇ ಕ್ಷಣದಲ್ಲಿ ಈ ವಿಮಾನದಲ್ಲಿ ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡ ಕಾರಣ ತುರ್ತಾಗಿ ಹಾರಾಟವನ್ನು ರದ್ದುಗೊಳಿಸಬೇಕಾಯಿತು.
ಆದರೆ ಘಟನೆ ನಡೆದು 24 ಗಂಟೆಗಳು ಕಳೆದರೂ ಇನ್ನೂ ಎ1934 ವಿಮಾನ ಇನ್ನೂ ದುಬೈ ನಿಲ್ದಾಣದಿಂದ ಹೊರಟಿಲ್ಲ. ಈ ವಿಮಾನದಲ್ಲಿದ್ದ ಪ್ರಯಾಣಿಕರಿಗೆಲ್ಲರಿಗೂ ಸದ್ಯಕ್ಕೆ ಹೊಟೇಲೊಂದರಲ್ಲಿ ವ್ಯವಸ್ಥೆಮಾಡಲಾಗಿದೆ.
ಈ ಕುರಿತಾಗಿ ಏರ್ ಇಂಡಿಯಾ ಯಾನ ಸಂಸ್ಥೆಯ ವಕ್ತಾರರು ಪತ್ರಿಕಾ ಪ್ರಕಟನೆಯೊಂದನ್ನು ಹೊರಡಿಸಿದ್ದಾರೆ. ‘ವಿಮಾನದಲ್ಲಿ ತಾಂತ್ರಿಕ ತೊಂದರೆಯೊಂದು ಕಾಣಿಸಿಕೊಂಡಿದ್ದು ನಾವದನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಇದಕ್ಕಾಗಿ ಭಾರತದಿಂದ ತಂತ್ರಜ್ಞರ ಸುಸಜ್ಜಿತ ತಂಡ ಆಗಮಿಸಬೇಕಿದೆ. ಈ ತಾಂತ್ರಿಕ ಅಡಚಣೆ ನಿವಾರಣೆಗೊಂಡ ಬಳಿಕವಷ್ಟೇ ವಿಮಾನ ಹೊರಡುವ ಸಮಯವನ್ನು ಪ್ರಕಟಿಸಲಾಗುವುದು. ಸದ್ಯಕ್ಕೆ ಎಲ್ಲಾ ಪ್ರಯಾಣಿಕರನ್ನು ಹೊಟೇಲ್ ವ್ಯವಸ್ಥೆಯಲ್ಲಿರಿಸಲಾಗಿದೆ ಮತ್ತು ಅವರ ಕಾಳಜಿಯನ್ನು ವಹಿಸಲಾಗುತ್ತಿದೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖ ಮಾಡಲಾಗಿದೆ.
ಇನ್ನು ಆದಿತ್ಯವಾರ ರಾತ್ರಿ 7.30ಕ್ಕೆ ವಿಮಾನ ಕೊಚ್ಚಿಗೆ ಹೊರಡಲಿದೆ ಎಂದು ಪ್ರಯಾಣಿಕರಿಗೆ ಹೇಳಲಾಗಿದ್ದರೂ ಇದು ತಾಂತ್ರಿಕ ವಿಲೇವಾರಿಗೆ ಒಳಪಟ್ಟಿರುತ್ತದೆ ಎಂದು ತಿಳಿದುಬಂದಿದೆ.